
ಮಂಗಳೂರು, ಮೇ 12: ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡುವ ಹಕ್ಕನ್ನು ಇದೇ ಮೊದಲ ಬಾರಿಗೆ ಮಂಗಳಮುಖಿಯರು ಪಡೆದಿದ್ದಾರೆ. ಮಂಗಳೂರಿನಲ್ಲಿ ಸುಮಾರು 14 ಮಂದಿ ಮಂಗಳಮುಖಿಯರು ಈ ಬಾರಿ ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ.

ದ.ಕ. ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರದಲ್ಲಿ 100 ಮಂಗಳಮುಖಿಯರು ಮತದಾನಕ್ಕೆ ಅವಕಾಶ ಪಡೆದಿದ್ದು, ಆ ಪೈಕಿ ಸುಮಾರು 14 ಮಂದಿ ಶನಿವಾರ ಬೆಳಗ್ಗೆ ನಗರದ ಮಿಲಾಗ್ರಿಸ್ ಮತಗಟ್ಟೆಯಲ್ಲಿ ಮತದಾನಗೈದರು.ಬಲು ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿದ ಮಂಗಳಮುಖಿಯರು ಸಾಲಿನಲ್ಲೇ ನಿಂತು ಮತ ಚಲಾಯಿಸಿದರು. ಈವರೆಗೆ ಮತದಾನದಿಂದ ದೂರವೆ ಉಳಿದಿದ್ದ ಮಂಗಳಮುಖಿಯರು ಇದೇ ಪ್ರಥಮ ಬಾರಿಗೆ ಮತಚಲಾಯಿಸಿದರು.

‘ನಾವು ಮತದಾನ ಮಾಡಲು ಬೇಡಿಕೆ ಸಲ್ಲಿಸುತ್ತಲೇ ಇದ್ದೆವು. ಆದರೆ, ಅವಕಾಶ ಸಿಕ್ಕಿರಲಿಲ್ಲ. ಇದೇ ಮೊದಲ ಬಾರಿಗೆ ಈ ಒಂದು ಅವಕಾಶ ಸಿಕ್ಕಿದೆ. ಹಾಗಾಗಿ ನಮಗೆ ಇಂದು ಸ್ವಾತಂತ್ರ ಸಿಕ್ಕಿದೆ ಎನ್ನಬಹುದು. ಈ ಸಂತಸದ ಕ್ಷಣವನ್ನು ನಾವು ಎಂದೂ ಕೂಡಾ ಮರೆಯಲು ಸಾಧ್ಯವಿಲ್ಲ’ ಎಂದು ಓರ್ವ ಮಂಗಳಮುಖಿ ಈ ಸಂದರ್ಭ ಮಾಧ್ಯಮಕ್ಕೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.ಇದೇ ವೇಳೆ ಮೊದಲ ಬಾರಿ ಮತದಾನ ಮಾಡಲು ಅವಕಾಶ ಸಿಕ್ಕಿರುವುದಕ್ಕೆ ಅವರೆಲ್ಲರೂ ಸಂತಸ ವ್ಯಕ್ತಪಡಿಸಿದ್ದಾರೆ.

ಬೆಳ್ತಂಗಡಿ ಕ್ಷೇತ್ರದಲ್ಲಿ 1, ಮೂಡುಬಿದಿರೆಯಲ್ಲಿ 13, ಮಂಗಳೂರು ನಗರ ಉತ್ತರದಲ್ಲಿ 8, ಮಂಗಳೂರು ನಗರ ದಕ್ಷಿಣದಲ್ಲಿ 56, ಮಂಗಳೂರು ಕ್ಷೇತ್ರದಲ್ಲಿ 13, ಬಂಟ್ವಾಳದಲ್ಲಿ 6, ಪುತ್ತೂರಿನಲ್ಲಿ 3 ಮಂಗಳಮುಖಿಯರು ಮತದಾನಕ್ಕೆ ಅರ್ಹತೆ ಪಡೆದಿದ್ದಾರೆ. ಸುಳ್ಯದಲ್ಲಿ ಮಂಗಳಮುಖಿ ಮತದಾರರಿಲ್ಲ.
ಸಕಲ ಸರ್ಕಾರಿ ಸೌಲಭ್ಯದ ಅವಕಾಶ :
ಕರ್ನಾಟಕದಲ್ಲಿ 5055 ತೃತೀಯ ಲಿಂಗಿ ಮತದಾರರು ಇದ್ದಾರೆ. ಹೆಚ್ಚಿನ ಮತದಾರರು ಮೈಸೂರಿನಲ್ಲಿದ್ದಾರೆ. ಮಂಗಳಮುಖಿಯರನ್ನು ತೃತಿಯ ಲಿಂಗಿಗಳು ಎಂದು ಸುಪ್ರೀಂಕೋರ್ಟ್ ಪರಿಗಣಿಸಿದೆ. ಈ ಮೂಲಕ ಮಂಗಳಮುಖಿಯರಿಗೂ ಸಕಲ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ.
Comments are closed.