ಉಡುಪಿ: ವಿಧಾನಸಭಾ ಚುನಾವಣೆ 2018 ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಶನಿವಾರ ನಡೆದ ಮತದಾನ ಶಾಂತಿಯುತವಾಗಿತ್ತು, ಬೆಳಗ್ಗೆಯಿಂದಲೇ ಮತದಾನ ಮಾಡಲು ಜನರು ಆಸಕ್ತಿ ತೋರಿದ್ದರಿಂದ ಎಲ್ಲಾ ಮತಗಟ್ಟೆಗಳಲ್ಲಿ ಮತದಾರರ ಸರತಿಯ ಸಾಲು ಸಾಮಾನ್ಯವಾಗಿತ್ತು.
ಕಾಪು ವಿಧಾನಸಭಾ ವ್ಯಾಪ್ತಿಯ ಪೆರ್ಡೂರು ಗ್ರಾಮದ ಮತಗಟ್ಟೆಯಲ್ಲಿ ಬೆಳಗ್ಗೆ 10 ಗಂಟೆಯ ವೇಳಗೆ ಮತದಾನ ಪ್ರಕ್ರಿಯೆ ಚುರುಕುಗೊಂಡಿದ್ದು, 78 ವರ್ಷದ ಕಿಟ್ಟಿ ಮರಕಾಲ್ತಿ ತಮ್ಮ ಸಮಾನ ವಯಸ್ಕರೊಂದಿಗೆ ಬಂದು ಮತದಾನ ಮಾಡಿದರು, ಈ ವರೆಗೆ ನಡೆದ ಎಲ್ಲಾ ಚುನಾವಣೆಗಳಲ್ಲೂ ತಮ್ಮ ಹಕ್ಕು ಚಲಾಯಿಸಿರುವುದಾಗಿ ಅವರು ಹೇಳಿದರು. ಬಿಎಂ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟೆಯಲ್ಲಿ 96 ವರ್ಷದ ಗಿರಿಜ ಅವರು ತಮ್ಮ ಸೊಸೆಯ ಸಹಾಯದಿಂದ ಮತಗಟ್ಟೆಗೆ ಬಂದು ಮತ ಚಲಾಯಿಸಿದರು , 21 ವರ್ಷದ ಮಹೇಶ್ ಮೊದಲ ಬಾರಿಗೆ ಮತ ಚಲಾಯಿಸುವ ಅವಕಾಶ ಪಡೆದಿದ್ದು, ತನ್ನ ಊರಿನ ರಸ್ತೆ ಅಭಿವೃದ್ಧಿಗಾಗಿ ಉತ್ತಮ ಅಭ್ಯರ್ಥಿಗೆ ತಮ್ಮ ಮತ ಚಲಾಯಿಸುವುದಾಗಿ ಹೇಳಿದರು. ದೈಹಿಕ ಅಶಕ್ತ ನಾರಾಯಣ ಶೆಟ್ಟಿ ಮನೆಯವರ ಸಹಾಯದಿಂದ ಬಂದು ಮತ ಚಲಾಯಿಸಿದರು.

ಕಾರ್ಕಳ ವಿಧಾನಸಭಾ ಕ್ಷೇತ್ರದ ಹೆಬ್ರಿ ಸಮಾಜ ಮಂದಿರದಲ್ಲಿ ಬುಡಕಟ್ಟು ಮತಗಟ್ಟೆ ತೆರೆಯಲಾಗಿದ್ದು, ಮತಗಟ್ಟೆಯನ್ನು ಆಕರ್ಷಕ ರೀತಿಯಲ್ಲಿ ಸಿಂಗರಿಸಲಾಗಿದ್ದಿತು. ಈ ಮತಗಟ್ಟೆಯಲ್ಲಿ ಬಡಾಗುಡ್ಡೆ ಗ್ರಾಮದ , ವಾತ್ಸಲ್ಯ, ಶ್ವೇತಾ , ಜಯಂತಿ ಎಂಬ ಮೂವರು ಯುವತಿಯರು ಪ್ರಥಮ ಬಾರಿಗೆ ಮತದಾನ ಮಾಡಿ ಸಂಭ್ರಮಿಸಿದರು.
ನಕ್ಸ್‌ಲ್ ಪೀಡಿತ ಸೋಮೇಶ್ವರ ಮತಗಟ್ಟೆಯಲ್ಲಿ ಬಿಎಸ್‌ಎಫ್. ಯೋಧರಿಂದ ಮತಕೇಂದ್ರಕ್ಕೆ ಸೂಕ್ತ ಭದ್ರತೆ ಒದಗಿಸಲಾಗಿದ್ದು, ಮತದಾರರು ಉತ್ಸಾಹದಿಂದ ಮತದಾನದಲ್ಲಿ ಭಾಗಹಿಸಿದ್ದರು. ರಾಜೀವಿ ಶೆಟ್ಟಿ ಎಂಬ ದೈಹಿಕ ಅಶಕ್ತರು ವೀಲ್ ಚೇರ್ ನಲ್ಲಿ ಬಂದು ಮತ ಚಲಾಯಿಸಿದರು. 11.30 ರ ವೇಳಗೆ ಈ ಮತಗಟ್ಟೆಯಲ್ಲಿ 45% ಮತದಾನ ನಡೆದಿದ್ದಿತು.
ಕುಂದಾಪುರ ವಿಧಾನಸಭಾ ವ್ಯಾಪ್ತಿಯ ಕೊಂಜಾಡಿ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಬಿಸಿಲಿನಲ್ಲಿ ಮತಗಟ್ಟೆಗೆ ದೂರದಿಂದ ಬರುವ ಮತದಾರರ ದಾಹ ತಣಿಸಲು ಬಿದ್ಕಲ್ ಕಟ್ಟೆ ಪದವಿ ಪೂರ್ವ ಕಾಲೇಜಿನ ಮತಗಟ್ಟೆಯಲ್ಲಿ ಸುಶ್ಮಿತಾ ಶೆಟ್ಟಿ ಪ್ರಥಮ ಬಾರಿಗೆ ಮತದಾನ ಮಾಡಿ ಸಂಭ್ರಮಿಸಿದರು.
ಕುಂದಾಪುರ ವಿಧಾನಸಭಾ ವ್ಯಾಪ್ತಿಯ ತೆಕ್ಕಟೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ವಿಕಲಚೇತನರ ಮತಗಟ್ಟೆ ತೆರೆಯಲಾಗಿದ್ದು, ಈ ಮತಗಟ್ಟೆಯಲ್ಲಿ 22 ಮಂದಿ ವಿಕಲಚೇತನ ಮತದಾರರಿದ್ದು, 4 ಮಂದಿ ವಿಕಲಚೇತನ ಮತಗಟ್ಟೆ ಅಧಿಕಾರಿಗಳು ಇಲ್ಲಿ ಕಾರ್ಯ ನಿರ್ವಹಿಸಿದರು, ಈ ಮತಗಟ್ಟೆಯಲ್ಲಿ ವಿಕಲಚೇತನರಿಗೆ , ವಿಕಲಚೇತನ ಸ್ನೇಹಿ ಟಾಯ್ಲೆಟ್, ರ್‍ಯಾಂಪ್, ವೀಲ್ ಚೇರ್, ವಾಕರ್, ವಾಕಿಂಗ್ ಸ್ಟಿಕ್ ವ್ಯವಸ್ಥೆ ಮಾಡಲಾಗಿತ್ತು, ಜಯರತ್ನ ಎಂಬ ದೈಹಿಕ ಸಮಸ್ಯೆಯುಳ್ಳ ವಿಕಲ ಚೇತನ ಪುರ್ನವಸತಿ ಕಾರ್ಯಕರ್ತೆ ಸಹಕರಿಸುತ್ತಿದ್ದರು, ತುರ್ತು ಅಗತ್ಯತೆಗಾಗಿ ಅಂಬುಲೆನ್ಸ್ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಸಹ ಇಲ್ಲಿ ಕಾರ್ಯ ನಿರ್ವಹಿಸಿದರು. ಮಧ್ಯಾಹ್ನ 1.30 ರ ವೇಳಗೆ ಇಲ್ಲಿ 22 ವಿಕಲಚೇತನರಲ್ಲಿ 16 ಮಂದಿ ಮತ ಚಲಾಯಿಸಿದ್ದರು.
ಉಡುಪಿಯ ಕ್ರಿಶ್ಚಿಯನ್ ಪ್ರೌಢಸಾಲೆ ಮತ್ತು ಸೈಂಟ್ ಮೇರಿಸ್ ಶಾಲೆಯಲ್ಲಿ ಮಹಿಳೆ ಮತದಾರರಿಗೆ ಪಿಂಕ್ ಮತಗಟ್ಟೆಗಳನ್ನು ತೆರೆಯಲಾಗಿದ್ದು, ಮಹಿಳಾ ಸಿಬ್ಬಂದಿಗಳು ಇಲ್ಲಿ ಕಾರ್ಯ ನಿರ್ವಹಿಸಿದರು. ಈ ಮತಕೇಂದ್ರದಲ್ಲಿ ಪ್ರಥಮ ಬಾರಿಗೆ ಮತ ಚಲಾಯಿಸುವ ಮಹಿಳಾ ಮತದಾರರಿಗೆ ನೆನಪಿನ ಕಾಣಿಕೆ ನೀಡಲಾಯಿತು, ಚಿಟ್ಪಾಡಿಯ ಹಾಗೂ ಮಹಿಳೆಯರೊಂದಿಗೆ ಬರುವ ಮಕ್ಕಳಿಗೆ ಆಟವಾಡಲು ಪ್ರತ್ಯೇಕ ಕೋಣೆಯಲ್ಲಿ ಆಟಿಕೆಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಪಿಂಕ್ ಮತಗಟ್ಟೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಸಂತಸವಾಗಿದೆ ಎಂದು ಮತಗಟ್ಟೆಯ ಸಿಬ್ಬಂದಿ ಹೇಳಿದರು.
ಜಿಲ್ಲೆಯಾದ್ಯಂತ ನಡೆದ ಮತದಾನದಲ್ಲಿ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮತದಾನದಲ್ಲಿ ಪಾಲ್ಗೊಂಡಿದ್ದು, ಚುನಾವಣಾ ಸಿಬ್ಬಂದಿಗೆ ಬಿಸಿಯೂಟ ವ್ಯವಸ್ಥೆ ಹಾಗೂ ಎಲ್ಲಾ ಮತ-ಕೇಂದ್ರಗಳಿಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.
Comments are closed.