ಕರಾವಳಿ

‘ಮತದಾನಕ್ಕೆ ಸಕಲ ಸಜ್ಜು’: ಕುಂದಾಪುರದಲ್ಲಿ ಮಸ್ಟರಿಂಗ್: ಒಟ್ಟು ಮತದಾರರು 1,99,583

Pinterest LinkedIn Tumblr

ಕುಂದಾಪುರ: ನಾಳೆ ನಡೆಯುವ ವಿಧಾನಸಭಾ ಚುನಾವಣೆ ಹಿನ್ನೆಲೆ ತಾಲೂಕಿನ ಭಂಡಾರ್‌ಕಾರ್‍ಸ್ ಕಾಲೇಜಿನ ಆರ್.ಎನ್.ಶೆಟ್ಟಿ ಸಭಾಂಗಣದಲ್ಲಿ ಶುಕ್ರವಾರ ಮಸ್ಟರಿಂಗ್ ನಡೆದು ಮಧ್ಯಾಹ್ನದ ನಂತರ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮತಯಂತ್ರ ಹಾಗೂ ಇತರೆ ಸಲಕರಣೆಗಳ ಜೊತೆ ಭದ್ರತೆಯೊಂದಿಗೆ ಮತಕೇಂದ್ರಕ್ಕೆ ಪ್ರಯಾಣ ಬೆಳೆಸಿದರು.

ಕುಂದಾಪುರ ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಕುಂದಾಪುರ ಭಂಡಾರ್‌ಕಾರ್‍ಸ್ ಕಾಲೇಜ್ ಸ್ಟ್ರಾಂಗ್ ರೂಮ್‌ನಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳ ಇಡಲಾಗಿದ್ದು, ಅಲ್ಲಿಂದ ವಿಧಾನ ಸಭೆಯ ಒಟ್ಟು 218 ಮತಘಟ್ಟೆಗಳಿಗೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಮತಯಂತ್ರ ಸಹಿತ ಮತಕೇಂದ್ರಕ್ಕೆ ತೆರಳಿದರು. ಕುಂದಾಪುರ ಚುನಾವಣೆ ಅಧಿಕಾರಿ ಟಿ.ಭೂಬಾಲನ್ ನೇತೃತ್ವದಲ್ಲಿ ಮಸ್ಟರಿಂಗ್ ನಡೆದಿದೆ.

ಬೆಳಗ್ಗೆಯಿಂದ ಮಸ್ಟರಿಂಗ್ ಪ್ರಕ್ರಿಯೆ ವ್ಯವಸ್ಥಿತವಾಗಿ ನಡೆದಿದ್ದು ಮಧ್ಯಾಹ್ನದ ಸುಮಾರಿಗೆ ಎಲ್ಲರೂ ಮತ ಕೇಂದ್ರಕ್ಕೆ ತೆರಳಿದರು. ಯಾವ ಅಹಿತರ ಘಟನೆಯೂ ನಡೆಯದಂತೆ ಶಾಂತವಾಗಿ ಮಸ್ಟರಿಂಗ್ ಕೆಲಸ ನಡೆದಿದ್ದು, ಎಸ್ಪಿ ಲಕ್ಷ್ಮಣ ನಿಂಬರ್ಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕುಂದಾಪುರ ಡಿವೈ‌ಎಸ್ಪಿ ದಿನೇಶ್ ಕುಮಾರ್ ನಿರ್ದೇಶನದಲ್ಲಿ, ಕುಂದಾಪುರ ಸಿಪಿಐ ಮಂಜಪ್ಪ ಮಾರ್ಗದರ್ಶನದಲ್ಲಿ ಎಸ್ಸೈ ಹರೀಶ್ ನಾಯಕ್, ಹಾಗೂ ವಿವಿಧ ಠಾಣೆಯ ಪೊಲೀಸ್ ಠಾಧಿಕಾರಿಗಳು ಹಾಗೂ ಸಿಬ್ಬಂದಿಗಳು ಬಂದೋಬಸ್ತ್ ಏರ್ಪಡಿಸಿದ್ದರು.

ಕಳೆದ 2-3 ತಿಂಗಳಿನಿಂದ ಜಿಲ್ಲೆಯಲ್ಲಿ ಶಾಂತಿಯುತ ಮತದಾನಕ್ಕಾಗಿ ಸಕಲ ಸಿದ್ದತೆ ಮಾಡಿಕೊಂಡಿದ್ದೇವೆ. ಚುನಾವಣೆ ಹಿನ್ನೆಲೆಯಲ್ಲಿ ಮೂರು ಗೂಂಡಾ ಪ್ರಕರಣ ದಾಖಲಾಗಿದ್ದು, 16 ಜನರ ಗಡಿಪಾರು ಮಾಡಲಾಗಿದೆ. ಕೆಲವು ಕಡೆಗಳಲ್ಲಿ ಹಣ, ಮದ್ಯ ಹಾಗೂ ಬೆದರಿಕೆ ಮೂಲಕ ಮತದಾರರ ಸೆಳೆಯುವಂತಹ ಪಟ್ಟಿ ಮಾಡಿ ಅಲ್ಲಿಗೆ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪೊಲೀಸ್ ಮತ್ತು ಮಿಲ್ಟ್ರಿ ಪಥಸಂಚಲನ ಮೂಲಕ ಜಾಗೃತಿ ಮೂಡಿಸಿ ಪೊಲೀಸ್ ಇಲಾಖೆ ಯಶಸ್ವೀ ಚುನಾವಣೆಗೆ ಎಲ್ಲಾ ಸಿದ್ದತೆ ಮಾಡಿಕೊಂಡಿದೆ.
– ಲಕ್ಷ್ಮಣ ನಿಂಬರಗಿ (ಉಡುಪಿ ಜಿಲ್ಲಾ ಎಸ್ಪಿ)

Comments are closed.