ಕರಾವಳಿ

ಕಥುವಾ ಬಾಲಕಿ ಅತ್ಯಾಚಾರ ಮತ್ತು ಕೊಲೆ ಕೃತ್ಯ ಖಂಡಿಸಿ “ನ್ಯಾಷನಲ್ ವಿಮೆನ್ಸ್ ಫ್ರಂಟ್” ಪ್ರತಿಭಟನೆ

Pinterest LinkedIn Tumblr

ಮಂಗಳೂರು, ಎಪ್ರಿಲ್.19: ಜಮ್ಮು ಕಾಶ್ಮೀರದ ಕಥುವಾ ಜಿಲ್ಲೆಯ 8ರ ಹರೆಯದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಕೃತ್ಯವನ್ನು ಖಂಡಿಸಿ ಹಾಗೂ ನ್ಯಾಯಕ್ಕಾಗಿ ಆಗ್ರಹಿಸಿ ‘ನ್ಯಾಷನಲ್ ವಿಮೆನ್ಸ್ ಫ್ರಂಟ್’ನ ನೇತೃತ್ವಲ್ಲಿ ಗುರುವಾರ ದ.ಕ.ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.

ಕಥುವಾ ಮತ್ತು ಉನ್ನಾವೋ ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರಗಿಸಿ ತ್ವರಿತ ನ್ಯಾಯಾಲಯದ ಮೂಲಕ ಶಿಕ್ಷೆ ವಿಧಿಸಬೇಕು, ಈ ಕೃತ್ಯವನ್ನು ಬೆಂಬಲಿಸಿದ ಸಚಿವರಿಬ್ಬರನ್ನು ಶಾಸಕ ಸ್ಥಾನದಿಂದ ಉಚ್ಛಾಟಿಸಿ ವಿಚಾರಣೆಗೊಳಪಡಿಸಬೇಕು, ಜಮ್ಮುವಿನ ವಕೀಲರ ಸಂಘದ ಸರ್ವರನ್ನೂ ವಿಚಾರಣೆ ನಡೆಸಬೇಕು, ಎರಡೂ ಪ್ರಕರಣದಲ್ಲಿ ತನ್ನ ಜವಾಬ್ದಾರಿ ನಿರ್ವಹಿಸಲು ವಿಫಲರಾದ ಜಮ್ಮು ಮತ್ತು ಕಾಶ್ಮೀರ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿಗಳು ರಾಜೀನಾಮೆ ಸಲ್ಲಿಸಬೇಕು, ಪ್ರಕರಣದ ಸಂತ್ರಸ್ತರಿಗೆ ನ್ಯಾಯ ಹಾಗೂ ರಕ್ಷಣೆ ಒದಗಿಸಬೇಕು, ಪರಿಹಾರ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಲೇಖಕಿ ಜ್ಯೋತಿ ಗುರುಪ್ರಸಾದ್, ವಿಮೆನ್ಸ್ ಇಂಡಿಯಾ ಮೂವ್‌ಮೆಂಟ್‌ನ ದ.ಕ.ಜಿಲ್ಲಾಧ್ಯಕ್ಷೆ ನಸ್ರಿಯಾ ಬೆಳ್ಳಾರೆ, ಸಿಎಫ್‌ಐ ದ.ಕ. ಜಿಲ್ಲಾ ಉಪಾಧ್ಯಕ್ಷೆ ಮುರ್ಶಿದಾ ಮತ್ತಿರರು ಪಾಲ್ಗೊಂಡಿದ್ದರು.

ಎನ್‌ಡಬ್ಲುಎಫ್ ರಾಜ್ಯ ಸಮಿತಿ ಸದಸ್ಯೆ ಫರ್ಝಾನಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎನ್‌ಡಬ್ಲುಎಫ್ ಜಿಲ್ಲಾಧ್ಯಕ್ಷೆ ಝೀನತ್ ದಿಕ್ಸೂಚಿ ಭಾಷಣ ಮಾಡಿದರು. ರಮ್ಲತ್ ವಾಮಂಜೂರು ಕಾರ್ಯಕ್ರಮ ನಿರೂಪಿಸಿದರು. ಮಿಸ್ರಿಯಾ ವಂದಿಸಿದರು.

–VB

Comments are closed.