ಕರಾವಳಿ

ಜಗದೀಶ್ ಅಮ್ಮುಂಜೆ ಸ್ಮಾರಕ ಪ್ರಶಸ್ತಿಗೆ ಛಾಯಗ್ರಾಹಕ ಕೇಶವ ವಿಟ್ಲ ಆಯ್ಕೆ

Pinterest LinkedIn Tumblr

ಮಂಗಳೂರು: ಕಲಾವಿದ ಜಗದೀಶ್ ಅಮ್ಮುಂಜೆ ಸ್ಮಾರಕ ಆರ್ಟ್ ಗ್ಯಾಲರಿ ವತಿಯಿಂದ ನೀಡಲಾಗುವ ಜಗದೀಶ್ ಅಮ್ಮುಂಜೆ ಸ್ಮಾರಕ ಪ್ರಶಸ್ತಿಗೆ ಖ್ಯಾತ ಪತ್ರಿಕಾ ಛಾಯಾಗ್ರಾಹಕ ಕೇಶವ ವಿಟ್ಲ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕವನ್ನು ಹೊಂದಿದೆ. ಪ್ರಶಸ್ತಿ ಪ್ರಧಾನ ಸಮಾರಂಭವು ಏ.21 ರಂದು ಸಂಜೆ 4.30 ಕ್ಕೆ ಮಂಗಳೂರು ಉರ್ವಾಸ್ಟೋರ್‌ನ ತುಳು ಭವನದ ಸಿರಿ ಚಾವಡಿಯಲ್ಲಿ ನಡೆಯಲಿದೆ.

ಗ್ರಾಮೀಣ ಪ್ರದೇಶವಾದ ವಿಟ್ಲದಲ್ಲಿ 1961 ರಲ್ಲಿ ಜನಿಸಿದ ಕೇಶವ ವಿಟ್ಲ ಅವರು , ೧೯೮೪ ರಲ್ಲಿ ಮುಂಗಾರು ಪತ್ರಿಕೆಯ ಮೂಲಕ ಪತ್ರಿಕಾ ಛಾಯಗ್ರಾಹಕರಾಗಿ ವೃತ್ತಿ ಜೀವನ ಆರಂಭಿಸಿದರು. ಅನಂತರ ೧೯೯೬ ರಿಂದ ಬೆಂಗಳೂರಿನಲ್ಲಿ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕಾ ಬಳಗದಲ್ಲಿ ಹಲವು ವರ್ಷಗಳ ಕಾಲ ಛಾಯಗ್ರಾಹಕರಾಗಿ ಸೇವೆ ಸಲ್ಲಿಸಿ, ತದನಂತರ ಪ್ರೀಲಾನ್ಸ್ ಪತ್ರಿಕಾ ಛಾಯಗ್ರಾಹಕರಾಗಿ ದಿ ಟೆಲಿಗ್ರಾಫ್ , ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗಳಿಗೆ ಛಾಯಚಿತ್ರಗಳನ್ನು ಪೂರೈಸಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದಿಂದ ಶ್ರೇಷ್ಟ ಸುದ್ದಿ ಛಾಯಾಗ್ರಾಹಕ ಪ್ರಶಸ್ತಿ , ಬೆಂಗಳೂರು ಪ್ರೆಸ್ ಕ್ಲಬ್‌ನ ಜೀವಮಾನ ಸಾಧನೆಗಾಗಿ ಪ್ರಶಸ್ತಿ , ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ , ಬಲಿಯೇಂದ್ರ ಪುರಸ್ಕಾರ , ತುಳುನಾಡ ಸಿರಿ ಪ್ರಶಸ್ತಿ ಪುರಸ್ಕೃತರಾಗಿರುವ ಕೇಶವ ವಿಟ್ಲ ಅವರು ಹಲವು ಏಕವ್ಯಕ್ತಿ ಛಾಯಚಿತ್ರ ಪ್ರದರ್ಶನಗಳನ್ನು ಆಯೋಜಿಸಿದವರು. ಕಳೆದ ವರ್ಷ ರಾಜ್ಯ ಪ್ರವಾಸೋದ್ಯಮ ಇಲಾಖೆಯು ಕೇಶವ ವಿಟ್ಲ ಅವರ ಕರ್ನಾಟಕದ ನೈಸರ್ಗಿಕ ಸಂಪತ್ತಿನ ಕಾಫಿ ಟೇಬಲ್ ಪುಸ್ತಕ “ಫೆಸೆಟ್ಸ್ ಆಫ್ ಕರ್ನಾಟಕ ” ಛಾಯಚಿತ್ರ ಸಂಪುಟವನ್ನು ಪ್ರಕಟಿಸಿತ್ತು. ಈ ಪುಸ್ತಕ ರಾಜ್ಯದಾದ್ಯಂತ ಭಾರೀ ಜನಮನ್ನಣೆ ಪಡೆದಿತ್ತು.

ಏ.21ರಂದು ತುಳು ಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಅಂತರಾಷ್ಟ್ರೀಯ ಖ್ಯಾತಿಯ ಚಿತ್ರಕಲಾವಿದ ಹಾಗೂ ಕೇರಳ ತುಳು ಅಕಾಡೆಮಿಯ ಅಧ್ಯಕ್ಷ ಪಿ.ಎಸ್. ಪುಣಿಂಚತ್ತಾಯ ಅವರು ಕೇಶವ ವಿಟ್ಲ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಿರುವರು ಎಂದು ಜಗದೀಶ್ ಅಮ್ಮುಂಜೆ ಸ್ಮಾರಕ ಆರ್ಟ್ ಗ್ಯಾಲರಿಯ ಪ್ರಕಟಣೆ ತಿಳಿಸಿದೆ.

Comments are closed.