ಕರಾವಳಿ

ಪೂಜಾರಿ ಅಶೀರ್ವಾದ ಪಡೆದ ಸಚಿವ ರಮಾನಾಥ ರೈ : ಮತ್ತೆ ಒಂದಾದ ಬದ್ಧ ವೈರಿಗಳು!..

Pinterest LinkedIn Tumblr

ಮಂಗಳೂರು: ರಾಜ್ಯ ವಿಧಾನ ಸಭಾ ಚುನಾವಣೆ ಸಮೀಸುತ್ತಿದ್ದಂತೆ ರಾಜಕೀಯವಾಗಿ ಬದ್ದ ವೈರಿಗಳಾಗಿದ್ದ ಕಾಂಗ್ರೆಸ್ ನ ಹಿರಿಯ ಮುಖಂಡ ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಕರಾವಳಿಯ ಕಾಂಗ್ರೆಸ್‌ ಪಾಳಯದಲ್ಲಿ ನಡೆದ ಮಹತ್ವದ ವಿದ್ಯಮಾನವೊಂದರಲ್ಲಿ ಮತ್ತೆ ಒಂದಾಗುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹುರುಪು ಮೂಡಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ರಮನಾಥ ರೈ ಅವರು ಬುಧವಾರ ಬೆಳಗ್ಗೆ ಕಾಂಗ್ರೆಸ್‌ ನಾಯಕರೊಂದಿಗೆ ಹಿರಿಯ ಕಾಂಗ್ರೆಸಿಗ ಜನಾರ್ದನ ಪೂಜಾರಿ ಅವರ ನಿವಾಸಕ್ಕೆ ತೆರಳಿ ಶಿರಬಾಗಿ ನಮಿಸಿ ಪೂಜಾರಿಯವರ ಆಶೀರ್ವಾದ ಪಡೆದಿದ್ದಾರೆ. ಮಾತ್ರವಲ್ಲದೇ ಕೆಲ ಕಾಲ ಇಬ್ಬರು ನಾಯಕರು ಮುಂದಿನ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

ಈ ವೇಳೆ ಈ ಇಬ್ಬರು ನಾಯಕರ ಜೊತೆ ವಿಜಯ ಬ್ಯಾಂಕಿನ ಮಾಜಿ ಉದ್ಯೋಗಿ, ಇತ್ತೀಚಿಗೆ ಕಾಂಗ್ರೆಸ್ ಸೇರ್ಪಡೆಗೊಂಡ ಬೇಬಿ ಕುಂದರ್ ಜತೆಗಿದ್ದರು.

ಈ ಬಾರಿ ಬಂಟ್ವಾಳ ಕ್ಷೇತ್ರದಲ್ಲಿ ರಮಾನಾಥ ರೈ ಮತ್ತು ಬಿಜೆಪಿಯ ರಾಜೇಶ್‌ ನಾಯಕ್‌ ಅವರ ನಡುವೆ ಜಿದ್ದಾಜಿದ್ದಿನ ಹೋರಾಟ ಕಂಡು ಬಂದಿದೆ. ಕೇತ್ರದಲ್ಲಿ ಬಿಲ್ಲವ ಸಮಾಜದ ಮತದಾರರು ನಿರ್ಣಾಯಕವಾಗಿದ್ದು ಆ ಮತಗಳನ್ನು ಸೆಳೆಯಲು ಪೂಜಾರಿ ಅವರ ಪ್ರಚಾರ ಅನಿವಾರ್ಯ ಎಂಬ ಕಾರಣಕ್ಕೆ ರೈ ಅವರು ಭೇಟಿಯಾಗಿ ಪ್ರಚಾರಕ್ಕೆ ಆಹ್ವಾನಿಸಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಹಾಗೂ ಪಕ್ಷದ ವಿರುದ್ಧ ನಿರಂತರ ವಾಗ್ದಾಳಿ :

ಸಿದ್ದರಾಮಯ್ಯ ಸರ್ಕಾರ ಅಸ್ಥಿತ್ವಕ್ಕೆ ಬಂದಾಗಿನಿಂದ ಮೂಲ ಕಾಂಗ್ರೆಸಿಗರನ್ನು ಕಡೆಗಣಿಸಲಾಗಿದೆ ಎಂದು ನಿರಂತರವಾಗಿ ಪೂಜಾರಿ ಅವರು ಪಕ್ಷದ ವಿರುದ್ಧವೇ ವಾಗ್ದಾಳಿ ನಡೆಸುತ್ತಿದ್ದರು. ಆ ಬಳಿಕ ಅವರಿಗೆ ಕಾಂಗ್ರೆಸ್‌ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಲು ನಿರ್ಭಂದ ಹೇರಲಾಗಿತ್ತು. ರಮನಾಥ್‌ ರೈ ಅವರ ವಿರುದ್ಧವೂ ಹಲವು ಬಾರಿ ಬಹಿರಂಗ ಟೀಕೆ ಮಾಡಿದ್ದ ಪೂಜಾರಿ ಅವರು ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌ ಅವರನ್ನು ಹೊಗಳಿ ಮಕ್ಕಳ ಊಟ ಕಸಿದ ರಮನಾಥ್‌ ರೈ ರಾಕ್ಷಸ ಎಂದು ಕಿಡಿ ಕಾರಿದ್ದರು.

ಕರಾವಳಿ ಕಾಂಗ್ರೆಸ್‌ನಲ್ಲಿ ರಾಜಕೀಯ ಹೈಡ್ರಾಮಾ..?

ಇನ್ನೊಂದೆಡೆ ರಮನಾಥ ರೈ ನನ್ನ ತಾಯಿಯನ್ನು ಕೀಳು ಶಬ್ಧ ಬಳಸಿ ನಿಂದಿಸಿದ್ದಾರೆ ಎಂದು ವೇದಿಕೆಯಲ್ಲೇ ಪೂಜಾರಿ ಕಣ್ಣೀರಿಟ್ಟಿದ್ದರು. ಇದೀಗ ಈ ಇಬ್ಬರು ಮುಖಂಡರು ಚುನಾವಣಾ ಸಂದರ್ಭದಲ್ಲಿ ಮತ್ತೆ ಒಂದಾಗುವ ಮೂಲಕ ಕರಾವಳಿ ಕಾಂಗ್ರೆಸ್‌ನಲ್ಲಿ ರಾಜಕೀಯ ಹೈಡ್ರಾಮಾ ಶುರುವಾಗಿದೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

Comments are closed.