ರಾಷ್ಟ್ರೀಯ

ಮೋದಿ ವಿರುದ್ಧ ಹರಿಹಾಯ್ದ ಯಶವಂತ್ ಸಿನ್ಹಾ ಹೇಳಿದ್ದೇನು…?

Pinterest LinkedIn Tumblr

ನವದೆಹಲಿ: ಬಿಜೆಪಿ ಹಿರಿಯ ನಾಯಕ ಯಶವಂತ್ ಸಿನ್ಹಾ ಅವರು ಬುಧವಾರ ಮತ್ತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಹರಿಹಾಯ್ದಿದ್ದು, ಕೇಂದ್ರ ಸರ್ಕಾರದ ವೈಫಲ್ಯದ ಬಗ್ಗೆ ಮಾತನಾಡುವಂತೆ ಬಿಜೆಪಿ ಹಿರಿಯ ನಾಯಕರಿಗೆ ಮತ್ತು ಸಂಸದರಿಗೆ ಆಗ್ರಹಿಸಿದ್ದಾರೆ.

ಬಿಜೆಪಿ ಮಾರ್ಗದರ್ಶಕ್ ಮಂಡಳಿಯ ಸದಸ್ಯರಾದ ಎಲ್ ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಅವರು ಮೌನ ಮುರಿದು ಮಾತನಾಡುವ ಮೂಲಕ ಸಂಸದರು ಸರ್ಕಾರದ ವೈಫಲ್ಯದ ಬಗ್ಗೆ ಮಾತನಾಡಲು ಪ್ರೇರೇಪಿಸಬೇಕು ಎಂದು ಯಶವಂತ್ ಸಿನ್ಹಾ ಹೇಳಿದ್ದಾರೆ.

2014ರಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು, ಪ್ರಧಾನಿ ಸೇರಿದಂತೆ ಹಿರಿಯ ನಾಯಕರನ್ನೊಳಗೊಂಡ ಮಾರ್ಗದರ್ಶಕ್ ಮಂಡಳಿ ರಚಿಸಿದ್ದರು. ಈ ಮಂಡಳಿಯಲ್ಲಿ ಮಾಜಿ ಕೇಂದ್ರ ಸಚಿವ ಶಾಂತ ಕುಮಾರ್ ಹಾಗೂ ಸಿನ್ಹಾ ಸಹ ಇದ್ದಾರೆ.

ಮಾರ್ಗದರ್ಶಕ್ ಮಂಡಳಿ ರಚನೆಯಾದ ನಂತರ ಇದುವರೆಗೂ ಅಧಿಕೃತವಾಗಿ ಒಂದು ಬಾರಿಯೂ ಸಭೆ ಸೇರಿಲ್ಲ. ಪ್ರಸ್ತುತ ಬಿಜೆಪಿ ನಾಯಕತ್ವ ಪಕ್ಷದ ನಾಯಕರು ಮತ್ತು ಸಂಸದರು ತಮ್ಮ ಅಭಿಪ್ರಾಯ ತಿಳಿಸಲು ಇದ್ದ ಎಲ್ಲಾ ಬಾಗಿಲುಗಳನ್ನು ಮುಚ್ಚಿದ್ದು, ಅಡ್ವಾಣಿ ಮತ್ತು ಜೋಶಿ ಅವರು ಮೌನ ಮುರಿದು ಮಾತನಾಡಬೇಕು ಎಂದು ಸಿನ್ಹಾ ಒತ್ತಾಯಿಸಿದ್ದಾರೆ.

ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಕೇವಲ ಶೇ.40ರಷ್ಟು ಸಂಸದರು ಮಾತ್ರ ಮರು ಆಯ್ಕೆಯಾಗುತ್ತಾರೆ. ಇತರರು ಸರ್ಕಾರದ ವೈಫಲ್ಯದಿಂದಾಗಿ ಸೋಲು ಅನುಭವಿಸಲಿದ್ದಾರೆ ಎಂದು ಸಿನ್ಹಾ ಭವಿಷ್ಯ ನುಡಿದಿದ್ದಾರೆ.

ಐವರು ದಲಿತ ಸಂಸದರು ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದಾರೆ. ನೀವು ಈಗಲಾದರೂ ಮಾತನಾಡಿ. ಇಲ್ಲದಿದ್ದರೆ ಮುಂದಿನ ಪೀಳಿಗೆ ನಿಮ್ಮನ್ನು ಕ್ಷಮಿಸಲ್ಲ ಎಂದು ಹಿರಿಯ ನಾಯಕರಿಗೆ ಸಿನ್ಹಾ ಎಚ್ಚರಿಕೆ ನೀಡಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಯಶವಂತ್ ಸಿನ್ಹಾ ಇದೀಗ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ಆರ್ಥಿಕ ನೀತಿ ಮತ್ತು ಮಹಿಳಾ ಸುರಕ್ಷತೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ಇತ್ತೀಚೆಗೆ ಪತ್ರಿಕೆಯೊಂದಕ್ಕೆ ಬರೆದ ಲೇಖನದಲ್ಲೂ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ಸಿನ್ಹಾ, ದೇಶದಲ್ಲಿ ಮಹಿಳಾ ಸುರಕ್ಷತೆ, ಆರ್ಥಿಕ ಸ್ಥಿತಿ ಮತ್ತು ವಿದೇಶಿ ನೀತಿ ಮುಂತಾದವುಗಳನ್ನು ನಿರ್ವಹಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದು ಅವರು ಹೇಳಿದ್ದಾರೆ. ವಿಶ್ವದಲ್ಲೇ ಅತ್ಯಂತ ಶೀಘ್ರವಾಗಿ ಅಭಿವೃದ್ಧಿ ಹೊಂದುತ್ತಿರುವ ದೇಶ ಭಾರತ ಎಂದು ಸರ್ಕಾರ ಹೇಳುತ್ತಿದೆ. ಆದರೆ ಅದು ಸುಳ್ಳು ಎಂದು ಹೇಳಿದ್ದರು.

ಅತ್ಯಾಚಾರ ಪ್ರಕರಣಗಳು ಇತ್ತೀಚೆಗೆ ಮಾಮೂಲೆನ್ನಿಸಿವೆ. ಇಂಥ ಕೃತ್ಯಗಳಲ್ಲಿ ಬಿಜೆಪಿ ಕಾರ್ಯಕರ್ತರೇ ಶಾಮೀಲಾಗಿರುವುದು ಆತಂಕದ ವಿಚಾರ. ಮೋದಿ ವಿದೇಶಿ ಅತಿಥಿಗಳನ್ನು ಅಪ್ಪಿಕೊಳ್ಳುವುದಷ್ಟಕ್ಕೇ ವಿದೇಶಿ ನೀತಿ ಸೀಮಿತವಾಗಿದೆ ಎಂದು ಅವರು ಲೇವಡಿ ಮಾಡಿದ್ದಾರೆ.

Comments are closed.