ಕರಾವಳಿ

ಈಶ್ವರ ಕಟೀಲ್ ಕೊಲೆಗೆ ಯಾವೂದೇ ಸಂಚು ನಡೆದಿಲ್ಲ – ಚುನಾವಣೆಗೆ ಟಿಕೆಟ್ ಗಿಟ್ಟಿಸಿಕೊಳ್ಳಲು ಮಾಡಿರುವ ನಾಟಕ :ಆರೋಪ

Pinterest LinkedIn Tumblr

ರಾಜಕೀಯ ದುರುದ್ದೇಶದಿಂದ ಶಿವಪ್ರಸಾದ್‌ನನ್ನು ಬಂಧಿಸಲಾಗಿದೆ : ಕುಟುಂಬಸ್ಥರ ಆರೋಪ

ಮಂಗಳೂರು, ಎಪ್ರಿಲ್.12: ಬಿಜೆಪಿ ನಾಯಕ ಈಶ್ವರ ಕಟೀಲ್ ಕೊಲೆಗೆ ಸಂಚು ರೂಪಿಸಿದ್ದಾರೆಂಬ ಆರೋಪದಲ್ಲಿ ಕೆಲ ದಿನಗಳ ಹಿಂದೆ ಕುಂದಾಪುರದ ತೆಕ್ಕಟ್ಟೆ ಬಳಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಶಿವಪ್ರಸಾದ್ ಯಾನೆ ಅಯ್ಯಪ್ಪನ ಮೇಲೆ ಹೊರಿಸಿರುವ ಕೊಲೆ ಸಂಚು ಆರೋಪ ಸುಳ್ಳು. ರಾಜಕೀಯ ದುರುದ್ದೇಶದಿಂದ ಈ ಆರೋಪ ಹೊರಿಸಿ ಅಮಾಯಕ ಶಿವಪ್ರಸಾದ್‌ನನ್ನು ಜೈಲಿಗಟ್ಟಲಾಗಿದೆ ಎಂದು ಶಿವಪ್ರಸಾದ್‌ನ ಕುಟುಂಬಸ್ಥರು ಹಾಗೂ ನೆರೆಹೊರೆಯವರು ಆರೋಪಿಸಿದ್ದಾರೆ.

ಗುರುವಾರ ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶಿವಪ್ರಸಾದ್‌ ತಮ್ಮ ಸುಶಾಂತ್ ಶೆಟ್ಟಿ ಅವರು, ಪೊಲೀಸರ ದಾಖಲೆಯ ಪ್ರಕಾರ ಇಂತಹ ಯಾವುದೇ ಪ್ರಕರಣ ದಾಖಲಾಗಲಿಲ್ಲ. ಆದರೂ ರಾಜಕೀಯ ದುರುದ್ದೇಶದಿಂದ ಪೊಲೀಸರ ಮೇಲೆ ಒತ್ತಡ ಹೇರಿ ಈಶ್ವರ ಕಟೀಲ್ ತಮಗೆ ವಿಧಾನಸಭಾ ಚುನಾವಣೆಗೆ ಟಿಕೆಟ್ ಗಿಟ್ಟಿಸಿಕೊಳ್ಳಲು ಮಾಡಿರುವ ಹುನ್ನಾರ ಇದೆಂದು ಹೇಳಿದರು.

ಕಿಲೆಂಜೂರು ಗ್ರಾಮದ ಒಲವಿನ ಗುಡ್ಡೆ ಮಾಗಂದಡಿಯ ಶಿವಪ್ರಸಾದ್ ಕಳೆದ ಕೆಲ ಸಮಯದಿಂದ ತೆಕ್ಕಟ್ಟೆಯ ಕಲ್ಲುಕೋರೆಯಲ್ಲಿ ಕೆಲಸ ಮಾಡುತ್ತಿದ್ದ. ಈ ಹಿಂದೆ ಶಿವಪ್ರಸಾದ್ ಮೇಲೆ ಮುಲ್ಕಿ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆಗಾಗಿ ಮಾ.24ರಂದು ಮಂಗಳೂರು ನ್ಯಾಯಾಲಯಕ್ಕೆ ಆತ ಹಾಜರಾಗಿದ್ದ.

ನ್ಯಾಯಾಲಯದ ಕಲಾಪ ಮುಗಿಸಿ ತೆಕ್ಕಟ್ಟೆಯಲ್ಲಿ ಕೆಲಸಕ್ಕೆ ತೆರಳಿದ್ದ. ಕೋರೆಯಲ್ಲಿ ಲಾರಿ ಚಾಲಕನಾಗಿ ದುಡಿಯುತ್ತಿರುವ ಆತ ಅಲ್ಲಿ ಎಟಿಎಂನಿಂದ ಹಣ ಪಡೆದು ಹೊರ ಬರುವ ಸಂದರ್ಭ ಮಂಗಳೂರು ಉತ್ತರ ರೌಡಿ ನಿಗ್ರಹ ದಳ ಪೊಲೀಸರು ಬಂಧಿಸಿದ್ದರು.

ಅಲ್ಲಿಂದ ಆತನನ್ನು ಪಣಂಬೂರು ಠಾಣೆಯಲ್ಲಿರಿಸಿ ಚಿತ್ರಹಿಂಸೆ ನೀಡಿ ಇತರ ಇಬ್ಬರು ಆರೋಪಿಗಳಾದ ಗುರುಪುರ ಉಳಾಯಿಬೆಟ್ಟುವಿನ ಸಾಲೆಮಜಲು ಎಂಬಲ್ಲಿನ ಪ್ರದೀಪ್ ಪೂಜಾರಿ ಮತ್ತು ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಮರ್ತನಾಡಿ ಎಂಬಲ್ಲಿನ ನಾರಾಯಣ ಬೆಳ್ಚಡ ಎಂಬವರ ಮಗ ದಿನೇಶ್ ಬೆಳ್ಚಡರೊಂದಿಗೆ ಮಾ.28ರಂದು ಬೆಳಗ್ಗೆ 2.30ಕ್ಕೆ ಮಾರಕಾಯುಧಗಳು ಮತ್ತು ಮೆಣಸಿನ ಹುಡಿ ಇರಿಸಿ ದರೋಡೆಗೆ ಸಂಚು ರೂಪಿಸುತ್ತಿದ್ದರೆಂಬ ಪ್ರಕರಣ ದಾಖಲಾಸಲಾಗಿದೆ.

ಪೊಲೀಸರ ದಾಖಲೆಗಳ ಪ್ರಕಾರ ಕಟೀಲಿನ ನವೀನ ಹಾಗೂ ಉಡುಪಿಯ ಅಶೋಕ ಗಾಣಿಗ ಎಂಬವರು ಈ ಸಂದರ್ಭ ಪರಾರಿಯಾಗಿ ದ್ದಾರೆ ಎಂದು ಹೇಳಲಾಗಿದೆ. ಪ್ರಕರಣದ ಕುರಿತಂತೆ ಪೊಲೀಸ್ ಆಯುಕ್ತರು ನೀಡಿರುವ ಹೆಳಿಕೆಯಲ್ಲಿ ದರೋಡೆಗೆ ಸಂಚು ರೂಪಿಸಿದ್ದರೆಂದು ಹೇಳಲಾಗಿತ್ತು.

ಆದರೆ ಬಳಿಕ ಈ ಪ್ರಕರಣ ರಾಜಕೀಯ ತಿರುವು ಪಡೆದು ಈಶ್ವರ ಕಟೀಲ್‌ರವರ ಕೊಲೆಗೈಯ್ಯಲು ಸಂಚು ಎಂಬುದಾಗಿ ಹುಯಿಲೆಬ್ಬಿಸಿ ಮಾಧ್ಯಮಗಳಲ್ಲೂ ಸುದ್ದಿ ಪ್ರಕಟವಾಗಿದೆ. ಪೊಲೀಸರು ಮಾ. 24ರಂದು ತೆಕ್ಕಟ್ಟೆಯ ಎಟಿಎಂ ಬಳಿ ಶಿವಪ್ರಸಾದ್‌ರನ್ನು ಬಂಧಿಸಿರುವ ಸಿಸಿಟಿವಿ ಫೂಟೇಜ್‌ಗಳಿವೆ. ಪೊಲೀಸರು ಸಾಮಾನ್ಯ ಉಡುಪಿನಲ್ಲಿ ಮುನ್ಸೂಚನೆ ನೀಡದೆ ಶಿವಪ್ರಸಾದ್‌ನನ್ನು ಸಾರ್ವಜನಿಕರ ಎದುರೇ ಬಂಧಿಸಿರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ಫೋಟೋಗಳನ್ನು ತೋರಿಸಿ ಸುಶಾಂತ್ ಶೆಟ್ಟಿ ವಿವರಿಸಿದರು.

ಹಿಂದೆ ಬಿಜೆಪಿ ಕಾರ್ಯಕರ್ತರಾಗಿದ್ದ ಶಿವಪ್ರಸಾದ್ ಕಾರಣಾಂತರದಿಂದ ಮುನಿಸಿಕೊಂಡು ಪಕ್ಷದಿಂದ ದೂರವಾಗಿದ್ದಾನೆ. ಇದನ್ನೇ ನೆನಪವಾಗಿಸಿ ಇದೀಗ ಈಶ್ವರ ಕಟೀಲ್ ಪೊಲೀಸರ ಜತೆ ಸೇರಿ ಈ ಸಂಚು ರೂಪಿಸಿದ್ದಾರೆ ಎಂದು ಸುಶಾಂತ್ ಶೆಟ್ಟಿ ಆರೋಪಿಸಿದರು.

ಸಹೋದರ ಮೇಲಾಗಿರುವ ಪೊಲೀಸ್ ದೌರ್ಜನ್ಯವನ್ನು ಪ್ರಶ್ನಿಸಿ, ನ್ಯಾಯಕ್ಕಾಗಿ ಒತ್ತಾಯಿಸಿ ಪೊಲೀಸ್ ಆಯುಕ್ತರು ಹಾಗೂ ಮಾನವ ಹಕ್ಕು ಆಯೋಗಕ್ಕೂ ದೂರು ನೀಡುವುದಾಗಿ ಸುಶಾಂತ್ ಹೇಳಿದರು.

ಗೋಷ್ಠಿಯಲ್ಲಿ ಶಿವಪ್ರಸಾದ್ ತಾಯಿ ವಿಜಯಲಕ್ಷ್ಮಿ, ಸ್ನೇಹಿತ ರಿತೇಶ್, ನೆರೆಹೊರೆಯವರಾದ ಹೇಮಲತಾ, ಸುದರ್ಶನ್ ಉಪಸ್ಥಿತರಿದ್ದರು

ವರದಿ ಕೃಪೆ : ವಾಭಾ

Comments are closed.