ಕರಾವಳಿ

ಮತದಾನ ಜಾಗೃತಿ ಹಾಡಿನ ಸಾಹಿತ್ಯದ ಬಗ್ಗೆ ಗೊಂದಲ : ವಿವಾದಕ್ಕೆ ತೆರೆ ಎಳೆದ ಹಾಡಿನ ಗಾಯಕ ಪಟ್ಲ ಸತೀಶ್ ಶೆಟ್ಟಿ

Pinterest LinkedIn Tumblr

ಮಂಗಳೂರು: ಚುನಾವಣೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ರಚಿಸಲಾಗಿರುವ ಮತದಾನ ಜಾಗೃತಿ ಹಾಡಿನ ಬಗ್ಗೆ ಗೊಂದಲ ಸೃಷ್ಟಿಯಾದ ಹಿನ್ನೆಲೆಯಲ್ಲಿ ಹಾಡಿನ ಗಾಯಕ, ಯಕ್ಷಗಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಸ್ಪಷ್ಟೀಕರಣ ನೀಡಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಯ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಪಂ ಸ್ವೀಪ್ ಸಮಿತಿಯು ಯಕ್ಷಗಾನ ಶೈಲಿ ಹಾಡುಗಾರಿಕೆಯ ಧ್ವನಿ ಮುದ್ರಿಕೆಯನ್ನು ಹೊರ ತಂದಿತ್ತು. ಪ್ರಜಾಪ್ರಭುತ್ವ ಹಬ್ಬ ಎಂಬ ಶೀರ್ಷಿಕೆಯಲ್ಲಿ ಯಕ್ಷಗಾನ ಶೈಲಿಯ ಗೀತೆಯನ್ನು ಪಟ್ಲ ಸತೀಶ್ ಶೆಟ್ಟಿ ಅವರು ಹಾಡಿದ್ದರು. ಜೊತೆಗೆ ಇದಕ್ಕೆ ಸಂಗೀತ ಸಂಯೋಜನೆಯನ್ನೂ ಮಾಡಿದ್ದರು.ಆದರೆ ಈ ಹಾಡಿನ ಸಾಹಿತ್ಯದ ಬಗ್ಗೆ ವ್ಯಾಪಕ ಗೊಂದಲ ಏರ್ಪಟ್ಟಿತ್ತು.

ಗೀತೆಯ ಸಾಹಿತ್ಯವನ್ನು ಜಿಲ್ಲಾ ಪಂಚಾಂಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಮ್.ಆರ್.ರವಿ ರಚಿಸಿರುವುದಾಗಿ ಪ್ರಕಟಣೆಯೊಂದು ಬಂದಿತ್ತು. ಆದರೆ ಈ ಹಾಡನ್ನು ರಚಿಸಿದವರು ಕದ್ರಿ ನವನೀತ್ ಶೆಟ್ಟಿಯವರು ಎನ್ನುವ ಮಾತುಗಳು ಕೂಡ ಕೇಳಿ ಬಂದಿತ್ತು.

ಈ ವಿವಾದಗಳ ಹಿನ್ನೆಲೆಯಲ್ಲಿ ಪಟ್ಲ ಸತೀಶ್ ಶೆಟ್ಟಿಯವರು ಸ್ಪಷ್ಟನೆ ನೀಡುವ ಮೂಲಕ ಹಾಡಿನ ಸಾಹಿತ್ಯದ ಕುರಿತು ಎದ್ದಿದ್ದ ವಿವಾದಕ್ಕೆ ತೆರೆ ಎಳೆದಿದ್ದಾರೆ.

ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ.ಎಂ.ಆರ್. ರವಿ ಅವರ ಕೋರಿಕೆಯ ಮೇರೆಗೆ ಪ್ರಜಾಪ್ರಭುತ್ವ ಹಬ್ಬ ಹಾಡಿಗೆ ಸ್ವರ ಸಂಯೋಜಿಸಿ ಗಾಯನ ಮಾಡಿದ್ದೇನೆ. ಇದರ ಮೂಲ ಸಾಹಿತ್ಯವನ್ನು ಡಾ.ಎಂ.ಆರ್. ರವಿಯವರು ರಚಿಸಿ ನನಗೆ ಕಳುಹಿಸಿ ಕೊಟ್ಟಿದ್ದು, ಅದರ ಪಲ್ಲವಿಯನ್ನು ಬಳಸಿಕೊಂಡಿರುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮತ್ತೋರ್ವ ಬರಹಗಾರರಾದ ಕದ್ರಿ ನವನೀತ್ ಶೆಟ್ಟಿಯವರು ನೀಡಿದ ಉಳಿದ ಸಾಹಿತ್ಯವನ್ನು ಬಳಸಿಕೊಂಡು ಹಾಡುಗಾರಿಕೆಯನ್ನು ಸಂಪೂರ್ಣಗೊಳಿಸಿರುತ್ತೇನೆ. ಹಾಡು ಇಬ್ಬರ ಸಾಹಿತ್ಯವನ್ನು ಒಳಗೊಂಡಿದ್ದು, ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಮತದಾರರಲ್ಲಿ ಜಾಗೃತಿಯನ್ನು ಉಂಟುಮಾಡುವ ಸದುದ್ದೇಶದಿಂದ ಕೂಡಿರುತ್ತದೆ. ಸಂವಹನ ಕೊರತೆಯಿಂದಾಗಿ ಸಾರ್ವಜನಿಕರಲ್ಲಿ ಹಾಡಿನ ಸಾಹಿತ್ಯದ ಬಗ್ಗೆ ಅನಗತ್ಯ ವಿವಾದ ಉಂಟಾಗಿದೆ. ಅದನ್ನು ಇಲ್ಲಿಗೇ ಕೊನೆಗಾಣಿಸಬೇಕೆಂದು ಕೋರುತ್ತೇನೆ ಎಂದು ಸತೀಶ್ ಶೆಟ್ಟಿಯವರು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Comments are closed.