ಮಂಗಳೂರು, ಎಪ್ರಿಲ್.3: ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರವು, ಪಾರ್ಕಿಂಗ್ ವ್ಯವಸ್ಥೆಯ ಗುತ್ತಿಗೆ ವಹಿಸಿರುವ ಏಜೆನ್ಸಿಗೆ 2.58 ಲಕ್ಷ ರೂ. ದಂಡ ವಿಧಿಸಿದ್ದಾರೆ. ಮಾತ್ರವಲ್ಲದೆ, ಇಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಎಲ್ಲಾ ಪ್ರಯಾಣಿಕ ವಾಹನಗಳಿಗೆ ಉಚಿತ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಿದೆ.
ಭಾರತದ ಅತ್ಯಂತ ಸ್ವಚ್ಛ ವಿಮಾನ ನಿಲ್ದಾಣ ಖ್ಯಾತಿಗೆ ಪಾತ್ರವಾಗಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ ಏಜೆನ್ಸಿಯವರು ಹೆಚ್ಚುವರಿ ಪಾರ್ಕಿಂಗ್ ಶುಲ್ಕ ವಸೂಲು ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ವೈರಲ್ ಆಗಿದ್ದು, ಈ ಬಗ್ಗೆ ಮಂಗಳವಾರ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಈ ವೀಡಿಯೋ ಬಗ್ಗೆ ಸ್ಪಷ್ಟನೆ ನೀಡಿದ ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ವಿ.ವಿ.ರಾವ್ ಅವರು, ಈ ಮಾಹಿತಿಯನ್ನು ನೀಡಿದ್ದಾರೆ.
ಎಲ್ಲ ವಿಮಾನ ನಿಲ್ದಾಣಗಳಲ್ಲಿ ಮುಂಬೈನ ಎಸ್.ಎಸ್. ಎಂಟರ್‌ಪ್ರೈಸಸ್ ಸಂಸ್ಥೆ ಪಾರ್ಕಿಂಗ್ ಶುಲ್ಕ ಸಂಗ್ರಹದ ಗುತ್ತಿಗೆಯನ್ನು ವಹಿಸಿಕೊಂಡಿದೆ. ಈ ಸಂಸ್ಥೆಯು ಬೇರೆ ವಿಮಾನ ನಿಲ್ದಾಣಗಳಲ್ಲೂ ದುಬಾರಿ ಪಾರ್ಕಿಂಗ್ ಶುಲ್ಕವನ್ನು ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇದನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಿದೆ. ಮಂಗಳೂರು ನಿಲ್ದಾಣದಲ್ಲಿ ದುಬಾರಿ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಿರುವ ಘಟನೆಗೆ ಸಂಬಂಧಿಸಿ ಗುತ್ತಿಗೆ ವಹಿಸಿರುವ ಏಜೆನ್ಸಿಗೆ ನೋಟಿಸ್ ನೀಡಲಾಗಿದೆ. ಜತೆಗೆ ದಂಡವನ್ನೂ ವಿಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಏಜೆನ್ಸಿಗೆ ಈಗಾಗಲೇ ಮೂರು ಬಾರಿ ನೋಟಿಸ್ ನೀಡಲಾಗಿದೆ. ಏಜೆನ್ಸಿಯು ತನ್ನ ವರ್ತನೆಯನ್ನು ಬದಲಿಸದಿದ್ದರೆ, ಇಂತಹ ತಪ್ಪು ಪುನರಾವರ್ತನೆಯಾದರೆ, ಪಾರ್ಕಿಂಗ್ ಶುಲ್ಕದ ಹೊಸ ನಿಯಮಾವಳಿಯಂತೆ ಟೆಂಡರ್ ಕರೆದು ಬೇರೆ ಕಂಪನಿಗಳಿಗೆ ಗುತ್ತಿಗೆ ನೀಡಲಾಗುವುದು ಎಂದು ಅವರು ಎಚ್ಚರಿಸಿದರು.
ವಿಮಾನ ನಿಲ್ದಾಣದಲ್ಲಿ ಬಾಡಿಗೆ ಮಾಡುತ್ತಿರುವ ಟೂರಿಸ್ಟ್ ಕಾರು ಚಾಲಕರ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಪ್ರಯಾಣಿಕರೊಂದಿಗೆ ವರ್ತನೆ ನಡೆಸುವ ಬಗ್ಗೆ ತರಬೇತಿ ನೀಡಲಾಗಿದೆ. ನಗರದ ಶ್ರೀನಿವಾಸ ಶಿಕ್ಷಣ ಸಂಸ್ಥೆಯ ಜೊತೆಗೆ ಒಪ್ಪಂದ ನಡೆಸಲಾಗಿದ್ದು, ಅಲ್ಲಿನ ತಜ್ಞರು ಕ್ಯಾಬ್ ಹಾಗೂ ಕಾರು ಚಾಲಕರಿಗೆ ಅಲ್ಲದೆ ಸುಂಕ ವಸೂಲಿ ಸಿಬ್ಬಂದಿಗಳೂ ತರಬೇತಿಯನ್ನು ನೀಡಲಾಗಿದೆ ಎಂದು ವಿ.ವಿ.ರಾವ್ ಹೇಳಿದರು.
Comments are closed.