ಕರಾವಳಿ

ಚುನಾವಣಾ ಅಕ್ರಮ ತಡೆಗೆ ಸೂಕ್ತ ಕ್ರಮ : ಚಿನ್ನಾಭರಣ, ಹಣಸಾಗಾಟಕ್ಕೆ ದಾಖಲೆ ಅಗತ್ಯ- ಮದುವೆ, ಗೃಹ ಪ್ರವೇಶಕ್ಕೂ ಅನುಮತಿ ಕಡ್ಡಾಯ

Pinterest LinkedIn Tumblr

ಮಂಗಳೂರು : ಭಾರತ ಚುನಾವಣಾ ಆಯೋಗವು ರಾಜ್ಯ ವಿಧಾನಸಭಾ ಸಾರ್ವತ್ರಿಕಾ ಚುನಾವಣೆ-2018ನ್ನು ನಡೆಸುವ ಬಗ್ಗೆ ಮಾರ್ಚ್ 27 ರಂದು ಚುನಾವಣಾ ವೇಳಾ ಪಟ್ಟಿಯೊಂದಿಗೆ ಘೋಷಿಸಿದ್ದು, ಮಾರ್ಚ್ 27 ರಿಂದ ಮಾದರಿ ನೀತಿ ಸಂಹಿತೆ ಜ್ಯಾರಿಯಲ್ಲಿರುತ್ತದೆ.  ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುತ್ತದಂತೆ ತಡೆಗಟ್ಟುವ ಉದ್ದೇಶದಿಂದ ವಿಧಾನ ಸಭಾ ಕ್ಷೇತ್ರವಾರು ವಿವಿಧ ತಂಡಗಳನ್ನು ರಚಿಸಲಾಗಿದೆ.

ಸದರಿ ಚುನಾವಣೆಯ ಮಾದಿ ನೀತಿ ಸಂಹಿತೆಯು ಮೇ. 18 ರ ವರೆಗೆ ಜ್ಯಾರಿಯಲ್ಲಿದ್ದು, ಈ ಅವಧಿಯಲ್ಲಿ ಸಾರ್ವಜನಿಕರು ಯಾವುದೇ ರಾಜಕೀಯೇತರ ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಸಂಬಂಧಪಟ್ಟ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳಿಗೆ ಮುಂಚಿತವಾಗಿ ಮಾಹಿತಿಯನ್ನು ನೀಡುವುದು ಹಾಗೂ ಚುನಾವಣಾ ನೀತಿ ಸಂಹಿತೆಗಳನ್ನು ನೋಡಿಕೊಳ್ಳಬೇಕು.

ಸಾರ್ವಜನಿಕರು ರೂ. 50,000 ಕ್ಕಿಂತ ಹೆಚ್ಚು ನಗದು ಮೊಬಲಗನ್ನು ಕೊಂಡೊಯ್ಯುತ್ತಿರುವ ಸಂದರ್ಭದಲ್ಲಿ ಪೂರಕ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಮದ್ಯಪಾನ ಹಾಗೂ ಯಾವುದೇ ರೀತಿಯ ಉಡುಗೊರೆ ಸಾಮಾಗ್ರಿಗಳ ಮೊತ್ತವು ರೂ. 10,000 ಗಳಿಗಿಂತ ಹೆಚ್ಚಿನ ಇದ್ದಲ್ಲಿ, ವಶಕ್ಕೆ ಪಡೆಯಲಾಗುವುದು. ದಾಖಲೆ ಸಹಿತ ರೂ. 10 ಲಕ್ಷಕ್ಕಿಂತ ಹೆಚ್ಚು ಮೊಬಲಗನ್ನು ಸಾಗಿಸುತ್ತಿದ್ದಲ್ಲಿ, ಪ್ರಕರಣವನ್ನು ಮುಂದಿನ ತನಿಖೆಗೆ ಆದಾಯ ತೆರಿಗೆ ಇಲಾಖೆಯ ಸುಪರ್ದಿಗೆ ನೀಡಲಾಗುವುದು.

ಈ ಅವಧಿಯಲ್ಲಿ ಯಾವುದೇ ಅನುಮಾನಸ್ಪದ ಹಣವನ್ನು ವಶಪಡಿಸಿಕೊಂಡಿದ್ದಲ್ಲಿ, ನಿಖರತೆ ಬಗ್ಗೆ ಪರಾಮರ್ಶಿಸಿ, ತುರ್ತಾಗಿ ತೀರ್ಮಾನಿಸಲು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನೇತೃತ್ವದ ಜಿಲ್ಲಾ ಚುನಾವಣಾ ವೆಚ್ಚ ಮೇಲ್ವಿಚಾರಣ ಸಮಿತಿಗೆ ಹಸ್ತಾಂತರಿಸಲಾಗುವುದು, ಸಾರ್ವಜನಿಕರು ಯಾವುದೇ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಸಹಕರಿಬೇಕಾಗಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಡಾ. ಸಸಿಕಾಂತ್ ಸೆಂಥಿಲ್ ಅವರು ತಿಳಿಸಿದ್ದಾರೆ.

ಇಕ್ಕಟ್ಟಿನಿಂದ ಪಾರಾಗಲು ಕೊಂಡೊಯ್ಯುವ ವಸ್ತುಗಳ ದಾಖಲೆಗಳನ್ನು ಜತೆಗಿರಿಸಿಕೊಳ್ಳಿ :

ಚುನಾವಣಾ ದಿನಾಂಕ ಘೋಷಣೆಯಾದ ಕ್ಷಣದಿಂದಲೇ ನೀತಿ ಸಂಹಿತೆಯೂ ಜಾರಿಯಾಗಿದೆ. ಚುನಾವಣೆ ಜಾರಿಗೊಂಡ ಬಳಿಕ ಕಾರ್ಯಾಂಗವು ಸಂಪೂರ್ಣವಾಗಿ ಚುನಾವಣಾ ಆಯೋಗದ ಅಧೀನಕ್ಕೆ ಒಳಪಟ್ಟು ಕಾರ್ಯನಿರ್ವಹಿಸುತ್ತದೆ. ಅದರ ಮೂಲಕ ಚುನಾವಣಾ ಆಯೋಗವು ಎಲ್ಲ ರೀತಿಯ ಆಗುಹೋಗು, ವ್ಯವಹಾರ, ಚಲನವಲನಗಳ ಮೇಲೆ ಹದ್ದಿನ ಕಣ್ಣಿರಿಸಿ ಚುನಾವಣಾ ಅಕ್ರಮಗಳನ್ನು ತಡೆಯಲು ಶ್ರಮಿಸುತ್ತದೆ. ಈ ಹಿನ್ನೆಲೆಯಲ್ಲಿ ಸಂಚಾರದ ವೇಳೆ ಜನಸಾಮಾನ್ಯರು ಕೆಲವು ಎಚ್ಚರಿಕೆಗಳನ್ನು ವಹಿಸುವುದರೊಂದಿಗೆ ತಾವು ಕೊಂಡೊಯ್ಯುವ ವಸ್ತುಗಳ ದಾಖಲೆಗಳನ್ನು ಜತೆಗಿರಿಸಿಕೊಂಡರೆ ಅನಗತ್ಯ ಮುಜುಗರ, ಇಕ್ಕಟ್ಟುಗಳಿಂದ ಪಾರಾಗಬಹುದು.

ಈಗಾಗಲೇ ಜಿಲ್ಲೆಯಲ್ಲಿ 24×7 ಚೆಕ್‌ಪೋಸ್ಟ್‌ ಗಳು ಅಲ್ಲಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಪೊಲೀಸರು ವಾಹನಗಳ ತಪಾಸಣೆಯಲ್ಲಿ ನಿರತರಾಗಿದ್ದಾರೆ. ಚುನಾವಣೆ ಹೊತ್ತಿನಲ್ಲಿ ಯಾವುದೇ ಅಕ್ರಮ ವಹಿವಾಟುಗಳು ಜರಗದೆ, ಅದು ಸುಗಮವಾಗಬೇಕು ಎಂಬುದಕ್ಕಾಗಿ ವಾಹನ ತಪಾಸಣೆ ನಡೆಯುತ್ತಿದೆ. ಹೀಗಾಗಿ ಜನರು ಬೆಲೆಬಾಳುವ ವಸ್ತುಗಳು, ನಗದನ್ನು ಕೊಂಡೊಯ್ಯುವಾಗ ಸೂಕ್ತ ದಾಖಲೆಗಳನ್ನು ಇರಿಸಿಕೊಳ್ಳುವುದು ಅವಶ್ಯವಾಗಿದೆ.

ಸಾರ್ವಜನಿಕರು 50,000 ರೂ.ಗಳಿಗಿಂತ ಮೇಲ್ಪಟ್ಟು ನಗದು ಒಯ್ಯುವಾಗ ಸೂಕ್ತ ದಾಖಲೆಗಳನ್ನು ಇರಿಸಿಕೊಳ್ಳಬೇಕು. ಎಟಿಎಂ ಅಥವಾ ಬ್ಯಾಂಕ್‌ನಿಂದ 50,000 ರೂ.ಗಳಿಗಿಂತ ಹೆಚ್ಚು ಮೊತ್ತವನ್ನು ಡ್ರಾ ಮಾಡಿದರೆ ರಶೀದಿಯನ್ನು ತಪ್ಪದೇ ಜತೆಗಿರಿಸಿಕೊಳ್ಳಬೇಕು. ಇತರ ಯಾವುದೇ ಮೂಲಗಳಿಂದ ಈ ಕನಿಷ್ಠ ಮಿತಿಗಿಂತ ಹೆಚ್ಚು ಹಣ ಪಡೆದುಕೊಂಡರೂ ಚೆಕ್‌ ಪೋಸ್ಟ್‌ನಲ್ಲಿ ತಪಾಸಣೆಗೊಳಪಡಿಸಿದಾಗ ಸೂಕ್ತ ದಾಖಲೆ ಹಾಜರುಪಡಿಸಬೇಕು.

ನೀತಿ ಸಂಹಿತೆ ಜಾರಿಯಲ್ಲಿರುವಾಗ ನಗದು ಕೊಂಡೊಯ್ಯುವುದಕ್ಕೆ ಯಾವುದೇ ಮಿತಿ ಇಲ್ಲದಿದ್ದರೂ 10 ಲಕ್ಷ ರೂ. ಗಳಿಗಿಂತ ಹೆಚ್ಚಿನ ಮೊತ್ತವನ್ನು ದಾಖಲೆ ಸಹಿತ ಕೊಂಡೊಯ್ದರೂ ಆದಾಯ ತೆರಿಗೆ ಇಲಾಖೆಗೆ ಮಾಹಿತಿ ನೀಡಲಾಗುತ್ತದೆ. ಆದರೆ ಸೂಕ್ತ ದಾಖಲೆಗಳಿದ್ದರೆ ಯಾವುದೇ ಸಮಸ್ಯೆ ಉಂಟಾಗದು.

ಕೇವಲ ಹಣ ಮಾತ್ರವಲ್ಲ, ಚಿನ್ನಾಭರಣ ಅಥವಾ ಇತರ ಬೆಲೆಬಾಳುವ ವಸ್ತುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೊಂಡೊಯ್ಯುವಾಗಲೂ ಅದಕ್ಕೂ ಸೂಕ್ತ ದಾಖಲೆ ಇರಿಸಿಕೊಂಡು ತಪಾಸಣೆ ನಿರತರು ಕೇಳಿದಾಗ ಹಾಜರುಪಡಿಸಬೇಕಾಗುತ್ತದೆ.

ಇದು ಶುಭ ಸಮಾರಂಭಗಳ ಋತು; ಮದುವೆ ಬಟ್ಟೆ, ಚಿನ್ನಾಭರಣ ಖರೀದಿ ಸಾಮಾನ್ಯ. ಚಿನ್ನಾಭರಣ, ವಸ್ತ್ರ ಅಥವಾ ಇತರ ಗೃಹಪಯೋಗಿ ವಸ್ತುಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿಸಿ ಒಂದೆಡೆಯಿಂದ ಇತರೆಡೆಗೆ ಕೊಂಡೊಯ್ಯುವಾಗ ಅದರ ಬಿಲ್‌ ಪಾವತಿ ರಶೀದಿಯನ್ನು ಜತೆಗಿರಿಸಿ ಕೊಳ್ಳುವುದು ಒಳ್ಳೆಯದು.

ಸೂಕ್ತ ದಾಖಲೆ ಇಲ್ಲದೇ ಮಿತಿಗಿಂತ ಹೆಚ್ಚಿನ ನಗದು ಅಥವಾ ಇತರ ವಸ್ತುಗಳನ್ನು ಕೊಂಡೊಯ್ದಲ್ಲಿ ಕಾನೂನುಬಾಹಿರ ನಗದು ವರ್ಗಾವಣೆ ಪ್ರಕರಣ ದಾಖಲಾಗುತ್ತದೆ. ವಾಹನದಲ್ಲಿ ಯಾವುದೇ ಪಕ್ಷದ ಚಿಹ್ನೆ, ಧ್ವಜ ಅಥವಾ ಸಣ್ಣ ಕುರುಹುಗಳಿದ್ದರೂ ಅದನ್ನು ಪಕ್ಷದ ಉದ್ದೇಶಕ್ಕೆಂದೇ ಗುರುತಿಸುವ ಸಾಧ್ಯತೆಗಳೂ ಇವೆ. ಈ ನಿಟ್ಟಿನಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ದಾಖಲೆಗಳನ್ನು ಇಟ್ಟುಕೊಂಡೇ ತೆರಳುವುದು ಉತ್ತಮವಾಗಿದೆ.

ಖಾಸಗಿ ಶುಭಸಮಾರಂಭ ( ಮದುವೆ – ಗೃಹ ಪ್ರವೇಶ ಸೇರಿದಂತೆ) ಗಳ ಮೇಲೆ ನೀತಿ ಸಂಹಿತೆ ಪರಿಣಾಮ ಬೀರುವುದಿಲ್ಲ. ಆದರೆ ಸಂಬಂಧಪಟ್ಟವರು NOC (ನೋ ಆಬ್ಜೆಕ್ಷನ್‌ ಸರ್ಟಿಫಿಕೇಟ್‌) ಅನುಮತಿ ಪತ್ರವನ್ನು ಜಿಲ್ಲಾಡಳಿತದ ಕಡೆಯಿಂದ ಪಡೆದುಕೊಳ್ಳುವುದು ಉತ್ತಮ. ಒಂದು ವೇಳೆ ಸಮಾರಂಭದ ಏರ್ಪಾಟು, ಒದಗಿಸಲಾದ ಊಟ ಉಪಾಹಾರ, ಕೊಡುಗೆ ಇತ್ಯಾದಿಗಳಲ್ಲಿ ರಾಜಕೀಯ ಮುಖಂಡರ ಪಾತ್ರದ ಬಗ್ಗೆ ದೂರು ಬಂದಲ್ಲಿ ಕ್ರಮತೆಗೆದುಕೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Comments are closed.