ಕರ್ನಾಟಕ

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಶಂಕಿತ ನವೀನ್ ಕುಮಾರ್ ವಶಕ್ಕೆ ಪಡೆದ ಎಸ್ಐಟಿ; ಮಂಪರು ಪರೀಕ್ಷೆಗೆ ಮನವಿ

Pinterest LinkedIn Tumblr

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ವಿಶೇಷ ತನಿಖಾ ದಳ(ಎಸ್ಐಟಿ) ಯಿಂದ ಬಂಧಿಸಲ್ಪಟ್ಟಿರುವ ಆರೋಪಿ ಕೆ.ಟಿ. ನವೀನ್ ಕುಮಾರ್ ಅವರನ್ನು ತೀವ್ರತರದ ತನಿಖೆಗೆ ಒಳಪಡಿಸಲಾಗಿದೆ.

ಹೀಗೆ ತನಿಖೆ ನಡೆಸಿದ್ದ ವೇಳೆ ಆರೋಪಿಯು ಗೌರಿ ಲಂಕೇಶ್ ಹತ್ಯೆಗೆ ಕೆಲ ಗಂಟೆಗಳು ಬಾಕಿ ಇರುವಾಗಲೇ ಆಕೆಯ ಮನೆಯ ಸುತ್ತಲಿನ ಪ್ರದೇಶಗಳಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದ ಎನ್ನುವುದು ತಿಳಿದುಬಂದಿದೆ.

ಆರೋಪಿ ನವೀನ್ ನನ್ನು ಮೂರನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ಎಸ್ಐಟಿ ತಮ್ಮ ತನಿಖೆಗೆ ಅನುಕೂಲವಾಗುವಂತೆ ಆರೋಪಿಗೆ ಮಂಪರು ಪರೀಕ್ಷೆ ನಡೆಸಲು ಅವಕಾಶವನ್ನು ಕೋರಿದೆ. ಎಸ್ಐಟಿ ಮನವಿಯನ್ನು ಆಲಿಸಿದ ನ್ಯಾಯಾಲಯ ಈ ಸಂಬಂಧದ ತನ್ನ ಆದೇಶವನ್ನು ಮಾರ್ಚ್ 12ರವರೆಗೆ ಕಾಯ್ದಿರಿಸಿದೆ.

ಇದಕ್ಕೂ ಮುನ್ನ ಎಸ್ಐಟಿ ತನ್ನ ತನಿಖಾ ವರದಿಗಳನ್ನು ಮೊಹರು ಮಾಡಿದ್ದ ಕವರ್ ನಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿತ್ತು.

ಆರೋಪಿಯನ್ನು ಇನ್ನಷ್ಟು ವಿವರವಾಗಿ ತನಿಖೆಗೆ ಒಳಪಡಿಸುವ ಸಲುವಾಗಿ ಈತನನ್ನು ಹಲವು ಸ್ಥಳಗಳಿಗೆ ಕರೆದೊಯ್ಯಬೇಕಾಗಿದೆ. ಹೀಗಾಗಿ ಆರೋಪಿಯ ನ್ಯಾಯಾಂಗ ಬಂಧನ ಅವಧಿಯನ್ನು ಇನ್ನೂ ಐದು ದಿನಗಳವರೆಗೆ ವಿಸ್ತರಿಸಬೇಕೆಂದು ಪಬ್ಲಿಕ್ ಪ್ರಾಸಿಕ್ಯೂಟರ್ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಆದರೆ ಪ್ರಕರಣದಲ್ಲಿ ಯಾವುದೇ ಹೊಸ ಬೆಳವಣಿಗೆ ಕಂಡುಬಂದಿಲ್ಲ. ಎಸ್ಐಟಿ ವಿನಾಕಾರಣ ಈ ರೀತಿಯಾಗಿ ಆರೋಪಿಯ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆಗೆ ಮನವಿ ಮಾಡುತ್ತಿದೆ ಎಂದು ಪ್ರತಿವಾದಿ ವಕೀಲರು ವಾದಿಸಿದ್ದಾರೆ.

ಕಡೆಗೆ ಎರಡೂ ಪಕ್ಷದವರ ವಾದವನ್ನು ಆಲಿಸಿದ ನ್ಯಾಯಾಲಯ ಆರೋಪಿ ನವೀನ್ ನ್ಯಾಯಾಂಗ ಬಂಧನ ಅವಧಿಯನ್ನು ಮಾ.13ರವರೆಗೆ ವಿಸ್ತರಿಸಿ ಆದೇಶ ನೀಡಿದೆ.

Comments are closed.