ಕರಾವಳಿ

ಉಪ್ಪುಂದ ಉರ್ದು ಶಾಲೆ ಮುಖ್ಯ ಶಿಕ್ಷಕಿ ವಿರುದ್ಧ ಪೋಷಕರು ಗರಂ: ಶಾಲೆಗೆ ಮಕ್ಕಳನ್ನು ಕಳಿಸದ ಪೋಷಕರು!

Pinterest LinkedIn Tumblr

ಕುಂದಾಪುರ: ಗುರುಗಳೆಂದರೇ ಮಕ್ಕಳಿಗೆ ಅಚ್ಚುಮೆಚ್ಚಿರೋದು ಮಾಮೂಲಿ. ಆದರೇ ಮಕ್ಕಳೇ ನಮಗೆ ಆ ಟೀಚರ್ ಬೇಡ ಅಂತಾ ಹೇಳೋಕೆ ಶುರು ಮಾಡಿದ್ರೇ ಅಲ್ಲೇನೋ ಸಮಸ್ಯೆಯಿದೆ ಎಂದರ್ಥ. ಹೀಗೆ ಮಕ್ಕಳನ್ನು ಈ ಶಾಲೆಗೆ ಕಳಿಸಲ್ಲ ಅಂತಾ ಪೋಷಕರು ಪಟ್ಟು ಹಿಡಿದ್ರು. ಬೈಂದೂರು ತಾಲೂಕಿನ ಉಪ್ಪುಂದದಲ್ಲಿರುವ ಸರಕಾರಿ ಶಾಲೆಯಲ್ಲಿ ಬುಧವಾರ ನಡೆದ ಹೈಡ್ರಾಮಾ.

ಒಂದೆಡೆ ಶಾಲೆಯ ಗೇಟಿನಿಂದ ಹೊರಗೆ ಕುಳಿತಿರುವ ವಿದ್ಯಾರ್ಥಿಗಳು. ಮತ್ತೊಂದೆಡೆ ಶಾಲೆ ಆವರಣದಲ್ಲಿ ಪೋಷಕರ ಧರಣಿ. ಪೋಷಕರನ್ನು ಮನವೊಲಿಸಲು ಸರ್ಕಸ್ ಮಾಡುತ್ತಿರೋ ಕ್ಷೇತ್ರ ಶಿಕ್ಷಣಾಧಿಕಾರಿ. ಆದರೇ ಯಾರ ಮಾತಿಗೂ ಕ್ಯಾರೇ ಅನ್ನದ ಪೋಷಕರು. ನಮಗೆ ಆ ಟೀಚರ್ ಬೇಡವೇ ಬೇಡ ಅನ್ನೋ ಮಕ್ಕಳು. ಇದೆಲ್ಲಾ ಘಟನೆಗಳಿಗೆ ಸಾಕ್ಷಿಯಾಗಿದ್ದು ಬೈಂದೂರು ತಾಲೂಕಿನ ಉಪ್ಪುಂದದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಉರ್ದು ಶಾಲೆ. ಹೌದು.. ಶಾಲೆಯಲ್ಲಿರೋ ವಿದ್ಯಾರ್ಥಿಗಳೇ ನಮಗೆ ಆ ಟೀಚರ್ ಬೇಡ. ಅವರು ಸರಿಯಾಗಿ ಪಾಠ ಮಾಡಲ್ಲ, ನಮಗೆ ಹೊಡಿತಾರೆ ಎಂದು ದೂರಿನ ಸರಮಾಲೆಯನ್ನೇ ಅಧಿಕಾರಿಗಳ ಮುಂದಿಟ್ರು. ಇಷ್ಟೆ ಅಲ್ಲಾ ಆ ಟೀಚರ್ ಶಾಲೆಯಲ್ಲಿದ್ರೆ ಮಕ್ಕಳನ್ನು ಸುತರಾಂ ಶಾಲೆಗೆ ಕಳಿಸೋದೆ ಇಲ್ಲ. ಶಾಲೆಗೆ ಬೀಗ ಹಾಕಿ ಎಂದು ವಿದ್ಯಾರ್ಥಿಗಳ ಪೋಷಕರು ಆಕ್ರೋಷ ವ್ಯಕ್ತಪಡಿಸಿದ್ರು. ಈ ಶಾಲೆಯ ಮುಖ್ಯಶಿಕ್ಷಕಿ ಮಮತಾ ಎನ್ನುವವರ ವಿರುದ್ಧ ಪೋಷಕರ ಆಕ್ರೋಷದ ಕಟ್ಟೆಯೇ ಒಡೆದಿತ್ತು. ಶಾಲೆಯಲ್ಲಿ ಎರಡು ದಿನದಿಂದ ಪಾಠ ಪ್ರವಚನ ಇರಲೇ ಇಲ್ಲ. ಇದನ್ನೆಲ್ಲಾ ಸರಿಪಡಿಸಲು ಸ್ಥಳಕೆ ಬಂದ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಓ.ಆರ್. ಪ್ರಕಾಶ್ ಅವರು ಪರಿಪರಿಯಾಗಿ ವಿನಂತಿಸಿದ್ರೂ ಕೂಡ ಪೋಷಕರು ಮಕ್ಕಳನ್ನು ಶಾಲೆಯೊಳಕ್ಕೆ ಕಳಿಸೋಕೆ ಒಪ್ಪಲೇ ಇಲ್ಲ.

ಅಷ್ಟಕ್ಕೂ ಪೋಷಕರ ಆಕ್ರೋಷಕ್ಕೂ ಕಾರಣವಿತ್ತು. ಇತ್ತೀಚೆಗೆ ಶಾಲೆಯಲ್ಲಿ ಎಸ್.ಡಿ.ಎಂ.ಸಿ. ಸಭೆ ವೇಳೆ ನಿರ್ಣಯ ಪುಸ್ತಕಕ್ಕೆ ಸಹಿ ಹಾಕುವ ವಿಚಾರದಲ್ಲಿ ಎಸ್.ಡಿ.ಎಂ.ಸಿ ಸದಸ್ಯರು ಮತ್ತು ಮುಖ್ಯಶಿಕ್ಷಕಿ ನಡುವೆ ಸಣ್ಣ ವಾಗ್ವಾದ ನಡೆದಿತ್ತು. ಇದೇ ವೇಳೆ ಪೊಲೀಸರ ಆಗಮನವಾಗಿದ್ದು ಎಸ್.ಡಿ.ಎಂ.ಸಿ. ಸದಸ್ಯ ಮೋಹನಚಂದ್ರ ಎನ್ನುವವರ ಮೇಲೆ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಆರೋಪ ಹೊರಿಸಿ ಅವರನ್ನು ಬಂಧಿಸಲಾಗಿತ್ತು. ಈ ವಿಚಾರದ ನಂತರ ಪೋಷಕರು ಗರಂ ಆಗಿದ್ದಾರೆ. ಪಾಠ ಪ್ರವಚನ ಸರಿಯಾಗಿ ಮಾಡದಿರುವ ಶಿಕ್ಷಕಿ ಸುಳ್ಳು ದೂರು ನೀಡಿದ್ದಾರೆಂದು ಆರೋಪಿಸಿ ಮಂಗಳವಾರವೂ ವಿದ್ಯಾರ್ಥಿಗಳನ್ನು ಶಾಲೆಗೆ ಕಳಿಸಿರಲಿಲ್ಲ. ಬುಧವಾರವೂ ಶಾಲೆಗೆ ಬೀಗ ಹಾಕಿ ಶಾಲೆಯೆದುರು ಪೋಷಕರು ಧರಣಿ ಆರಂಭಿಸಿದರು. ಬಿಇಓ ಸ್ಥಳಕ್ಕೆ ಬಂದಾಗಲೂ ಈ ಶಿಕ್ಷಕಿ ಮರಳಿ ಈ ಶಾಲೆಗೆ ಬರಬಾರದು ಎಂಬ ಆಗ್ರಹ ಪೋಷಕರದ್ದಾಗಿತ್ತು. ಸುಮಾರು ಒಂದೂವರೆ ತಾಸುಗಳ ಕಾಲ ಮನವೊಲಿಕೆ ಮಾಡಲು ಯತ್ನಿಸಿದರೂ ಕೂಡ ಪೋಷಕರು ಒಪ್ಪಲಿಲ್ಲ. ಬಿಸಿಲಿನ ತಾಪಕ್ಕೆ ಇಬ್ಬರು ವಿದ್ಯಾರ್ಥಿಗಳು ಕುಸಿದು ಬಿದ್ದರು. ಕೂಡಲೇ ಅವರನ್ನು 108 ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲಾಯಿತು.

ಹೆಗ್ಡೆ ಮನವೊಲಿಕೆ ಯಶಸ್ವಿ..!
ಇದೇ ವೇಳೆ ಅಚಾನಕ್ ಆಗಿ ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಈ ಮಾರ್ಗವಾಗಿ ಬರುತ್ತಾ ಶಾಲೆಗೆ ಆಗಮಿಸಿದ್ರು. ಬಿಇಓ ಅವರ ಬಳಿ ವಿಚಾರ ತಿಳಿದುಕೊಂಡು ಮೇಲಾಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮದ ಭರವಸೆಯನ್ನು ಪೋಷಕರಿಗೆ ನೀಡಿದ್ರು. ಇವರ ಆಶ್ವಾಸನೆ ಬಳಿಕ ನಾಳೆಯಿಂದ ಶಾಲೆಗೆ ಮರಳಿ ವಿದ್ಯಾರ್ಥಿಗಳನ್ನು ಕಳುಹಿಸುವುದಾಗಿ ಪೋಷಕರು ಒಪ್ಪಿಕೊಂಡ್ರು. ಉಪ್ಪುಂದ ಶಾಲೆಯಲ್ಲಿ ನಡೆದ ಗೊಂದಲಕ್ಕೆ ಸದ್ಯ ಒಂದು ಹಂತದ ಪರಿಹಾರ ಸಿಕ್ಕಂತಾಗಿದೆ. ಮುಂದಿನ ದಿನದಲ್ಲಿ ಸಂಬಂದಪಟ್ಟ ಇಲಾಖೆ ಈ ಬಗ್ಗೆ ಸೂಕ್ತ ಗಮನಹರಿಸಿ ಮಕ್ಕಳ ಶೈಕ್ಷಣಿಕ ಬದುಕಿಗೆ ಸಮಸ್ಯೆಯಾಗದಂತೆ ಎಚ್ಚರಿಕೆ ವಹಿಸಬೇಕಿದೆ.

ಇತ್ತ ತನ್ನ ಮೇಲೆ ಹಲ್ಲೆ ನಡೆಸಿ, ಸರಕಾರಿ ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆಂದು ಮುಖ್ಯಶಿಕ್ಷಕಿ ಮಮತಾ ಅವರು ಬೈಂದೂರು ಠಾಣೆಗೆ ದೂರು ನೀಡಿದ್ದಾರೆ. ಎಸ್.ಡಿ.ಎಂ.ಸಿ ಅಧ್ಯಕ್ಷೆ, ಸದಸ್ಯ ಮೋಹನಚಂದ್ರ ಹಾಗೂ ಇತರೆ ಸದಸ್ಯರ ಮೇಲೆ ದೂರು ದಾಖಲಾಗಿದ್ದು ಮೋಹನಚಂದ್ರ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಮಮತಾ ಅವರು ಬೈಂದೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಮಾಧ್ಯಮಕ್ಕೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ಚಿತ್ರ,ವರದಿ- ಯೋಗೀಶ್ ಕುಂಭಾಸಿ

Comments are closed.