ಕೌಲಾಲಂಪುರ : ಬಾಂಗ್ಲಾದೇಶದ 20ರ ಹರೆಯದ ತರುಣನೋರ್ವ ಮಲೇಶ್ಯದ ಕೌಲಾಲಂಪುರ ವಿಮಾನ ನಿಲ್ದಾಣದಿಂದ ಢಾಕಾಗೆ ಹೊರಟ ಮ್ಯಾಲಿಂಡೋ ಏರ್ ವಿಮಾನದಲ್ಲಿ ಬಟ್ಟೆ ಕಳಚಿಕೊಂಡು ತನ್ನ ಲ್ಯಾಪ್‌ಟಾಪ್‌ನಲ್ಲಿ ಬ್ಲೂ ಫಿಲ್ಮ್ ವೀಕ್ಷಿಸಿ ವಿಮಾನದ ಪರಿಚಾರಿಕೆಯ ಮೇಲೆ ಹಲ್ಲೆ ಗೈದಿರುವುದಾಗಿ ವರದಿಯಾಗಿದೆ.
ಆರೋಪಿ ಬಾಂಗ್ಲಾದೇಶೀ ತರುಣನು ಮಲೇಶ್ಯನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಯಾಗಿದ್ದಾನೆ. ತನ್ನ ಬಟ್ಟೆಗಳನ್ನು ಕಳಚಿಕೊಂಡು ಲ್ಯಾಪ್ ಟಾಪ್‌ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದ ಆತನಿಗೆ ಬಟ್ಟೆ ಧರಿಸಿಕೊಳ್ಳುವಂತೆ ವಿಮಾನದ ಚಾಲಕ ಸಿಬಂದಿ ಕೇಳಿಕೊಂಡರು. ಆಗ ಆತ ಅಲ್ಲೇ ಇದ್ದ ವಿಮಾನ ಪರಿಚಾರಿಕೆಯನ್ನು ಅಪ್ಪಿಕೊಳ್ಳಲು ಯತ್ನಿಸಿದ. ಇದಕ್ಕೆ ಆಕೆ ಪ್ರತಿರೋಧ ತೋರಿದಾಗ ಸಿಟ್ಟುಗೊಂಡ ಆತ ಆಕೆಯ ಮೇಲೆ ಹಲ್ಲೆ ನಡೆಸಿದ ಎಂದು ಸ್ಥಳೀಯ ಪತ್ರಿಕೆ ನ್ಯೂ ಸ್ಟ್ರೇಟ್ ಟೈಮ್ಸ ವರದಿ ಮಾಡಿದೆ.
ತತ್‌ಕ್ಷಣವೇ ಚಾಲಕ ಸಿಬಂದಿ ಆತನ ಮೇಲೇರಿ ಆತನನ್ನು ನಿಷ್ಕ್ರಿಯಗೊಳಿಸಿ ಆತನ ಕೈಗಳನ್ನು ಬಟ್ಟೆಯ ತುಂಡಿನಿಂದ ಕಟ್ಟಿ ಹಾಕಿದರು. ತರುಣನು ಈ ರೀತಿಯಾಗಿ ವರ್ತಿಸಲು ಏನು ಕಾರಣ ಎಂಬುದು ತಿಳಿಯಲಿಲ್ಲ.
ಇಂಡೋನೇಶ್ಯದ ಕಂಪೆನಿಯೊಂದರ ಉಪಸಂಸ್ಥೆಯಾಗಿರುವ ಏರ್ ಲೈನ್, ಈ ಘಟನೆಯನ್ನು ದೃಢೀಕರಿಸಲು ಅಥವಾ ಆ ಬಗ್ಗೆ ಯಾವುದೇ ಹೆಚ್ಚಿನ ವಿವರ ಕೊಡಲು ನಿರಾಕರಿಸಿದೆ. “ಢಾಕಾಗೆ ಹೋಗುತ್ತಿದ್ದ ವಿಮಾನದಲ್ಲಿ ದುರ್ವರ್ತನೆ ತೋರಿ ಉಪಟಳ ನೀಡಿದ ಪ್ರಯಾಣಿಕನನ್ನು ಹಾರಾಟ ಮುಗಿಯುವ ವರೆಗಿನ ಅವಧಿಗೆ ಕಟ್ಟಿ ಹಾಕಲಾಯಿತು. ವಿಮಾನ ಢಾಕಾದಲ್ಲಿ ಇಳಿದೊಡನೆಯೇ ಆತನನ್ನು ಬಂಧಿಸಲಾಯಿತು’ ಎಂದು ಅಧಿಕೃತ ಹೇಳಿಕೆ ನೀಡಿದೆ.