ಕರಾವಳಿ

ಮಂಗಳೂರಿನ ಆಸ್ಪತ್ರೆಗಳ ಜೊತೆ ಕೀನ್ಯಾ ಒಪ್ಪಂದ : ಮಂಗಳೂರಿಗೆ ಆಗಮಿಸಿದ ಕೀನ್ಯಾ ದೇಶದ ನಿಯೋಗ

Pinterest LinkedIn Tumblr

ಮಂಗಳೂರು, ಮಾರ್ಚ್ 6: ಮಂಗಳೂರಿನ ಆಸ್ಪತ್ರೆಗಳು ಅಂತಾರಾಷ್ಟ್ರೀಯ ವೈದ್ಯಕೀಯ ಪ್ರವಾಸೋದ್ಯಮಕ್ಕೆ ಸಂಬಂಧಿಸಿ ಕೀನ್ಯಾ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಈ ಪ್ರಕ್ರಿಯೆಗಾಗಿ ಕೀನ್ಯಾ ದೇಶದ ಮೊಂಬಾಸ ರಾಜ್ಯದ ಆರೋಗ್ಯಾಧಿಕಾರಿ ಮುಂದಾಳತ್ವ ದಲ್ಲಿ 10 ಮಂದಿಯ ನಿಯೋಗವೊಂದು ಮಂಗಳೂರಿಗೆ ಆಗಮಿಸಿದೆ.

ಇದೇ ಪ್ರಥಮ ಬಾರಿಗೆ ಅಂತಾರಾಷ್ಟ್ರೀಯ ವೈದ್ಯಕೀಯ ಪ್ರವಾಸೋದ್ಯಮಕ್ಕೆ ಸಂಬಂಧಿಸಿ ಭಾನುವಾರ ಸಂಜೆ ಮಂಗಳೂರಿಗೆ ಆಗಮಿಸಿದ ಕೀನ್ಯಾ ದೇಶದ 10 ಮಂದಿಯ ನಿಯೋಗವನ್ನು ರಾಜ್ಯ ಆಹಾರ ಸಚಿವ ಯು.ಟಿ.ಖಾದರ್ ಸ್ವಾಗತಿಸಿದರು.

ಬಳಿಕ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಚಿವರು, ಇದು ಮೊಂಬಾಸ ಸರ್ಕಾರ ಮತ್ತು ಮಂಗಳೂರಿನ ಆಸ್ಪತ್ರೆಗಳ ನಡುವಿನ ಒಪ್ಪಂದ ಮಾತ್ರವಲ್ಲದೆ, ಎರಡು ನಗರಗಳ ನಡುವಿನ ಒಪ್ಪಂದವೂ ಆಗಿದೆ.ಮಂಗಳೂರಿನಲ್ಲಿ ನಿಯೋಗವು ಪ್ರಥಮ ಹಂತದಲ್ಲಿ ಕಣಚೂರು ಆಸ್ಪತ್ರೆ, ಯೇನೆಪೋಯ ಆಸ್ಪತ್ರೆ ಮತ್ತು ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕೋಲಜಿಗೆ ಭೇಟಿ ನೀಡಿ ಒಪ್ಪಂದಕ್ಕೆ ಸಹಿ ಮಾಡಿಕೊಂಡಿದೆ. ಹೊಸ ಒಡಂಬಡಿಕೆಯಿಂದ ಉಭಯ ನಗರಗಳಿಗೆ ಉಪಯೋಗಗಳಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮೊಂಬಾಸದ ಮುಖ್ಯ ಆರೋಗ್ಯ ಅಧಿಕಾರಿ ಡಾ. ಖತೀಜಾ ಸೂಡ್ ಶೇಕ್ಲಿ ಅವರು, ಮೊಂಬಾಸ ರಾಜ್ಯದ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಟೆಕ್ನಿಶಿಯನ್‌ಗಳು ಮಂಗಳೂರಿಗೆ ಬಂದು ತರಬೇತಿ ಪಡೆಯುವುದು, ಅಲ್ಲಿನ ರೋಗಿಗಳು ಮಂಗಳೂರಿಗೆ ಬಂದು ಚಿಕಿತ್ಸೆ ಪಡೆಯುವುದು ಈ ಒಪ್ಪಂದದಲ್ಲಿ ಸೇರಿದೆ. ಹೊರ ದೇಶದ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುವುದರಿಂದ ಮಂಗಳೂರಿನಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿಯಾಗಲಿದೆ ಎಂದು ಹೇಳಿದರು.

ಕೀನ್ಯಾ ದೇಶದಲ್ಲಿ ಒಂದೇ ಒಂದು ರೇಡಿಯೋಥೆರಪಿ ಕೇಂದ್ರ ಇದ್ದು, ಮಂಗಳೂರಿನಲ್ಲಿ ಹಲವಾರು ಕೇಂದ್ರಗಳಿವೆ. ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಮುಂದುವರಿದಿರುವ ಮಂಗಳೂರಿನಲ್ಲಿ ರೋಬೋಟಿಕ್, ಸ್ಪೈನಲ್ ಶಸ್ತ್ರಚಿಕಿತ್ಸಾ ಸೌಲಭ್ಯಗಳಿವೆ. ನೇರ ವಿಮಾನಯಾನ ಸೌಲಭ್ಯ ಇರುವುದರಿಂದ ಕೀನ್ಯಾದ ರೋಗಿಗಳು ಇಲ್ಲಿಗೆ ಬಂದು ಚಿಕಿತ್ಸೆ ಪಡೆಯಲು ಹೆಚ್ಚಿನ ಅನುಕೂಲವಿದೆ.

ಮುಂಬೈಯಲ್ಲಿ ಚಿಕಿತ್ಸೆ ಪಡೆಯುವುದಕ್ಕಿಂತ ಮಂಗಳೂರಿಗೆ ಬಂದರೆ ಖರ್ಚೂ ಕಡಿಮೆಯಾಗುತ್ತದೆ. ಆದ್ದರಿಂದ ಈಗ ಮಾಡಲಾದ ಒಪ್ಪಂದವನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ಆಸ್ಪತ್ರೆಗಳೊಂದಿಗೆ ವಿಸ್ತರಿಸಲು ಯೋಜಿಸಲಾಗಿದೆ ಎಂದವರು ಒಪ್ಪಂದಕ್ಕೆ ಸಂಬಂಧಪಟ್ಟ ಸಮಗ್ರ ವಿವರ ನೀಡಿದರು.

Comments are closed.