ಕ್ರೀಡೆ

ದಕ್ಷಿಣ ಆಫ್ರಿಕಾದ ಡಿ’ಕಾಕ್‌ ಮೇಲೆ ಹಲ್ಲೆಗೆ ಮುಂದಾದ ಆಸ್ಪ್ರೇಲಿಯಾದ ಡೇವಿಡ್‌ ವಾರ್ನರ್‌

Pinterest LinkedIn Tumblr

ಡರ್ಬನ್‌: ಪ್ರಥಮ ಟೆಸ್ಟ್‌ ಪಂದ್ಯದ ವೇಳೆ ದಕ್ಷಿಣ ಆಫ್ರಿಕಾದ ಕ್ವಿಂಟನ್‌ ಡಿ’ಕಾಕ್‌ ಮತ್ತು ಆಸ್ಪ್ರೇಲಿಯಾದ ಡೇವಿಡ್‌ ವಾರ್ನರ್‌ ಅವರ ಮಧ್ಯೆ ನಡೆದ ಜಟಾಪಟಿಯ ಕುರಿತು ತನಿಖೆ ನಡೆಸಲು ಕ್ರಿಕೆಟ್‌ ಆಸ್ಪ್ರೇಲಿಯಾ(ಸಿಎ) ಮುಂದಾಗಿದೆ.

ಕಿಂಗ್ಸ್‌ಮೀಡ್‌ ಮೈದಾನದಲ್ಲಿ ನಡೆದ ಪ್ರಥಮ ಟೆಸ್ಟ್‌ನ 4ನೇ ದಿನದ ಚಹಾ ವಿರಾಮದ ವೇಳೆ ವಾರ್ನರ್‌ ಮತ್ತು ಡಿ’ಕಾಕ್‌ ಮಧ್ಯೆ ಈ ಜಟಾಪಟಿ ನಡೆದಿದ್ದು, ಸಿಸಿ ಕೆಮರಾದಲ್ಲಿ ಇದು ಸೆರೆಯಾಗಿದೆ. ತಮ್ಮ ಪತ್ನಿಯ ಕುರಿತಾಗಿ ಮೈದಾನದಲ್ಲಿ ಡಿ’ಕಾಕ್‌ ಅಸಭ್ಯ ಪದಗಳನ್ನು ಪ್ರಯೋಗಿಸಿದ್ದರು ಎಂದು ವಾರ್ನರ್‌ ಆರೋಪಿಸಿದ್ದಾರೆ. ಅಲ್ಲದೆ ಮೈದಾನದಲ್ಲಿ ನಡೆದ ಈ ಕುರಿತಾಗಿ ನಡೆದ ಮಾತಿನ ಚಕಮಕಿ ಡ್ರೆಸಿಂಗ್‌ ರೂಮ್‌ವರೆಗೂ ಮುಂದುವರಿದಿದೆ.

ಚಹಾ ವಿರಾಮಕ್ಕಾಗಿ ಉಭಯ ತಂಡಗಳು ತಮ್ಮ ಡ್ರೆಸಿಂಗ್‌ ರೂಮ್‌ಗೆ ಮರಳುವ ವೇಳೆ ಡಿ’ಕಾಕ್‌ಗೆ ವಾರ್ನರ್‌ ಡ್ರೆಸಿಂಗ್‌ ರೂಮ್‌ನ ಮೆಟ್ಟಿಲುಗಳ ಬಳಿ ಕಾದು ನಿಂತಿದ್ದರು. ಡಿ’ಕಾಕ್‌ ಅಲ್ಲಿಗೆ ಆಗಮಿಸುತ್ತಲೇ ಅವರ ವಿರುದ್ಧ ವಾರ್ನರ್‌ ಕೂಗಾಡಲು ಆರಂಭಿಸಿದರು. ಅಲ್ಲದೆ ಡಿ’ಕಾಕ್‌ ಅವರ ಮೇಲೇರಿ ಹೋಗುವ ರೀತಿಯಲ್ಲಿ ಕೋಪೋದ್ರಿಕ್ತರಾಗಿ ಮುನ್ನುಗ್ಗಿದರು. ಈ ಸಂದರ್ಭದಲ್ಲಿ ಆಸೀಸ್‌ ತಂಡದ ಸಹ ಆಟಗಾರರು ವಾರ್ನರ್‌ ಅವರನ್ನು ಸಮಾಧಾನ ಪಡಿಸಿ ತಮ್ಮ ಡ್ರೆಸಿಂಗ್‌ ರೂಮ್‌ಗೆ ಕರೆದೊಯ್ದರು.

”ಘಟನೆಯ ಬಗ್ಗೆ ಕ್ರಿಕೆಟ್‌ ಆಸ್ಪ್ರೇಲಿಯಾಗೆ ಅರಿವಿದ್ದು, ಏನು ನಡೆದಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ನಿರತರಾಗಿದ್ದೇವೆ. ಅಲ್ಲಿಯವರೆಗೆ ಈ ಬಗ್ಗೆ ಯಾವುದೇ ಹೇಳಿಕೆ ನೀಡುವುದಿಲ್ಲ,” ಎಂದು ಕ್ರಿಕೆಟ್‌ ಆಸ್ಪ್ರೇಲಿಯಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Comments are closed.