ಕರಾವಳಿ

ಕುಂದಾಪುರ ಕಾಂಗ್ರೆಸ್‌ನಿಂದ ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ಸ್ಪರ್ಧೆ ಖಚಿತ?

Pinterest LinkedIn Tumblr

ಕುಂದಾಪುರ: ಕಾಂಗ್ರೆಸ್‌ನ ಕಾರ್ಮಿಕ ಘಟಕವಾಗಿರುವ ಇಂಟೆಕ್‌ಗೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೆಲ ಸ್ಥಾನ ನೀಡಬೇಕೆಂಬ ಬೇಡಿಕೆ ಸಲ್ಲಿಸಲಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಸುಮಾರು ೫ ಸ್ಥಾನ ಇಂಟೆಕ್‌ಗೆ ಸಿಗುವ ಸಾಧ್ಯತೆ ಇದೆ. ಈ ನಡುವೆಯೇ ಇಂಟೆಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ವಿಧಾನಸಭೆಗೆ ಸ್ಪರ್ಧಿಸಲಿದ್ದು ಕುಂದಾಪುರದಲ್ಲಿ ಕಣಕ್ಕಿಳಿಯಲಿದ್ದಾರೆಂಬ ಸುದ್ದಿಯನ್ನು ಸ್ವತಃ ರಾಕೇಶ್ ಮಲ್ಲಿ ಸ್ಪಷ್ಟ ಪಡಿಸಿದ್ದು ತಾನು ಕೂಡ ಆಕಾಂಕ್ಷಿ ಎಂದು ಬಹಿರಂಗ ಪಡಿಸಿದ್ದಾರೆ. ಕುಂದಾಪುರದಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಸ್ವತಃ ಅವರೇ ಈ ವಿಚಾರ ಹೇಳಿದರು.

ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ಕುಂದಾಪುರದಿಂದ ಸ್ಪರ್ಧೆಗೆ ಇಳಿಯಲು ಕುಂದಾಪುರದ ಕೆಲವು ಕಾಂಗ್ರೆಸ್ ನಾಯಕರ ಪ್ರತ್ಯಕ್ಷ ಹಾಗೂ ಪರೋಕ್ಷ ಬೆಂಬಲ ಇದೆ. ಇನ್ನು ರಾಕೇಶ್ ಮಲ್ಲಿ ಅವರು ಕೆಲ ತಿಂಗಳುಗಳಿಂದ ಕುಂದಾಪುರ ಕ್ಷೇತ್ರದಾದ್ಯಂತ ಪ್ರವಾಸ ಕೈಗೊಂಡಿರುವುದು ಮಾತ್ರವಲ್ಲದೇ ಕುಂದಾಪುರದಲ್ಲಿ ಮನೆಯನ್ನು ಮಾಡಿಕೊಂಡು ತೆರೆಯ ಹಿಂದೆಯೇ ಅಬ್ಬರದ ಪ್ರಚಾರವನ್ನು ಮಾಡುತ್ತಾ, ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ವಿಶ್ವಾಸ ಗಳಿಸುವ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.

ನಾಳೆ (ಡಿ.9) ಕುಂದಾಪುರದಲ್ಲಿ ಕಾಂಗ್ರೆಸ್ ಇಂಟೆಕ್ ಸಮಾವೇಶ
ಕುಂದಾಪುರದ ವಿಧಾಸಭಾ ಕ್ಷೇತ್ರದಲ್ಲಿ ಅಸಂಘಟಿತ ಕಾರ್ಮಿಕರನ್ನು ಒಗ್ಗೂಡಿಸಿ ಅವರಿಗೆ ಸಿಗಬೇಕಾದ ಸರಕಾರದ ಸೌಲಭ್ಯಗಳ ಬಗ್ಗೆ ತಿಳಿವಳಿಕೆ ನೀಡುವ ಉದ್ದೇಶದಿಂದ ಡಿ.9ರಂದು ಶನಿವಾರ ಬೆಳಿಗ್ಗೆ 10 ಗಂಟೆಗೆ ಕುಂದಾಪುರದ ಆರ್.ಎನ್ ಶೆಟ್ಟಿ ಸಭಾಭವನದಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಇಟೆಂಕ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಇಟಂಕ್ ಅಧ್ಯಕ್ಷ ರಾಕೇಶ್ ಮಲ್ಲಿ ಹೇಳಿದ್ದಾರೆ. ಕುಂದಾಪುರದಲ್ಲಿ ಗುರುವಾರ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು.

ರಾಜ್ಯದ ಹಲವೆಡೆಯಲ್ಲಿ ಕಾಂಗ್ರೆಸ್ ಇಂಟಕ್ ಸಂಘಟನೆ ಮೂಲಕ ಕಾರ್ಮಿಕರ ಕುಂದು ಕೊರತೆ ಆಲಿಸುವ ಕೆಲಸ ನಿರಂತವಾಗಿ ಆಗುತ್ತಿದೆ. ಕಳೆದ ನಾಲ್ಕೂವರೆ ವರ್ಷಗಳಿಂದ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಿ ಸರಕಾರದಿಂದ ದೊರಕಿಸಿಕೊಡಬೇಕಾದ ಸವಲತ್ತುಗಳನ್ನು ದೊರಕಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದವರು ಹೇಳಿದರು.

ಕಾರ್ಯಕ್ರಮವನ್ನು ಎ‌ಐಸಿಸಿ ಪ್ರಧಾನ ಕಾರ್ಯದರ್ಶಿ ಆಸ್ಕರ್ ಫೆರ್ನಾಂಡಿಸ್ ಉದ್ಘಾಟಿಸಲಿದ್ದು, ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ, ಜಿಲ್ಲಾ ಉ‌ಅಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಗಣಿ ಮತ್ತು ಭೂಸ್ವಾಧೀನ ಸಚಿವ ವಿನಯ ಕುಲಕರ್ಣಿ, ಬೈಂದೂರು ಶಾಸಕ ಹಾಗೂ ಕೆ‌ಎಸ್‌ಆರ್‌ಟಿಸಿ ಅಧ್ಯಕ್ಷ ಕೆ. ಗೋಪಾಲ ಪೂಜಾರಿ, ಶಾಸಕ ವಿನಯಕುಮಾರ್ ಸೊರಕೆ ಸೇರಿದಂತೆ ಪಕ್ಷದ ಸ್ಥಳೀಯ ಹಾಗೂ ರಾಜ್ಯ ಮಟ್ಟದ ನಾಯಕರು, ಪ್ರಮುಖರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್, ಪಕ್ಷದ ಮುಖಂಡರಾದ ಮಾಣಿ ಗೋಪಾಲ್, ಚಂದ್ರ ಅಮೀನ್, ಕೆದೂರು ಸದಾನಂದ ಶೆಟ್ಟಿ ಉಪಸ್ಥಿತರಿದ್ದರು.

Comments are closed.