ಕರಾವಳಿ

ಶಾಲೆ ಬಳಿಯ ಬಾರ್ ಉದ್ಘಾಟನೆಗೆ ಬಂದ ಮೇಯರ್‌ಗೆ ವಿಧ್ಯಾರ್ಥಿಗಳಿಂದ ಘೆರವು – ಸ್ಥಳದಿಂದ ಹಿಂತಿರುಗಿದ ಮೇಯರ್

Pinterest LinkedIn Tumblr

ಮಂಗಳೂರು, ಡಿಸೆಂಬರ್.8: ನಗರದ ಕುಂಟಿಕಾನ ಬಳಿ ನೂತನವಾಗಿ ಆರಂಭಗೊಂಡ ಬಾರ್ ಎಂಡ್ ರೆಸ್ಟೋರೆಂಟೊಂದರ ಉದ್ಘಾಟನೆ ಬಂದಿದ್ದ ಮೇಯರ್ ಕವಿತಾ ಸನಿಲ್ ಅವರಿಗೆ ಸಮೀಪದ ಶಾಲಾ ವಿದ್ಯಾರ್ಥಿಗಳು ಹಾಗೂ ಸ್ಥಳೀಯರು ಘೆರವು ಹಾಕಿದ ಘಟನೆ ಗುರುವಾರ ನಡೆಯಿತು.

ಕುಂಟಿಕಾನ ಜಂಕ್ಷನ್ನಲ್ಲಿ ಆರಂಭವಾಗುವ ನೂತನ ಬಾರ್‌ನ ಉದ್ಘಾಟನೆಯನ್ನು ಗುರುವಾರ ಬೆಳಗ್ಗೆ ಮೇಯರ್ ನೆರವೇರಿಸಬೇಕಿತ್ತು. ಆದರೆ ಬಾರ್ ಎಂಡ್ ರೆಸ್ಟೋರೆಂಟ್ ಸಮೀಪದಲ್ಲೇ ಒಂದು ಶಾಲೆ ಇದ್ದು, ಈ ಶಾಲೆಯ ಬಳಿ ಬಾರ್ ಆರಂಭವಾಗುವುದನ್ನು ವಿರೋಧಿಸಿ ಉದ್ಘಾಟನೆಗೂ ಮುನ್ನ ಶಾಲಾ ವಿದ್ಯಾರ್ಥಿಗಳು ಪ್ರತಿಭಟನೆ ಹಮ್ಮಿಕೊಂಡಿದ್ದರು. ಇವರ ಈ ಪ್ರತಿಭಟನೆಗೆ ವಿದ್ಯಾರ್ಥಿಗಳ ಫೋಷಕರು ಹಾಗೂ ಸ್ಥಳೀಯರ್ ಬೆಂಬಲ ನೀಡಿದ್ದರು.

ನೂತನ ಬಾರ್ ಸಮೀಪವೇ ಶಾಲೆ ಇದೆ. ಶಾಲಾ ಕಂಪೌಂಡ್ನಿಂದ ನೂರು ಮೀಟರ್ ಅಂತರದ ಒಳಗೆ ಬಾರ್ ಆರಂಭಗೊಳ್ಳುತ್ತಿದೆ. ಜೊತೆಗೆ ನಗರದಲ್ಲಿಯೇ ಹೆಸರುವಾಸಿಯಾದ ಎ.ಜೆ.ಆಸ್ಪತ್ರೆ ಕೂಡ ಸಮೀಪದಲ್ಲೇ ಇದೆ. ಹೀಗಿರುವಾಗ ಯಾವೂದೇ ಕಾರಣಕ್ಕೂ ಇಲ್ಲಿ ಬಾರ್ ಎಂಡ್ ರೆಸ್ಟೋರೆಂಟ್ ಆರಂಭವಾಗಬಾರದು ಎಂದು ವಿದ್ಯಾರ್ಥಿಗಳು ಮನವಿ ಮಾಡಿದರು.

ಬಾರ್ ಉದ್ಘಾಟನೆಗೆ ಆಗಮಿಸಿದ ಮೇಯರ್ ಅವರು ಶಾಲಾ ಸಮೀಪ ಬಾರ್ ಎಂಡ್ ರೆಸ್ಟೋರೆಂಟ್ ತೆರೆಯುವುದಕ್ಕೆ ವಿರೋಧವಿರುವುದನ್ನು ಮನಗಂಡು ಹಾಗೂ ಸ್ಥಳದಲ್ಲಿ ಪ್ರತಿಭಟನೆ ನಡೆಯುತ್ತಿರುವುದನ್ನು ಕಂಡು, ಬಾರ್ ಅನ್ನು ಉದ್ಘಾಟಿಸದೇ ಅಲ್ಲಿಂದ ತೆರಳಿದರು.

ಬಾರ್ ಎಂಡ್ ರೆಸ್ಟೋರೆಂಟ್ ನ ಮಾಲಕರು ತಮ್ಮ ಆತ್ಮೀಯರಾಗಿದ್ದ ಕಾರಣ ಅವರ ಕರೆಯ ಮೇರೆಗೆ ತಾನು ಉದ್ಘಾಟನೆಗೆ ಬಂದಿದ್ದೆ, ಆದರೆ ಇಲ್ಲಿ ಬಾರ್ ಎಂಡ್ ರೆಸ್ಟೋರೆಂಟ್ ಆರಂಭಕ್ಕೆ ವಿರೋಧವಿರುವ ಹಿನ್ನೆಲೆಯಲ್ಲಿ ತಾನು ಉದ್ಘಾಟಿಸದೆ ತೆರಳುತ್ತಿರುವುದಾಗಿ ಈ ವೇಳೆ ಮೇಯರ್ ತಿಳಿಸಿದ್ದಾರೆ.

ಶಾಲೆಯ ರಕ್ಷಕ-ಶಿಕ್ಷಕ ಸಂಘದ ಪ್ರತಿನಿಧಿ ಜಾಸ್ಮಿನ್ ಡಿಸೋಜ ಅವರು ಮಾತನಾಡಿ, ಶಾಲೆ ಎದುರು ಬಾರ್ ಆಯಂಡ್ ರೆಸ್ಟೋರೆಂಟ್ ಆರಂಭವಾಗುವುದರ ವಿರುದ್ಧ ನಾವು ಅಬಕಾರಿ ಆಯುಕ್ತರ ಬಳಿ, ಜಿಲ್ಲಾಧಿಕಾರಿ ಬಳಿ ದೂರು ನೀಡಿದ್ದೇವೆ. ಆದರೆ ಯಾರಿಂದಲೂ ಇದುವರೆಗೆ ಸ್ಪಂದನೆ ದೊರಕಿಲ್ಲ.ನಾವು ಅಳತೆ ಮಾಡಿದಾಗ ಈ ರೆಸ್ಟೋರೆಂಟ್ 80 ಮೀಟರ್ ಅಂತರದಲ್ಲಿ ಇರುವುದು ಸ್ಪಷ್ಟವಾಗಿದೆ. ಇದನ್ನು ನಾವು ವಿರೋಧಿಸುತ್ತಿದ್ದೇವೆ” ಎಂದರು. ”ಬಾರ್ ಮಾಲಕರು ಕಾನೂನು ಪ್ರಕಾರ ನಾವು ಸರಿ ಇದ್ದೇವೆ ಎಂದು ಹೇಳುತ್ತಿದ್ದಾರೆ. ಆದರೆ ಬಾರ್ ಶಾಲೆಯವ 100 ಮೀಟರ್ ಒಳಗಡೆ ಇದೆ ಎಂದು ಅವರು ಆರೋಪಿಸಿದರು.

ನಾವು ಕಾನೂನು ಪ್ರಕಾರವೇ ಪರವಾನಿಗೆ ಪಡೆದು ಬಾರ್ ಎಂಡ್ ರೆಸ್ಟೋರೆಂಟ್ ಆರಂಭಿಸುತ್ತಿದ್ದೇವೆ. ಸಂಬಂಧಪಟ್ಟ ಇಲಾಖೆಯವರು ಪರಿಶೀಲನೆ ನಡೆಸಿ ನಮಗೆ ಪರವಾನಿಗೆ ನೀಡಿದ್ದಾರೆ. ಆದ್ದರಿಂದ ಇದಕ್ಕೆ ಅಡ್ಡಿಪಡಿಸುವುದು ಸರಿಯಲ್ಲ ಎಂದು ಬಾರ್ ಮಾಲಕರು ತಿಳಿಸಿದ್ದಾರೆ.

ಮೇಯರ್ ತೆರಳಿದ ಬಳಿಕ ಉದ್ಘಾಟನೆಗೊಂಡ ಬಾರ್ :

ಆದರೆ ಮೇಯರ್ ತೆರಳಿದ ಬಳಿಕ ನಿಗದಿತ ಸಮಯದಲ್ಲಿಯೇ ಬಾರ್ ಉದ್ಘಾಟನೆ ಕಾರ್ಯ ನಡೆಯಿತು. ಉಪಮೇಯರ್ ರಜನೀಶ್ ಹಾಗೂ ಸ್ಥಳೀಯ ಮನಪಾ ಸದಸ್ಯರು,ಕೆಲ ಜನಪ್ರತಿನಿಧಿಗಳು, ಗಣ್ಯರು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಬಾರ್ ಉದ್ಘಾಟನೆ ಮೇಯರ್ ಸ್ಥಾನಕ್ಕೆ ತಕ್ಕುದ್ದಲ್ಲ :

ನಮ್ಮ ದೇಶದಲ್ಲಿ ಮೇಯರ್ ಸ್ಥಾನಕ್ಕೆ ತುಂಬಾ ಗೌರವವಿದೆ. ಅವರನ್ನು ನಮ್ಮ ನಗರದ ಪ್ರಥಮ ಪ್ರಜೆ ಎಂದು ಕರೆಯುತ್ತಾರೆ. ಅವರಿಂದ ಜನತೆ ಬಹಳಷ್ಟು ನಿರೀಕ್ಷೆ ಮಾಡಿರುತ್ತಾರೆ. ಮೇಯರ್ ನಡೆ ಯಾವಾಗಲೂ ನಮ್ಮ ಸಮಾಜದ ನಾಗರೀಕರು ಅನುಕರಣೆ ಮಾಡುವಂತಿರ ಬೇಕು. ಅವರು ಸಮಾಜಕ್ಕೆ ಮಾದರಿಯಾಗಬೇಕು. ಅಂತಹ ಜವಾಬ್ದಾರಿಯುತ ಉನ್ನತ ಮಟ್ಟದ ಸ್ಥಾನದಲ್ಲಿರುವ ಮೇಯರ್ ಈ ಬಾರ್, ವೈನ್ ಶಾಪ್ ಮುಂತಾದ ಮಳಿಗೆಗಳ ಉದ್ಘಾಟನೆಗೆ ಒಪ್ಪಿಕೊಳ್ಳುವುದು ಅಷ್ಟೊಂದು ಸಮಂಜಸವಲ್ಲ. ಮಾತ್ರವಲ್ಲದೇ ಈ ಮೇಯರ್, ಕಾರ್ಪೊರೇಟರ್ ಗಳು ಬರೀ ಉದ್ಘಾಟನೆಗಳಲ್ಲಿಯೇ ಕಾಲ ಕಳೆದರೆ ನಗರದ ಅಭಿವೃದ್ಧಿ ಹೇಗೆ ಸಾದ್ಯ ಎಂದು ಸ್ಥಳದಲ್ಲಿದ್ದ ಸಾರ್ವಜನಿಕರೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Comments are closed.