ಅಬ್ದುಲ್ ವಹೀದ್ ಮತ್ತು ಸಾದಿಕ್ ಅಲಿ
ಅಯೋಧ್ಯೆ: ಸುಮಾರು ಎರಡು ದಶಕಗಳಿಂದ ರಾಮ ಜನ್ಮಭೂಮಿಯನ್ನು ಭಾರೀ ಮಳೆ, ಬಿರುಗಾಳಿಯಿಂದ ರಕ್ಷಿಸಲು ಉತ್ತರ ಪ್ರದೇಶದ ಲೋಕೋಪಯೋಗಿ ಇಲಾಖೆ ಅಬ್ದುಲ್ ವಹೀದ್ ಅವರ ನೆರವು ಪಡೆಯುತ್ತಿದೆ. ಬಟ್ಟೆ ಹೊಲಿಯುವ ಕೆಲಸ ಮಾಡುವ ಇಲ್ಲಿನ ಸಾದಿಕ್ ಅಲಿ ಹಲವಾರು ವರ್ಷಗಳಿಂದ ರಾಮನ ಮೂರ್ತಿಗೆ ವಿಶೇಷ ವಸ್ತ್ರ ಹೊಲಿದುಕೊಡುತ್ತಿದ್ದಾರೆ. ಇವರ ಗೆಳೆಯ ಮೆಹಬೂಬ್ ಇಲ್ಲಿನ ವಿದ್ಯುತ್ ಕೆಲಸ ನೋಡಿಕೊಳ್ಳುತ್ತಿದ್ದಾರೆ.
ಅಯೋಧ್ಯೆ ಎಂದಾಕ್ಷಣ ನೆನಪಾಗುವುದು ರಾಮ. ಹಿಂದೆಯೇ ನೆನಪಿಗೆ ಬರುವುದು ಹಿಂದೂ– ಮುಸ್ಲಿಂ ಗಲಭೆಯ ಚಿತ್ರಣ. ಆದರೆ, ಈ ಮೂರು ಮಂದಿ ಮುಸ್ಲಿಮರು ಹಲವು ವರ್ಷಗಳಿಂದ ಅಯೋಧ್ಯೆಯಲ್ಲಿ ರಾಮನ ಸೇವೆಯಲ್ಲಿ ತೊಡಗಿದ್ದಾರೆ.
ರಾಮನ ಮೂರ್ತಿಗೆ ವಿಶೇಷ ವಸ್ತ್ರ ಹೊಲಿದುಕೊಡುವಂತೆ ಸಾದಿಕ್ ಅಲಿ ಅವರಿಗೆ ರಾಮ ಜನ್ಮಭೂಮಿಯ ಪ್ರಧಾನ ಅರ್ಚಕರು ಆಗಾಗ ಬೇಡಿಕೆ ಸಲ್ಲಿಸುತ್ತಿರುತ್ತಾರೆ. ರಾಮ ಮೂರ್ತಿಗೆ ವಸ್ತ್ರ ಹೊಲಿಯುವುದು ಹೆಮ್ಮೆಯ ವಿಷಯ ಎನ್ನುವ ಸಾದಿಕ್, ‘ನಮ್ಮೆಲ್ಲರಿಗೂ ದೇವರು ಒಬ್ಬನೇ’ ಎನ್ನುತ್ತಾರೆ.
ಮೆಹಬೂಬ್ 1995ರಲ್ಲಿ ಮೊದಲ ಬಾರಿಗೆ ರಾಮ ಜನ್ಮಭೂಮಿಗೆ ತ್ರೀ ಫೇಸ್ ಮೋಟಾರ್ ತಂದವರು. ಇಲ್ಲಿನ ಅಡುಗೆಕೋಣೆಗೆ ಸೀತಾ ಕುಂಡದಿಂದ ನೀರು ಪಂಪ್ ಮಾಡಲು ಈ ಮೋಟಾರ್ ಅನ್ನು ಬಳಸಲಾಗುತ್ತಿದೆ. ಅಂದಿನಿಂದ ರಾಮ ಜನ್ಮಭೂಮಿಯ ವಿದ್ಯುತ್ ಕೆಲಸಗಳನ್ನು ನೋಡಿಕೊಳ್ಳುತ್ತಿರುವವರು ಇದೇ ಮೆಹಬೂಬ್. ಅಷ್ಟೇ ಅಲ್ಲ ರಾಮನ ಮೂರ್ತಿ ಇರುವ ಪ್ರದೇಶವನ್ನು ಹಗಲೂ ರಾತ್ರಿ ಕಾಯುವ ಕೆಲಸವನ್ನೂ ಮೆಹಬೂಬ್ ಮಾಡುತ್ತಾ ಬಂದಿದ್ದಾರೆ.
‘1994ರಿಂದ ನಾನು ಇಲ್ಲಿ ಕೆಲಸ ಮಾಡುತ್ತಿದ್ದೇನೆ. ನಾನು ನನ್ನ ತಂದೆಯಿಂದ ವೆಲ್ಡಿಂಗ್, ವಿದ್ಯುತ್‌ನ ಕೆಲಸ ಕಲಿತೆ. ನಾನು ಒಬ್ಬ ಭಾರತೀಯ ಮತ್ತು ಹಿಂದೂಗಳು ನನ್ನ ಸಹೋದರರು. ಅವರು ಕಾನ್ಪುರದಿಂದ ವಿದ್ಯುತ್ ಉಪಕರಣಗಳನ್ನು ತರುತ್ತಾರೆ. ನಾನು ಅವನ್ನು ಜೋಡಿಸುವ ಕೆಲಸ ಮಾಡುತ್ತೇನೆ. ನಾನು ಇಲ್ಲಿ ಕೆಲಸ ಮಾಡುತ್ತಿರುವುದಕ್ಕೆ ಹೆಮ್ಮೆ ಇದೆ’ ಎನ್ನುತ್ತಾರೆ ವಹೀದ್.
2005ರಲ್ಲಿ ಎಲ್‌ಇಟಿ ಸಂಘಟನೆಯ ಐದು ಮಂದಿ ಇಲ್ಲಿನ ಭದ್ರತಾ ಸಿಬ್ಬಂದಿ ಮೇಲೆ ಜೀಪ್ ನುಗ್ಗಿಸಿ, ತಾತ್ಕಾಲಿಕ ರಾಮ ಮಂದಿರದ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದನ್ನು ವಹೀದ್ ನೆನಪಿಸಿಕೊಳ್ಳುತ್ತಾರೆ. ‘ಆ ಘಟನೆ ಬಳಿಕ ಮಂದಿರದ ಹೊರಭಾಗದಲ್ಲಿ ಕಬ್ಬಿಣದ ಬೇಲಿಯನ್ನು ನಿರ್ಮಿಸಲಾಯಿತು. ಆ ಬೇಲಿಯ ನಿರ್ಮಾಣ ಕಾರ್ಯದಲ್ಲೂ ನಾನು ಭಾಗಿಯಾಗಿದ್ದೆ. ಅದರ ರಿಪೇರಿ ಕೆಲಸವನ್ನೂ ನಾನೇ ನೋಡಿಕೊಳ್ಳುತ್ತಿದ್ದೇನೆ. ಭಯೋತ್ಪಾದನೆಗೆ ಧರ್ಮ ಇಲ್ಲ. ನನ್ನಂತೆ ಇಲ್ಲಿ ಸಾಕಷ್ಟು ಮಂದಿ ಸಿಆರ್‌ಪಿಎಫ್ ಯೋಧರು ಹಾಗೂ ಪೊಲೀಸರು ಹಗಲೂ ರಾತ್ರಿ ಈ ಪ್ರದೇಶವನ್ನು ಕಾಯುತ್ತಿದ್ದಾರೆ’ ಎಂದು ವಹೀದ್ ಹೇಳುತ್ತಾರೆ.
‘ಕಳೆದ 50 ವರ್ಷಗಳಿಂದಲೂ ನಮ್ಮ ಕುಟುಂಬ ಬಟ್ಟೆ ಹೊಲಿಯುವ ಕೆಲಸ ಮಾಡಿಕೊಂಡು ಬಂದಿದೆ. ಸಂತರು, ಪೂಜಾರಿಗಳು ಸೇರಿದಂತೆ ಹಲವು ಹಿಂದೂಗಳಿಗೆ ನಾವು ಬಟ್ಟೆ ಹೊಲಿದುಕೊಡುತ್ತಿದ್ದೇವೆ. ಜತೆಗೆ ರಾಮ ಮೂರ್ತಿಗೂ ವಿಶೇಷ ವಸ್ತ್ರ ಹೊಲಿದುಕೊಡುತ್ತೇನೆ. ಈ ಕೆಲಸ ಮಾಡುತ್ತಿರುವುದಕ್ಕೆ ನನಗೆ ಹೆಮ್ಮೆ ಇದೆ’ ಎನ್ನುತ್ತಾರೆ ಸಾದಿಕ್ ಅಲಿ.
ಈ ಮೂರು ಮಂದಿ ರಾಮ ಜನ್ಮಭೂಮಿಯ ಹಲವು ಸಂತರು, ಪೂಜಾರಿಗಳ ಜತೆ ಆಗಾಗ ಟೀ– ಕಾಫಿ ಕುಡಿಯುತ್ತಾರೆ ಇಲ್ಲವೇ ಸರಯೂ ನದಿ ತೀರದಲ್ಲಿ ಆಗಾಗ ವಾಯುವಿಹಾರ ನಡೆಸುತ್ತಾರೆ.
ಕೃಪೆ: ಟೈಮ್ಸ್ ಆಫ್ ಇಂಡಿಯಾ