ಕರ್ನಾಟಕ

ಬೆಂಗಳೂರಿನಲ್ಲಿ ವಕೀಲ ಅಮಿತ್ ಕೇಶವಮೂರ್ತಿ ಗುಂಡಿಕ್ಕಿ ಹತ್ಯೆ; ಆಸ್ಪತ್ರೆಗೆ ಸೇರಿಸಿದ್ದ ಮಹಿಳೆಯೂ ಆತ್ಮಹತ್ಯೆಗೆ ಶರಣು

Pinterest LinkedIn Tumblr

ಬೆಂಗಳೂರು: ವಕೀಲ ಅಮಿತ್ ಕೇಶವಮೂರ್ತಿ ಎಂಬುವವರನ್ನು ಶುಕ್ರವಾರ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಸೋಲದೇವನಹಳ್ಳಿಯಲ್ಲಿ ನಡೆದಿದೆ.

ಗೋಪಾಲಕೃಷ್ಣ ಎಂಬುವವರು ಇಂದು ಮಧ್ಯಾಹ್ನ 4 ಗಂಟೆ ಸುಮಾರಿಗೆ ಆಚಾರ್ಯ ಕಾಲೇಜ್ ಬಳಿ ಅಮಿತ್ ಮೇಲೆ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಮಿತ್ ಅವರನ್ನು ಜೊತೆಯಲ್ಲಿದ್ದ ಶೃತಿ ಗೌಡ ಎಂಬ ಮಹಿಳೆ ಅವರನ್ನ ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆಸ್ಪತ್ರೆಗೆ ದಾಖಲಿಸುವ ದಾರಿ ಮಧ್ಯೆಯೇ ಅಮಿತ್ ಕೇಶವಮೂರ್ತಿ ಮೃತಪಟ್ಟಿದ್ದಾರೆ.

ಅಮಿತ್ ನನ್ನು ಆಸ್ಪತ್ರೆ ಸೇರಿಸಿದ ಶೃತಿಗೌಡ ಬಳಿಕ ಆಸ್ಪತ್ರೆ ಬಳಿಯೇ ಇರುವ ಹೋಟೆಲ್ ವೊಂದರಲ್ಲಿ ನಿಗೂಢವಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಘಟನೆ ಬಳಿಕ ಪೊಲೀಸರು ತನಿಖೆಗೆ ಮುಂದಾಗಿದ್ದು, ಘಟನಾ ಸ್ಥಳಕ್ಕೆ ಪೀಣ್ಯ ಹಾಗೂ ಸೋಲದೇವನಹಳ್ಳಿ ಪೊಲೀಸರು ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲೇ ಪ್ರಕರಣ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ. ಆತ್ಮಹತ್ಯೆಗೆ ಶರಣಾದ ಶೃತಿಗೌಡ ಜೊತೆ ಅಮಿತ್ ಗೌಡ ಅನೈತಿಕ ಸಂಬಂಧ ಇಟ್ಟಿಕೊಂಡಿದ್ದರಂತೆ. ಈ ಸಂಬಂಧ ಶೃತಿಗೌಡ ಮನೆಯಲ್ಲಿ ತಿಳಿದು ಇಬ್ಬರಿಗೂ ಬುದ್ದಿ ವಾದ ಹೇಳಿದ್ದಾರೆ. ಆದರೆ, ಬುದ್ದಿ ಕಲಿಯದ ಇಬ್ಬರು ತಮ್ಮ ಅನೈತಿಕ ಸಂಬಂಧ ಮುಂದುವರಿಸಿದ್ದರು.

ಇದರಿಂದ ಆಕ್ರೋಶಗೊಂಡ ಶೃತಿಗೌಡ ಅವರ ಮಾವ ಗೋಪಾಲಕೃಷ್ಣ ಆಚಾರ್ಯ ಕಾಲೇಜಿನ ಬಳಿ ಅಮಿತ್ ಗೌಡನಿಗೆ ಗುಂಡಿಕ್ಕಿದ್ದಾನೆ. ಬಳಿಕ ಗಂಭೀರವಾಗಿ ಗಾಯಗೊಂಡಿದ್ದ ಅಮಿತ್‌ಗೌಡನನ್ನು ಶೃತಿ ಗೌಡ ತನ್ನ ಕಾರಿನಲ್ಲೇ ಕರೆತಂದು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿದ್ದಾಳೆ. ಬಳಿಕ ಶೃತಿ ಲಾಡ್ಜ್`ವೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಸದ್ಯ ಸೋಲದೇವನಹಳ್ಳಿ ಪೊಲೀಸರು ಆರೋಪಿ ಗೋಪಾಲಕೃಷ್ಣನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Comments are closed.