ಕರಾವಳಿ

ಕೃಷಿಕನಿಗೆ ನಷ್ಟ ಮಾಡಿದ ಹೆಮ್ಮಾಡಿಯ ಸೇವಂತಿಗೆ; ಹೆಮ್ಮಾಡಿ ಸೇವಂತಿಗೆ ಬ್ರಹ್ಮಲಿಂಗನಿಗೆ ಬಲು ಇಷ್ಟ..!

Pinterest LinkedIn Tumblr

ಕುಂದಾಪುರ: ಎಲ್ಲಿ ನೋಡಿದರೂ ಕಣ್ಮನ ಸೆಳೆಯುವ ಹಳದಿ ಬಣ್ಣದ ಹೂವಿನದ್ದೇ ಕಾರುಬಾರು. ಈ ಭಾಗಕ್ಕೆ ಬಂದ್ರೇ ಸೇವಂತಿ ಹೂವಿನ ಘಮಘಮ ಸುವಾಸನೆ ಮನಸ್ಸಿಗೆ ಮುದ ನೀಡುತ್ತೆ. ಈ ಬಾರಿ ಸೇವಂತಿ ಬೆಳೆ ಉತ್ತಮವಾಗಿಯೇ ಬಂದಿದೆ ಆದ್ರೂ ಕೂಡ ಬೆಳೆ ಬೆಳೆದ ಕೃಷಿಕನ ಮುಖದಲ್ಲಿ ಮಾತ್ರ ನಗುವಿಲ್ಲ.

ಕುಂದಾಪುರ ತಾಲೂಕಿನ ಹೆಮ್ಮಾಡಿ ಗ್ರಾಮ ಸೇವಂತಿಗೆ ಹೂವು ಬೆಳೆಗೆ ಬಾರೀ ಫೆಮಸ್ಸು. ಹೆಮ್ಮಾಡಿ ಗ್ರಾಮದ ಸುಳ್ಸೆ, ಹೊಸ್ಕಳಿ, ಹರೆಗೋಡು, ಕಟ್ಟು ಸೇರಿದಂತೆ ಈ ಭಾಗದಲಿ 25 ಎಕ್ರೆಗೂ ಅಧಿಕ ಭೂಮಿಯಲ್ಲಿ ಸೇವಂತಿಗೆ ಹೂವನ್ನು ವರ್ಷವೂ ಬೆಳೆಯಲಾಗುತ್ತೆ. ಕರಾವಳಿಯ ಬೇರೆಡೆಗಳಲ್ಲಿ ಎಲ್ಲಿಯೂ ಕಂಡುಬರದ ಈ ಸೇವಂತಿಗೆ ಹೂವಿನ ಬೆಳೆ ಹೆಮ್ಮಾಡಿಯಲ್ಲಿ ಹೇರಳವಾಗಿ ಸಿಗುತ್ತೆ. ಸೇವಂತಿಗೆ ಹೂವಿನ ಸಾಮ್ರಾಜ್ಯವೇ ಧರೆಗಿಳಿದಂತೆ ಈ ಗದ್ದೆಗಳನ್ನು ಕಂಡು ಕಣ್ತುಂಬಿಕೊಳ್ಳುವುದೇ ಒಂದು ಆನಂದವಾದರೆ ಇವುಗಳನ್ನು ಪೋಣಿಸಿ ಹೂಮಾಲೆ ಮಾಡಿ ಹೂವಿಗೆ ಇನ್ನಷ್ಟು ಅಂದ ನೀಡುವ ಮಹಿಳೆಯರ ಕುಸುರಿ ಕೆಲಸ ಇನ್ನೂ ಅಪರೂಪದ್ದು. ಸ್ಥಳೀಯ ಆಡು ಭಾಷೆ ಕುಂದಾಪುರ ಕನ್ನಡದಲ್ಲಿ ಈ ಹೂವನ್ನು ’ಹೆಮ್ಮಾಡಿ ಶ್ಯಾವಂತಿ’ ಎಂದು ಕರಿತಾರೆ. ನೂರಾರು ವರ್ಷಗಳಿಂದಲೂ ಇಲ್ಲಿ ಸೇವಂತಿಗೆ ಬೆಳೆಯುವ ಮೂಲಕ ಕೃಷಿಕರು ಲಾಭದಾಯಕ ಬೆಳೆಯನ್ನಾಗಿಸಿಕೊಂಡಿದ್ರು. ಆದರೇ ಹೆಮ್ಮಾಡಿ ಸೇವಂತಿಗೆ ಈ ಬಾರಿ ಅವಧಿಗೆ ಮುನ್ನವೇ ಅರಳಿದ್ದರಿಂದ ಸೇವಂತಿ ಬೆಳೆಗಾರರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ. ಕಳೆದ ಬಾರಿ ಸೊಳ್ಳೆರೋಗದಿಂದ ಬೆಳೆಗಾರರು ನಷ್ಟ ಅನುಭವಿಸಿದ್ರು. ಆದರೇ ಈ ಬಾರೀ ಹದಿನೈದು ದಿನಗಳ ಮುಂಚೆ ಸೇವಂತಿಗೆ ಬೆಳೆ ಬಂದ ಕಾರಣ ಈ ಭಾಗದ ಸೇವಂತಿ ಬೆಳೆಗಾರರಿಗೆ 10 ಲಕ್ಷಕ್ಕೂ ಅಧಿಕ ನಷ್ಟವಾಗಿದೆ. ಬೆಳಿಗ್ಗೆನಿಂದ ಸಂಜೆಯವರೆಗೂ ಈ ಗದ್ದೆಗಳಲ್ಲಿ ದುಡಿಯುವ ಮಂದಿಯ ಬೆವರಿಗೆ ಬೆಲೆಯಿಲ್ಲದಂತಾಗಿದೆ.

(ಶ್ರೀ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ)

ಹೆಮ್ಮಾಡಿಯಲ್ಲಿ ಬೆಳೆಯುವ ಅಪರೂಪದ ಸೇವಂತಿಗೆ ಹೂವಿಗೆ ಇನ್ನೊಂದು ಐತಿಹಾಸಿಕ ಪುರಾಣವಿದೆ. ಕಾರಣಿಕ ಕ್ಷೇತ್ರವಾದ ಶ್ರೀ ಮಾರಣಕಟ್ಟೆ ಬ್ರಹ್ಮಲಿಂಗೇಶ್ವರನಿಗೆ ಈ ಸೇವಂತಿಗೆ ಪ್ರಿಯವಾದುದು. ಜನವರಿ ತಿಂಗಳಲ್ಲಿ ಬರುವ ಮಕರ ಸಂಕ್ರಮಣ ಕಾಲದಲ್ಲಿ ಶ್ರೀ ಬ್ರಹ್ಮಲಿಂಗನಿಗೆ ಕೆಂಡಸೇವೆಯ ಸಂಭ್ರಮ. ಆ ಸಮಯದಲ್ಲಿ ಸೇವಂತಿಗೆ ಪುಷ್ಪವನ್ನು ಶ್ರೀ ದೇವರಿಗೆ ಅರ್ಪಿಸಿ ಬೇಡಿಕೊಂಡರೇ ಇಷ್ಟಾರ್ಥ ನೆರವೇರುತ್ತೆ ಅನ್ನೋ ನಂಬಿಕೆಯೂ ಇದ್ದು ಸೇವಂತಿಗೆ ಪುಷ್ಪವನ್ನು ಕೆಂಡಕ್ಕೆ ಹಾಕುವ ಹರಕೆ ಹೂವೆಂದು ಕರೆಯಲಾಗುತ್ತೆ. ಮಕರ ಸಂಕ್ರಮಣದಂದು ಬ್ರಹ್ಮಲಿಂಗನಿಗೆ ಹೂವು ಅರ್ಪಿಸಿದ ನಂತರ ಹೆಮ್ಮಾಡಿ ಸೇವಂತಿ ರಾಜ್ಯದ ವಿವಿದೆಡೆಗಳಿಗೆ ಮಾರಾಟಕ್ಕಾಗಿ ಕಳುಹಿಸಲಾಗುತ್ತೆ. ತಮ್ಮ ಗದ್ದೆಗಳಲ್ಲಿ ಮೊದಲು ಬೆಳೆದ ಹೂವನ್ನು ಬ್ರಹ್ಮಲಿಂಗನ ಮುಡಿಗೇರಿದ ಮೇಲೆ ವಿವಿಧ ದೈವಸ್ಥಾನಗಳ ವಾರ್ಷಿಕ ಪೂಜೆಗೆ ಮಾರಾಟ ಮಾಡುವುದು ಇಲ್ಲಿನ ಕೃಷಿಕರ ರೂಢಿ. ಈ ಬಾರಿ ಕೆಂಡಸೇವೆಗೂ ತಿಂಗಳು ಬಾಕಿಯಿರುವಾಗಲೇ ಸೇವಂತಿ ಬೆಳೆ ಬೆಳೆದ ಕಾರಣ ಹೂವಿಗೆ ಬೇಡಿಕೆಯೇ ಇಲ್ಲದಾಗಿದೆ. ಹಸನಾಗಿ ಅರಳಿದ ಹೂವನ್ನು ಸದ್ಯ ಕೊಳ್ಳುವವರಿಲ್ಲ. ಕೊಳ್ಳುವವರಿದ್ದರೂ ನಿಗದಿತ ಬೆಲೆಗೆ ಹೂವು ಮಾರಾಟವಾಗುತ್ತಿಲ್ಲ. ಈ ಬಾರಿ ಮಳೆ ಕಡಿಮೆಯಾಗಿದ್ದು ಚಳಿ ಜಾಸ್ತಿ ಇದ್ದರಿಂದ ಹೂವುಗಳು ಬಹುಬೇಗನೇ ಅರಳಲು ಕಾರಣ ಎನ್ನುತ್ತಾರೆ ಕೃಷಿಕರು. ಜುಲೈ ತಿಂಗಳಿಂದ ಸೇವಂತಿ ಗಿಡಗಳನ್ನು ನೆಟ್ಟು, ನೀರುಣಿಸಿ ಹಗಲಿರುಳು ತಮ್ಮ ಗದ್ದೆಗಳಲ್ಲಿ ಗಿಡಗಳನ್ನು ಪೋಣಿಸಿ ಬೇಕಾದ ರಸಗೊಬ್ಬರಗಳನ್ನು ಹಾಕಿ ಬೆಳೆಸಿದ ಸೇವಂತಿ ಕೃಷಿಯ ಫಸಲು ಚೆನ್ನಾಗಿ ಬಂದರೂ ಹೆಮ್ಮಾಡಿ ರೈತರ ಬದುಕಿನಲ್ಲಿ ನಗು ಮಾತ್ರ ಮಾಯವಾಗಿದೆ.

ಒಟ್ಟಿನಲ್ಲಿ ಹೆಮ್ಮಾಡಿಯ ಭಾಗದ ರೈತರ ಜೇಬಿಗೆ ಒಂದಷ್ಟು ಕಾಸು ಮಾಡಿಕೊಡುತ್ತಿದ್ದ ಸೇವಂತಿಗೆ ಹೂವು ಈ ಬಾರೀ ನಷ್ಟಕ್ಕೆ ದಾರಿ ಮಾಡಿಕೊಟ್ಟಿದೆ. ಸೇವಂತಿ ಬೆಳೆಯುವ ಕೃಷಿಕರ ಗೋಳನ್ನು ಸಂಬಂಧಪಟ್ಟ ಇಲಾಖೆ ಪರಿಗಣನೆಗೆ ತೆಗೆದುಕೊಂಡು ಅವರಿಗೆ ಸೂಕ್ತ ಪರಿಹಾರ ನೀಡುವುದೇ ಎಂಬುದನ್ನು ಕಾದುನೋಡಬೇಕಿದೆ.
———————————-

ವರದಿ, ಚಿತ್ರ- ಯೋಗೀಶ್ ಕುಂಭಾಸಿ

Comments are closed.