ನವದೆಹಲಿ: ನೋಟು ನಿಷೇಧ ಕ್ರಮದ ಬಳಿಕ ಹಳೆಯ 500 ಮತ್ತು 1000 ರು. ನೋಟುಗಳು ಚಲಾವಣೆ ಸ್ಥಗಿತಗೊಳ್ಳುತ್ತಿದ್ದು, ಹೊಸದಾಗಿ ಮುದ್ರಣವಾಗುತ್ತಿರುವ 500 ಮತ್ತು 2000ರು. ಮುಖಬೆಲೆ ನೋಟುಗಳು ಪ್ರಜೆಗಳ ಕೈ ಸೇರುತ್ತಿದೆ. ಹಾಗಾದರೇ ಈ ಹೊಸ ನೋಟುಗಳ ಮುದ್ರಣಕ್ಕೆ ಎಷ್ಟು ವೆಚ್ಚವಾಗುತ್ತದೆ ನಿಮಗೆ ತಿಳಿದಿದೆಯೇ.
ತೀವ್ರ ಕುತೂಹಲ ಕೆರಳಿಸಿರುವ ಈ ಪ್ರಶ್ನೆಗೆ ಆರ್ ಟಿಐ ಅರ್ಜಿಯಿಂದ ಉತ್ತರ ದೊರೆತಿದ್ದು, ಹೊಸ 500 ರು.ಲ ಪ್ರತೀ ನೋಟಿಗೆ 3.09 ರು. ವೆಚ್ಚವಾಗುತ್ತಿದ್ದು, 2000 ರು.ಮುಖಬೆಲೆಯ ಪ್ರತೀ ನೋಟಿಗೆ 3.54 ರ. ವೆಚ್ಚವಾಗಲಿದೆಯಂತೆ. ಆರ್ ಟಿಐ ಕಾರ್ಯಕರ್ತರೊಬ್ಬರು ಸಲ್ಲಿಸಿದ್ದ ಅರ್ಜಿ ಮೇರೆಗೆ ಹೊಸ ನೋಟುಗಳನ್ನು ಮುದ್ರಣ ಮಾಡುತ್ತಿರುವ ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಈ ಮಾಹಿತಿ ನೀಡಿದ್ದು, 500 ರು. ಮುಖಬೆಲೆ 1000 ನೋಟುಗಳ ಮುದ್ರಣಕ್ಕೆ 3,090 ರು. ವೆಚ್ಚವಾಗುತ್ತಿದ್ದು, 2000 ರು.ಮುಖಬೆಲೆಯ ಸಾವಿರ ನೋಟುಗಳ ಮುದ್ರಣಕ್ಕೆ 3, 540 ರು. ವೆಚ್ಚವಾಗುತ್ತಿದೆ ಎಂದು ಬಿಆರ್ ಬಿಎನ್ಎಂಪಿಎಲ್ ಸಂಸ್ಥೆ ತನ್ನ ಉತ್ತರದಲ್ಲಿ ತಿಳಿಸಿದೆ.
ಈ ಹಿಂದೆ ನಿಷೇಧವಾದ 500 ಮಕ್ಕು 1000 ರು. ಮುಖಬೆಲೆಯ ನೋಟುಗಳ ಮುದ್ರಣಕ್ಕೂ ಸರಾಸರಿ ಇದೇ ಪ್ರಮಾಣದ ಹಣ ಖರ್ಚಾಗುತ್ತಿತ್ತು ಎಂದು ಬಿಆರ್ ಬಿಎನ್ಎಂಪಿಎಲ್ ಸಂಸ್ಥೆ ತಿಳಿಸಿದೆ. ಇದೇ ವೇಳೆ ರಿಸರ್ವ್ ಬ್ಯಾಂಕ್ ಹೊಸ 500 ಮುಖಬೆಲೆಯ ಹೊಸ ಆರ್ ಸರಣಿಯ ನೋಟುಗಳನ್ನು ಬ್ಯಾಂಕುಗಳಿಗೆ ಚಲಾವಣೆಗಾಗಿ ನೀಡಿದೆ ಎಂದು ತಿಳಿದುಬಂದಿದೆ. ಅಂತೆಯೇ 50 ರು. ಮುಖಬೆಲೆಯ ಆರ್ ಮತ್ತು ಎಲ್ ಸರಣಿಯ ಹೊಸ ನೋಟುಗಳನ್ನೂ ಕೂಡ ಮುಂದಿನ ದಿನಗಳಲ್ಲಿ ಚಲಾವಣೆಗೆ ನೀಡಲಾಗುತ್ತದೆ ಎಂದು ಆರ್ ಬಿಐ ಅಧ್ಯಕ್ಷ ಊರ್ಜಿತ್ ಪಟೇಲ್ ಅವರು ತಿಳಿಸಿದ್ದಾರೆ.
ಕಳೆದ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ 500 ಮತ್ತು 1000 ರು.ನೋಟುಗಳನ್ನು ನಿಷೇಧಿಸಿದ್ದರು. ಅಂದಿನಿಂದ ಇಂದಿನವರೆಗೂ ದೇಶಾದ್ಯಂತ ಚಲಾವಣೆಯಾಗುತ್ತಿದ್ದ ಸುಮಾರು 15.44 ಲಕ್ಷ ಕೋಟಿ ಹಳೆಯ ನೋಟುಗಳ ಪೈಕಿ ಶೇ.86ರಷ್ಟು ಹಳೆಯ ನೋಟುಗಳು ಈಗಾಗಲೇ ಬ್ಯಾಂಕುಗಳಲ್ಲಿ ಜಮೆಯಾಗಿದೆ. ಹಳೆಯ ನೋಟು ಜಮಾವಣೆ ಇನ್ನು ಕೇವಲ 9 ದಿನಗಳು ಮಾತ್ರ ಬಾಕಿ ಇದ್ದು, ಈ 9 ದಿನಗಳಲ್ಲಿ ಅತ್ಯಲ್ಪ ಪ್ರಮಾಣದ ಹಳೆಯ ನೋಟುಗಳ ಮಾತ್ರ ಬ್ಯಾಂಕ್ ಗೆ ಜಮೆಯಾಗುವ ಸಾಧ್ಯತೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಒಂದು ಬಾರಿ ಮಾತ್ರ 5 ಸಾವಿರ ರು.ಗಿಂತ ಹೆಚ್ಚು ಹಳೆಯ ನೋಟುಗಳನ್ನು ಠೇವಣೆ ಮಾಡುವುದಕ್ಕೆ ಮಿತಿ ಹೇರಿತ್ತು.
ಹೀಗಾಗಿ ಕಪ್ಪುಹಣದ ರೂಪದಲ್ಲಿ ಬಾಕಿ ಉಳಿದಿರುವ ಹಳೆಯ ನೋಟುಗಳ ಚಲಾವಣೆಯಾಗದೇ ಸ್ಥಗಿತವಾಗಲಿದೆ.