ಪ್ರಮುಖ ವರದಿಗಳು

ವರ್ಧಾ ಚಂಡಮಾರುತದ ಭೀತಿಯಲ್ಲಿ ಆಂಧ್ರ ಪ್ರದೇಶ, ತಮಿಳುನಾಡಿ ಜನ; ಭಾರೀ ಗಾಳಿ-ಮಳೆ ಶಾಲಾ-ಕಾಲೇಜುಗಳಿಗೆ ರಜೆ

Pinterest LinkedIn Tumblr

vardah

ಹೈದರಾಬಾದ್: ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿ ಭಾರಿ ಮಳೆಗೆ ಕಾರಣವಾಗಿದ್ದ ವರ್ಧಾ ಚಂಡಮಾರುತ ಇದೀಗ ತಮಿಳುನಾಡು ಮತ್ತು ಆಂಧ್ರ ಪ್ರದೇಶ ಕರಾವಳಿ ತೀರದತ್ತ ಮುಖಮಾಡಿದ್ದು, ಚೆನ್ನೈ ಮತ್ತು ರಾಯಲಸೀಮಾ ಪ್ರದೇಶಗಳಲ್ಲಿ ಮುಂಜಾನೆಯಿಂದಲೇ ಭಾರಿ ಮಳೆಯಾಗುತ್ತಿದೆ.

vardah1

ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದಿಂದಾಗಿ ಉಂಟಾದ ವರ್ಧಾ ಚಂಡಮಾರುತ ಇದೀಗ ತಮಿಳುನಾಡು ಮತ್ತು ಆಂಧ್ರ ಪ್ರದೇಶ ಕರಾವಳಿ ಭಾರಿ ಆತಂಕ ಸೃಷ್ಟಿ ಮಾಡಿದೆ. ವರ್ಧಾ ಚಂಡಮಾರುತದ ಪರಿಣಾಮ ಉಭಯ ರಾಜ್ಯಗಳ ಕರಾವಳಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ಮಧ್ಯಾಹ್ನದ ವೇಳೆಗೆ ಚಂಡಮಾರುತ ಉಭಯ ರಾಜ್ಯಗಳ ಕರಾವಳಿ ತೀರಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಪ್ರತೀ ಗಂಟೆಗೆ 80-90 ಕಿ.ಮೀ ವೇಗದಲ್ಲಿ ಚಂಡಮಾರುತ ಧಾವಿಸುತ್ತಿದ್ದು, ಚಂಡಮಾರುತದ ಪರಿಣಾಮ ಈಗಾಗಲೇ ಎರಡೂ ರಾಜ್ಯಗಳ ಕರಾವಳಿಯಲ್ಲಿ ಭಾರಿ ಪ್ರಮಾಣದ ಅಲೆಗಳು ಏಳುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಯಾವುದೇ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಆಂಧ್ರ ಪ್ರದೇಶದ ರಾಯಲಸೀಮಾ, ನೆಲ್ಲೂರಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ರಾಷ್ಟ್ರೀಯ ವಿಪತ್ತು ನಿಗ್ರಹ ದಳ, ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಪ್ರಮುಖವಾಗಿ ನೆಲ್ಲೂರಿನ ಕೃಷ್ಣಪಟ್ಟಣಂ, ಕೃಷ್ಣಾಜಿಲ್ಲೆಯ ಮಚಲೀಪಟ್ಟಣಂನಲ್ಲಿ ಭಾರಿ ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದೆ. ಕರಾವಳಿ ಭಾಗದಲ್ಲಿ ಯಾವುದೇ ಮೀನುಗಾರರು ತೆರಳದಂತೆ ಬ್ಯಾರಿಕೇಡ್ ಗಳನ್ನು ಹಾಕಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಸುಮಾರು 200ಕ್ಕೂ ಅಧಿಕ ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ 100 ಮೀ ಆಳದಲ್ಲಿ ಈಜಬಲ್ಲ ಮುಳುಗು ತಜ್ಞರನ್ನು ಈಗಾಗಲೇ ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ.

ಇನ್ನು ಚಂಡಮಾರುತ ವರ್ಧಾ ಚೆನ್ನೈ ಕರಾವಳಿಯತ್ತ ಧಾವಿಸುತ್ತಿರುವಂತೆಯೇ ಇಂದು ಮುಂಜಾನೆಯಿಂದಲೇ ಚೆನ್ನೈನಲ್ಲಿ ಭಾರಿ ಮಳೆಯಾಗುತ್ತಿದೆ. ಚೆನ್ನೈ ಕರಾವಳಿ ತೀರದಲ್ಲಿ ಭಾರಿ ಅಲೆಗಳು ಏಳುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಚೈನ್ನೈನ ಬೀಚ್ ಬಳಿ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಇನ್ನು ಪುದುಚೇರಿ, ಕಡಲೂರು, ಕಾಂಚೀಪುರಂ, ತಿರುವಣ್ಣಾಮಲೈ, ವೇಲೂರು, ವಿಳುಪುರಂ, ಕೃಷ್ಣಗಿರಿಯಲ್ಲೂ ಭಾರಿ ಮಳೆಯಾಗುತ್ತಿವೆ. ಮುಂಜಾಗ್ರತಾ ಕ್ರಮವಾಗಿ ಚೆನ್ನೈನ ಎಲ್ಲ ಶಾಲಾ-ಕಾಲೇಜುಗಳಿಗೆ ರಜೆಘೋಷಣೆ ಮಾಡಲಾಗಿದೆ. ಚೆನ್ನೈನಲ್ಲಿ ಸುಮಾರು 20 ಸೆಂಟಿಮೀಟರ್ ಮಳೆಯಾಗುವ ಸಾಧ್ಯತೆ ಇದೆ ಹವಾಮಾನ ತಜ್ಞರು ಹೇಳಿದ್ದಾರೆ.

Comments are closed.