ಕರ್ನಾಟಕ

ಧ್ವಜ ಕಟ್ಟುವ ಸಂಬಂಧ ಕೋಮು ಘರ್ಷಣೆ: ಗಂಗಾವತಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣ

Pinterest LinkedIn Tumblr

gangaavati

ಗಂಗಾವತಿ (ಕೊಪ್ಪಳ ಜಿಲ್ಲೆ): ನಗರದಲ್ಲಿ ಸೋಮವಾರ ನಡೆಯಲಿರುವ ಹನುಮ ಜಯಂತಿ ಹಾಗೂ ಪೈಗಂಬರ್ ಜಯಂತಿ ಅಂಗವಾಗಿ ಧ್ವಜ ಕಟ್ಟುವ ಸಂಬಂಧ ಎರಡು ಕೋಮುಗಳ ಮಧ್ಯೆ ಭಾನುವಾರ ಘರ್ಷಣೆ ಸಂಭವಿಸಿದ್ದು, ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ.

ಯುವಕರ ಗುಂಪು ಕಲ್ಲು ತೂರಾಟ ನಡೆಸಿದ್ದರಿಂದ ಡಿವೈಎಸ್ಪಿ ಎಸ್.ಎಂ. ಸಂಧಿಗವಾಡ ಸೇರಿದಂತೆ ಹಲವು ಪೊಲೀಸರು, ಪತ್ರಕರ್ತರು, ನ್ಯಾಯಾಂಗ ಇಲಾಖೆ ನೌಕರ ಹೀಗೆ ಹತ್ತಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಎರಡು ಆಟೊ, ಎರಡು ಸರಕು ಸಾಗಣೆ ವಾಹನ, ಒಂದು ದ್ವಿಚಕ್ರ ವಾಹನಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಕೆಲವರು ಹಾಡು ಹಗಲೇ ಕುಡುಗೋಲು, ಕತ್ತಿ, ಚಾಕು ಹಿಡಿದು ನಗರದ ಬೀದಿಗಳಲ್ಲಿ ಓಡಾಡಿ ಜನರಲ್ಲಿ ಆತಂಕ ಸೃಷ್ಟಿಸಿದರು.

ಎರಡೂ ಕೋಮಿನ ಯುವಕರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಯುವಕರನ್ನು ಚದುರಿಸಲು ಪೊಲೀಸರು ಹಲವು ಬಾರಿ ಲಾಠಿ ಪ್ರಹಾರ ನಡೆಸಿ, ಅಶ್ರುವಾಯು ಸಿಡಿಸಿದರು.

ಪೊಲೀಸ್ ಠಾಣೆ ಮುಂದೆ ಒಂದು ಕೋಮು ಹಾಗೂ ಪಂಪಾನಗರದ ವೃತ್ತದಲ್ಲಿ ಮತ್ತೊಂದು ಕೋಮಿನ ಯುವಕರು ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.

‘ಶಾಸಕ ಇಕ್ಬಾಲ್‌ ಅನ್ಸಾರಿ ಅವರ ಆಪ್ತ ಸಹಾಯಕ ಎಸ್.ಎಂ. ಖಾದ್ರಿ ಅವರ ನಿವಾಸಕ್ಕೆ ಕಿಡಿಗೇಡಿಗಳು ಕಲ್ಲು ತೂರಿದ್ದರಿಂದ ಕಿಟಕಿ ಗಾಜು ಒಡೆದಿವೆ. ಮುಸ್ಲಿಂ ಸಮಾಜದ ಗುರು ಯಸೂಫ್ ಖಾದ್ರಿ ಅವರ ಮೇಲೆ ಕಿಡಿಗೇಡಿಗಳು ಹಲ್ಲೆ ಮಾಡಿದ್ದಾರೆ. ಗಾಂಧಿನಗರದ ಕೆ.ಪಂಪಾಪತಿ, ಶಿವಕುಮಾರ್‌, ಖಾಸಗಿ ವಾಹಿನಿ ವರದಿಗಾರ ವೆಂಕಟೇಶ ಹೊಸಳ್ಳಿ ಗಂಭೀರ ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಗುಂಡಮ್ಮ ಕ್ಯಾಂಪ್‌ನ ಕೆಲವು ನಿವಾಸಗಳ ಮೇಲೆ ಧ್ವಜ ಕಟ್ಟುವ ಸಂಬಂಧ ಎರಡು ಕೋಮುಗಳ ಯುವಕರ ಮಧ್ಯೆ ವಿವಾದ ಸೃಷ್ಟಿಯಾಯಿತು. ಇದನ್ನು ಖಂಡಿಸಿ ಮುಸುಕುಧರಿಸಿದ ಕೆಲವರು ಆಲ್ಫಿಯಾ ವೃತ್ತದಲ್ಲಿರುವ ಪ್ರಾರ್ಥನಾ ಮಂದಿರದ ಮೇಲೆ ಕಲ್ಲು ಎಸೆದು ಪರಾರಿಯಾಗಿದ್ದಾರೆ. ಈ ವಿಷಯ ನಗರದಲ್ಲಿ ಹರಡುತ್ತಿದ್ದಂತೆ ಮತ್ತೊಂದು ಕೋಮಿನವರು ಬೇರೂನಿ ಮಸೀದಿ ಆವರಣದಲ್ಲಿ ಸೇರಿ ನಂತರ ಯಾಜ್ಞವಲ್ಕ್ಯ ದೇವಸ್ಥಾನದ ಮೇಲೆ ದಾಳಿ ಮಾಡಿ ಹಲವರನ್ನು ಥಳಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತ್ಯಾಗರಾಜನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಲಭೆ ನಿಯಂತ್ರಿಸಲು ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.

ನಗರ ಠಾಣೆ ಪೊಲೀಸ್‌ ಅಧಿಕಾರಿಯ ಅಜಾಗರೂಕತೆ ಘಟನೆಗೆ ಕಾರಣ. ಇನ್‌ಸ್ಪೆಕ್ಟರ್‌ ಅವರನ್ನು ಹೊಣೆಗಾರರನ್ನಾಗಿ ಮಾಡಿ ಸೇವೆಯಿಂದ ಅಮಾನತುಗೊಳಿಸಬೇಕು.
ಎಚ್‌.ಎಂ.ತಿಪ್ಪೇರುದ್ರಸ್ವಾಮಿ
ಹಿರಿಯ ವಕೀಲ, ಗಂಗಾವತಿ

Comments are closed.