ಗಲ್ಫ್

ಡಿಸೆಂಬರ್ 9 ರಂದು ದುಬಾಯಿಯಲ್ಲಿ “ಹಂಸನಾದ ” ಸಂಗೀತ ರಸ ಸಂಜೆ

Pinterest LinkedIn Tumblr

unnamed

ದುಬಾಯಿಯಲ್ಲಿ 2016 ಡಿಸೆಂಬರ್ 9ನೇ ತಾರೀಕು ಶುಕ್ರವಾರ ಸಂಜೆ ಒಂದು ಅಪೂರ್ವ ಕನ್ನಡ ಸಂಗೀತ ಸಂಜೆ, “ಹಂಸನಾದ” ಸುಶ್ರಾವ್ಯ ಕನ್ನಡ ಸುಮಧುರ ಗೀತೆಗಳು ಮರಳುನಾಡಿನಲ್ಲಿ ಪ್ರತಿಧ್ವನಿಸಲಿದೆ. ದಕ್ಷಿಣ ಭಾರತದ ತ್ರಿಭಾಷಾ ಸಂಗೀತ ನಿರ್ದೇಶಕರು, ರಾಗ ಸಂಯೋಜಕರು, ಚಿತ್ರಸಾಹಿತಿ, ಸಂಭಾಷಣೆಗಾರ, ನಟ ಬೆಳ್ಳಿತೆರೆಯ ಪ್ರಖ್ಯಾತ ನಾದಬ್ರಹ್ಮ ಡಾ. ಹಂಸಲೇಖ ತಮ್ಮ ಹನ್ನೆರಡು ಮಂದಿ ಪ್ರಸಿದ್ದ ಸಂಗೀತಗಾರರ ತಂಡ ಹಾಗೂ ಸುಮಧುರ ಕಂಠಸಿರಿಯ ಗಾಯಕ ಗಾಯಕಿಯರ ಸ್ಯಾಂಡಲ್ ವುಡ್ ನ ಎಂದೂ ಮರೆಯದ ಕನ್ನಡ ಗೀತೆಗಳನ್ನು ಅರಬ್ ಸಂಯುಕ್ತ ಸಂಸ್ಥಾನದ ಅನಿವಾಸಿ ಕನ್ನಡಿಗರು ಆಸ್ವಾದಿಸಲಿದ್ದಾರೆ. ಕನ್ನಡ ಧ್ವಜವನ್ನು ಎತ್ತಿ ಹಿಡಿದಿರುವ ಶಿವಕುಮಾರ್ ಮತ್ತು ವಿದ್ಯಾಶಿವಕುಮಾರ್ ಆಯೋಜಿಸಿರುವ ಅಪ್ಪಟ ಕನ್ನಡ ಕಾರ್ಯಕ್ರಮ ದುಬಾಯಿಯ ಪ್ರತಿಷ್ಠಿತ ಮಾಲ್ ಅಫ್ ಎಮಿರೇಟ್ಸ್ ನ ಡಕ್ಟಾಕ್ ಸೆಂಟರ್ ಪಾಯಿಂಟ್ ಥಿಯೇಟರ್ ನಲ್ಲಿ ಸಂಜೆ 6.00 ಗಂಟೆಯಿಂದ ಪ್ರಾರಂಭವಾಗಲಿದೆ.

ನಾದಬ್ರಹ್ಮ ಡಾ. ಹಂಸಲೇಖ

hamsalekha-1

“ಜೀವನವೇ ದೇವರು, ಭೂಮಿಯೇ ದೇವಾಲಯ ” ಜೀವ ಜಗತ್ತು ಜೀವದಿಂದಿರುವುದೇ ಈ ತತ್ವದ ಮೇಲೆ ನಿಂತಿದೆ. ಸಂಗೀತದ ಮೂಲಕ ಮಾನವರಲ್ಲಿ ಶಾಂತಿಯ ಸಂದೇಶವನ್ನು ಸಾರುವ ಶಾಂತಿ ದೂತನಾಗಿ ಕಾಣುವ ಹಂಸಲೇಖ ಸರ್ವಕಾಲಿಕ ಮಾನ್ಯರಾಗಿದ್ದಾರೆ.

ನಾದಬ್ರಹ್ಮ ಡಾ. ಹಂಸಲೇಖ ಓರ್ವ ಕನಸುಗಾರ, ಸಾಹಿತ್ಯ ರಚನೆಕಾರ, ಕಲಾವಿದ, ಗಾಯಕ, ಸಂಗೀತಗಾರ, ರಾಗ ಸಂಯೋಜಕ, ಸಮಾಜವಾದಿ, ಸಮಾಜ ಸೇವಕ, ಕಲಾಪೋಷಕ, ಶಿಕ್ಷಕ, ದೂರದರ್ಶಿತ್ವ ಹೊಂದಿರುವ ಶಿಕ್ಷಣ ತಜ್ಞ ಈ ಎಲ್ಲಾ ಗುಣಗಳನ್ನು ಹೊಂದಿರುವ ಅಸಾಮಾನ್ಯ ವ್ಯಕ್ತಿತ್ವ ಹೊಂದಿರುವ ಅಪ್ಪಟ ಕನ್ನಡಿಗರಾಗಿದ್ದಾರೆ.

“ಹಂಸಲೇಖ “

hamsalekha-2

ಮೈಸೂರಿನಲ್ಲಿ ಜನಿಸಿದ ಗೋವಿಂದರಾಜು ಗಂಗರಾಜು ಸಂಗೀತದ ಕಡೆಗೆ ತನ್ನ ಒಲವು ಮೂಡಿಸಿ, ಸಾಹಿತ್ಯ ರಚನೆ, ಗೀತರಚನೆಯನ್ನು ಮೂಡಿಸಲು ಅಂದಿನ ದಿನಗಳಲ್ಲಿ ಪ್ರಸಿದ್ದವಾಗಿದ್ದ “ಸ್ವಾನ್” ಪೆನ್ ಬಳಸುತಿದ್ದರು. ಅಂಗ್ಲಭಾಷೆಯ ಸ್ವಾನ್ ಕನ್ನಡಕ್ಕೆ ತರ್ಜುಮೆಯಾಗಿ ’ಹಂಸಲೇಖನಿ’ ಕಾವ್ಯನಾಮ, ಗುರುಗಳ ಪುನರ್ ನಾಮಕರಣವಾಗಿ “ಹಂಸಲೇಖ” ಹೆಸರು ಲಲಿತಕಲೆಗಳ ಸಾಂಸ್ಕೃತಿಕ ರಾಯಭಾರಿಯಾಗಿ ವಿಶ್ವವ್ಯಾಪಿಯಾಗಿದೆ.

hamsalekha-5

‘ದೇಶೀ ಸಂಸ್ಕೃತಿ’ ಇವರ ಉಸಿರು, ಭಾರತೀಯ ಸಂಗೀತ ಪ್ರಾಕಾರದಲ್ಲಿ ದೇಶಿ ಸಂಸ್ಕೃತಿ ಅಳವಡಿಸಿದಾಗ ಮಾತ್ರ ಶ್ರೇಷ್ಠತೆಯನ್ನು ಕಾಣಬಹುದಾಗಿದೆ ಎಂಬ ಸತ್ಯವನ್ನು ಪ್ರತಿಪಾದಿಸುವ ಅಪ್ಪಟ ದೇಶ ಪ್ರೇಮಿ. ತನ್ನ ಕನಸಿನ ಕಲ್ಪನೆಯ ದೇಶಿ ಸಂಸ್ಕೃತಿಯ ಶಿಕ್ಷಣ ನೀಡುವ ಕನಸು ಕಂಡು ನನಸಾಗಿಸಿದ ಶಿಕ್ಷಣ ಸೌಧ ನೂರಾರು ಸಂಗೀತಗಾರರನ್ನು ಸೃಷ್ಠಿಸಿದೆ. ಅದರಲ್ಲೂ ವಿಶೇಷವಾಗಿ ಬುಡಕಟ್ಟು ಮಕ್ಕಳಿಗೆ ಉಚಿತ ವಸತಿಶಾಲೆಯೊಂದಿಗೆ ನೀಡುತ್ತಿರುವ ದೇಶಿ ಶಿಕ್ಷಣ ಸಂಸ್ಥೆ ಪದವಿ ಪೂರ್ವ ಕಾಲೇಜು ಹಂತದ ನಂತರ ವಿದ್ಯಾರ್ಥಿಗಳು ತಮ್ಮ ವೃತ್ತಿ ಜೀವನವನ್ನು ಆಯ್ಕೆ ಮಾಡಿಕೊಳ್ಳಬಹುದು. ಪದವಿಯನ್ನು ಸಂಗೀತ, ಸಿನೇಮಾ, ನೃತ್ಯ, ರಂಗಕಲೆ, ತಂತ್ರಜ್ಞಾನದಲ್ಲಿ ಪಡೆದು ಭಾರತೀಯ ಸಂಸ್ಕೃತಿಯನ್ನು ವಿಶ್ವದಾದ್ಯಂತ ಪಸರಿಸುವ ಅಪ್ಪಟ ಕಲಾವಿದರಾಗುವ ಅವಕಾಶ ಹಂಸಲೇಖ ಕಲ್ಪಿಸಿದ್ದಾರೆ.

ತಮ್ಮ ದೇಶೀ ವಿಶ್ವವಿದ್ಯಾಲಯದಲ್ಲಿ ಪರಿಪಕ್ವತೆಯನ್ನು ಪಡೆದು ಉತ್ಕೃಷ್ಠ ಕಲಾವಿದರಾಗಿ ಹೊರಹೊಮ್ಮಿ ನಾಗರಿಕತೆಗೆ ಸಂದೇಶ ನೀಡುವ ಮೂರು ಸಾವಿರ ಕಲಾವಿದರನ್ನು ಹದಿನೈದು ವರ್ಷದಲ್ಲಿ ಸೃಷ್ಠಿಸುವ ಕಾರ್ಯಯೋಜನೆಯನ್ನು ಹಂಸಲೇಖರವರು ಹಾಕಿಕೊಂಡಿದ್ದಾರೆ.

hamsalekha-3

“ಸಂಗೀತದಿಂದ ಮಾನವ ಜನಾಂಗದ ಯುದ್ದ ದ್ವೇಷವನ್ನು ತೊಲಗಿಸಬಹುದಾಗಿದೆ” ಎಂಬ ವೇದವಾಕ್ಯವನ್ನು ಪ್ರತಿಯೊಂದು ವಿದ್ಯಾರ್ಥಿಗಳು ಮೈಗೂಡಿಸಿಕೊಂಡಿದ್ದಾರೆ.

ತನ್ನ ಹದಿನೇಳನೆಯ ವಯಸ್ಸಿನಲ್ಲಿ ಪ್ರಸಿದ್ದ ಚಲನ ಚಿತ್ರ ನಿರ್ದೇಶಕರಾದ ಶ್ರೀ ಎಂ.ಎಸ್. ಪ್ರಸಾದ್ ರವರು ತಮ್ಮ ಚಿತ್ರ “ತ್ರಿವೇಣಿ” ಗೆ ಗೀತ ರಚನೆಗೆ ಅವಕಾಶ ಕಲ್ಪಿಸಿದ್ದರು. ಹಂಸಲೇಖರವರ ಲೇಖನಿಯಲ್ಲಿ ಮೂಡಿಬಂದ “ನೀನಾ ಭಗವಂತ” ಪ್ರಖ್ಯಾತ ಸಂಗೀತ ನಿರ್ದೇಶಕ ಶ್ರೀ ಉಪೇಂದ್ರರವರ ಅದ್ಭುತ ಸಂಗೀತ ಸಂಯೋಜನೆಯಲ್ಲಿ ಜನಪ್ರಿಯತೆ ಪಡೆಯಿತು.

hamsalekha-4

ಹಂಸಲೇಖರವರು ಹವ್ಯಾಸಿ ನಟರ ತಂಡ “ವಿವೇಕ ರಂಗ” ಕಟ್ಟಿ ಹೆಚ್ಚಿನ ಕಲಾವಿದರಿಗೆ ಅವಕಾಶ ಕಲ್ಪಿಸಿದರು. ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಈ ತಂಡ ಪ್ರವಾಸ ಮಾಡಿ ತಮ್ಮ ತಮ್ಮ ಅಭಿನಯ, ಗಾಯನದ ಮೂಲಕ ಜನಸಮೂಹದಲ್ಲಿ ಅಭಿರುಚಿ ಮೂಡಿಸಿದರು. ಇದರಿಂದ ರಂಗಕಲೆಗೆ ಇನ್ನಷ್ಟು ಹೆಚ್ಚಿನ ಗೌರವ ದೊರೆಯುವಂತಾಯಿತು. ಪ್ರದರ್ಶನವಾದ ನಾಟಕಗಳಲ್ಲಿ ಪ್ರಮುಖವಾದುದು, ಜೋಕುಮಾರ ಸ್ವಾಮಿ, ರೈತಜೀವಿ, ರಾಹುಚಂದ್ರ, ನಮ್ಮಹಳ್ಳಿ, ಹೆಂಡದ ಬುಂಡೆ ಗಂಡ, ಇನ್ನೂ ಹತ್ತು ಇಪ್ಪತು ನಾಟಕಗಳು ವೀಕ್ಷಕರ ಮನದಲ್ಲಿ ಸದಾ ಉಳಿದಿದೆ.

ಹಂಸಲೇಖ ರವರು ತಮ್ಮ ಜೀವನ ಸಂಗಾತಿ ಶ್ರೀಮತಿ ಲತಾರವರು ಅತ್ಯುತ್ತಮ ಕಂಠ ಸಿರಿಯ ಗಾಯಕಿಯಾಗಿದ್ದು ಸಂಗೀತದ ಪಯಣದ ಯಶಸ್ವಿ ಹೆಜ್ಜೆಯಲ್ಲಿ ಸಾಥ್ ನೀಡುತಿದ್ದಾರೆ.

1981 ರಲ್ಲಿ ಚಿತ್ರಕಥೆ ಸಂಭಾಷಣೆ ಸಂಗೀತ ನಿರ್ದೇಶನದಲ್ಲಿ ಮೂಡಿದ ’ರಾಹುಚಂದ್ರ’ ಹಂಸಲೇಖರವರ ಸಿನಿಮಾ ಪಯಣದಲ್ಲಿ ಭದ್ರಬುನಾದಿ ಹಾಕಿಕೊಟ್ಟಿರುವ ಚಿತ್ರವಾಗಿದೆ. 1987ರಲ್ಲಿ ವಿ. ರವಿಚಂದ್ರ ನಿರ್ದೇಶನದಲ್ಲಿ ಹಂಸಲೇಖರ ಸಾಹಿತ್ಯ ರಚನೆ, ಸಂಭಾಷಣೆ, ಗೀತರಚನೆ, ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ’ಪ್ರೇಮ ಲೋಕ’ ಕನ್ನಡ ಚಲನಚಿತ್ರ ರಂಗದಲ್ಲಿ ಬಾಕ್ಸ್ ಆಫೀಸ್ನಲ್ಲಿ ದಾಖಲೆ ಮಾಡಿದ ಚಿತ್ರವಾಗಿತ್ತು. ಹಂಸಲೇಖರ ಇಮೇಜ್ ವಿಶ್ವವ್ಯಾಪಿಯಾಯಿತು. 1988ರಲ್ಲಿ ಇನ್ನೊಂದು ಚಿತ್ರ ’ಅವಳೇ ನನ್ನ ಹೆಂಡತಿ’ ಸಹ ದಾಖಲೆಯ ಜೊತೆಗೆ ಸೇರ್ಪಡೆಯಾಯಿತು.

ಹಂಸಲೇಖರ ಗೀತರಚನೆ, ಸಂಗೀತ ನಿರ್ದೇಶನ ಕನ್ನಡ ಚಲನ ಚಿತ್ರ ರಂಗದ ದಿಕ್ಕನ್ನೆ ಬದಲಾಯಿಸಿತು. ಇವರ ಗರಡಿಯಲ್ಲಿ ಪಳಗಿದ ಗಾಯಕರು, ಸಂಗೀತ ಸಂಯೋಜಕರು, ಗೀತಾ ರಚನೆಕಾರರು, ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿ ಜನಮಾನಸದಲ್ಲಿ ಮಾನ್ಯತೆಯನ್ನು ಪಡೆದಿದ್ದಾರೆ.

ಸಂಗೀತಗಾರರನ್ನು ಒಂದೇ ಸೂರಿನೆಡೆಗೆ ಬರಮಾಡಿಕೊಂಡು “ಸಂಗೀತ ಸಂಘ” ಕಟ್ಟಿದರು. ಸಂಗೀತಗಾರರು ತಮ್ಮ ವೃತ್ತಿಯ ಬಗ್ಗೆ ಭದ್ರತೆ ಮೂಡಿಸಿಕೊಂಡರು, ಚಿತ್ರರಂಗದಲ್ಲಿ ಹೆಚ್ಚಿನ ಗೌರವದಿಂದ ಗುರುತಿಸಿಕೊಳ್ಳುವಲ್ಲಿ ಸಂಘಟನೆ ಸಹಕಾರಿಯಾಯಿತು.

ಮೈಸೂರಿನಲ್ಲಿ ಮಾನಸ ಗಂಗೋತ್ರಿಯಲ್ಲಿ ’ಜನಪದ’ದಲ್ಲಿ ಸ್ನಾತಕೋತರ ಪದವಿ ಗಳಿಸಿದರು. ತಮ್ಮ ಸಂಗೀತ ನಿರ್ದೇಶನದ ಚಿತ್ರಗಳಿಗೆ ಹೆಚ್ಚು ಹೆಚ್ಚು ದೇಶಿ ಸ್ಪರ್ಶ ನೀಡಿ ಕನ್ನಡ ಚಿತ್ರರಂಗದಲ್ಲಿ ಜನಪದಕ್ಕೆ ಹೆಚ್ಚು ಒತ್ತು ನೀಡಿದ ಪರಿಣಾಮ ಜನಪದ ಗೀತೆಗಳು ಬೆಳ್ಳಿ ತೆರೆಯ ಮೇಲೆ ಮೂಡುವಂತಾಯಿತು.

2001ರಲ್ಲಿ ’ಹಂಸಲೇಖ ಮ್ಯೂಸಿಕ್ ಟ್ರಸ್ಟ್’ ಸ್ಥಾಪಿಸಿದರು. ಇದರ ಮೂಲಕ ಅದಿವಾಸಿ ಮಕ್ಕಳಿಗೆ ಉಚಿತ ವಸತಿ ಶಾಲೆಯಲ್ಲಿ ಸಂಗೀತ ಶಿಕ್ಷಣ ಕಲಿಯುವ ಅವಕಾಶ ಕಲ್ಪಿಸಿದರು. ಹಂಸಲೇಖ ಮ್ಯೂಸಿಕ್ ಟ್ರಸ್ಟ್ ನ ಆಶ್ರಯದಲ್ಲಿ ಕಾರ್ನಾಟಿಕ್, ಹಿಂದೂಸ್ಥಾನಿ, ಜನಪದ, ಗಜ಼ಲ್ ಸೂಫಿ, ಪಾಶ್ಚಾತ್ಯ ಸಂಗೀತಗಳು ಒಂದೆಡೆ ಕಲಿಯುವ ಅವಕಾಶ ಲಭ್ಯವಾಯಿತು. ’ಹಂಸಲೇಖ ಮ್ಯೂಸಿಕ್ ಟ್ರಸ್ಟ್’ ಮೂಲಕ ವಿಶ್ವ ಮನ್ನಣೆ ಪಡೆಯುವಲ್ಲಿ ಹಂಸಲೇಖರು ಯಶಸ್ವಿಯಾದರು.

ದೇಶಿ ಸಂಗೀತದಲ್ಲಿ ಕಲಿಯುವಿಕೆಯನ್ನು ಸರಳಿಕರಣಗೊಳಿಸಿದ ಪರಿಣಾಮವಾಗಿ ಕಲಿಯುವವರಿಗೆ ಆಸಕ್ತಿ ಹೆಚ್ಚಿ , ಒಲವು ತೋರಿ ಸಂಗೀತದಲ್ಲಿ ಸಾಧನೆ ಮಾಡಲು ಪ್ರೇರಣೆಯಾಯಿತು.

ಹಂಸಲೇಖರ ದೇಶಿ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, 2009ರಲ್ಲಿ ಪ್ರಥಮ ದರ್ಜೆ ಕಾಲೇಜು, ಡಿಪ್ಲೊಮಾ ತರಭೇತಿ ನಂತರ ದೇಶಿ ಸಂಗೀತ ವಿಶ್ವವಿದ್ಯಾಲಯ ಸ್ಥಾಪಿಸಿ ದ್ರಾವಿಡನ್ ಮತ್ತು ಬೆಂಗಳೂರು ಹಾಗೂ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಮಾನ್ಯತೆಯನ್ನು ಪಡೆಯಿತು.

ಹಂಸಲೇಖರ ಸಂಗೀತ ನಿರ್ದೇಶನ, ಸಾಹಿತ್ಯ ರಚನೆ, ಗಾಯನ, ನಟನೆಯ ಸಾಧನೆಗೆ ರಾಷ್ಟ್ರೀಯ ಪುರಸ್ಕಾರ, ಆರು ರಾಜ್ಯ ಪ್ರಶಸ್ತಿ, ಏಳು ಫಿಲಂ ಫೇರ್ ಪ್ರಶಸ್ತಿ ಹಾಗೂ ಹಲವಾರು ಪ್ರಶಸ್ತಿಗಳು ಮುಡಿಗೇರಿಸಿಕೊಂಡಿದ್ದಾರೆ.

ಬೆಂಗಳೂರು ವಿಶ್ವವಿದ್ಯಾಲಯ 2014 ರಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
1996 ರಲ್ಲಿ ’ಗಾನಯೋಗಿ ಪಂಚಾಕ್ಷರಿ ಗವಾಯಿ’ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ
1994 ರಿಂದ 2006 ಅವಧಿಯಲ್ಲಿ ಡಾ. ರಾಜ್ ಕುಮಾರ್ ಅಭಿನಯದ ’ಆಕಸ್ಮಿಕ’ ಅಭಿನಯದ ಚಿತ್ರ ಸಹಿತ ಇನ್ನಿತರ ನಾಲ್ಕು ಚಿತ್ರಗಳಿಗೆ ರಾಜ್ಯ ಪ್ರಶಸ್ತಿ
1991 ರಿಂದ 2006ಅವಧಿಯಲ್ಲಿ ಆರು ಚಿತ್ರಗಳಿಗೆ ಫಿಲಂ ಫೇರ್ ಪ್ರಶಸ್ತಿ
2006 ರಲ್ಲಿ ಕರ್ನಾಟಕ ಸರ್ಕಾರದ ಕೆಂಪೆಗೌಡ ಪ್ರಶಸ್ತಿ
2012ರಲ್ಲಿ ಡಾ. ರಾಜ್ ಕುಮಾರ್ ಪ್ರಶಸ್ತಿ
1990 ರಿಂದ 2015 ರವರೆಗೆ ಪಡೆದಿರುವ ಇನ್ನಿತರ ಪ್ರಶಸ್ತಿಗಳು
– ಮದ್ರಾಸ್ ಫಿಲಂ ಫೇರ್ ಅಸೋಸಿಯೇಶನ್ ಪ್ರಶಸ್ತಿ
– ಮದ್ರಾಸ್ ಫಿಲಂ ಫ್ಯಾನ್ಸ್ ಅಸೋಸಿಯೇಶನ್ ಪ್ರಶಸ್ತಿ
– ಚಿತ್ರ ಪ್ರೇಮಿಗಳ ಪ್ರಶಸ್ತಿ
– ಆರ್. ಎನ್. ಆರ್. ಚಲನ ಚಿತ್ರ ಪತ್ರಕರ್ತರ ಪ್ರಶಸ್ತಿ
– ಮದ್ರಾಸ್ ಸಿನಿಮಾಟೊಗ್ರಾಫರ್ಸ್ ಪ್ರಶಸ್ತಿ
– ಕೆ. ವಿ. ಶಂಕರೇಗೌಡ ಪ್ರಶಸ್ತಿ
ಒಂದು ಪಾತ್ರದಲ್ಲಿ ತಯಾರಾದ ಚಿತ್ರ ’ಶಾಂತಿ’ ಸಂಗೀತ ನಿರ್ದೇಶನಕ್ಕೆ ’ಗಿನ್ನೆಸ್’ ದಾಖಲೆ

339 ಕನ್ನಡ ಚಲನ ಚಿತ್ರಗಳಿಗೆ ಸಂಗೀತ ನಿರ್ದೇಶನ, ಚಿತ್ರಕಥೆ, ಸಾಹಿತ್ಯ ರಚನೆ, ಗೀತ ರಚನೆ, ಗಾಯನದ ಮೂಲಕ ಸಾಧನೆ ಮಾಡಿರುವ ಹಂಸಲೇಖರು ಎಂಟು ತೆಲುಗು, ಏಳು ತಮಿಳು ಚಿತ್ರಗಳು ಸೇರಿ ದಕ್ಷಿಣ ಭಾರತದ ತ್ರಿಭಾಷಾ ನಿರ್ದೇಶಕರಾಗಿ ಜನಮಾನಸದಲ್ಲಿ ಗೌರವದ ಸ್ಥಾನ ಪಡೆದಿದ್ದಾರೆ.
ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನಡೆಯುವ ಐತಿಹಾಸಿಕ ದಾಖಲೆಯಾಗಲಿರುವ ಈ ಕನ್ನಡ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ನಮ್ಮೆಲ್ಲರ ಶುಭ ಹಾರೈಕೆಗಳು.

“ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ”

ಬಿ. ಕೆ. ಗಣೇಶ್ ರೈ
ಅರಬ್ ಸಂಯುಕ್ತ ಸಂಸ್ಥಾನ

Comments are closed.