ಚಂಡೀಗಢ: ಪಂಜಾಬ್’ನಲ್ಲಿರುವ ನಬಾಜೈಲಿನ ಮೇಲೆ ಶಸ್ತ್ರಾಸ್ತ್ರಧಾರಿಗಳ ಗುಂಪೊಂದು ದಾಳಿ ಮಾಡಿದ್ದು, ಖಾಲಿಸ್ತಾನ್ ವಿಮೋಚನಾ ದಳದ ಮುಖ್ಯಸ್ಥ ಹರ್ಮೀಂದರ್ ಸಿಂಗ್ ಮಿಂಟೂ ಸೇರಿದಂತೆ ಐವರು ಉಗ್ರರು ಪರಾರಿಯಾಗಿರುವ ಘಟನೆ ಭಾನುವಾರ ನಡೆದಿದೆ.
ಪೊಲೀಸರ ಸಮವಸ್ತ್ರ ಧರಿಸಿ ಬಂದಿರುವ 10 ಮಂದಿ ಶಸ್ತ್ರಾಸ್ತ್ರಧಾರಿಗಳು ಜೈಲಿನ ಒಳ ನುಗ್ಗಿದ್ದಾರೆ. ಈ ವೇಳೆ ನೂರು ಸುತ್ತು ಗುಂಡು ಹಾರಿಸಿ ಬಂಧನದಲ್ಲಿರಿಸಲಾಗಿದ್ದ ಖಾಲಿಸ್ತಾನ ವಿಮೋಚನಾ ದಳದ ಮುಖ್ಯಸ್ಥ ಹರ್ಮಿಂದರ್ ಸಿಂಗ್ ಮಿಂಟೂ ಸೇರಿದಂದೆ ನಾಲ್ವರು ಉಗ್ರರನ್ನು ಬಂಧನ ಮುಕ್ತ ಗೊಳಿಸಿ ಸಿನಿಮೀಯ ರೀತಿಯಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ.
ಹರ್ಮಿಂದರ್ ಸೇರಿದಂತೆ ಗುರ್ಪ್ರೀತ್ ಸಿಂಗ್, ವಿಕಿ, ಗೋಂಧ್ರಾ, ನಿತಿನ್ ಡಿಯೋಲ್ ಹಾಗೂ ವಿಕ್ರಮ ಜೀತ್ ಸಿಂಗ್ ವಿಕಿ ಪರಾರಿಯಾಗಿದ್ದಾರೆಂದು ತಿಳಿದುಬಂದಿದೆ.
ದಾಳಿಯೊಂದು ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಜೈಲಿನಲ್ಲಿ ಭದ್ರತಾ ಲೋಪಗಳಿರುವುದು ಕೃತ್ಯದಿಂದ ಬಹಿರಂಗಗೊಂಡಿದೆ. ದಾಳಿ ಹಾಗೂ ಉಗ್ರರು ಪರಾರಿಯಾಗಿರುವ ಹಿನ್ನೆಲೆಯಲ್ಲಿ ಪಂಜಾಬ್ ನಾದ್ಯತಂ ಹೈ ಅಲರ್ಟ್ ಘೋಷಿಸಲಾಗಿದೆ. ಉಗ್ರರು ಪರಾರಿಯಾಗಿರುವುದನ್ನು ಡಿಜಿಪಿ ಹೆಚ್.ಎಸ್. ದಿಲ್ಲೋನ್ ಅವರು ಖಚಿತಪಡಿಸಿದ್ದಾರೆ.
ಖಾಲಿಸ್ತಾನ್ ವಿಮೋಚನಾ ದಳದ ಮುಖ್ಯಸ್ಥ ಹರ್ಮೀಂದರ್ ಸಿಂಗ್ ಮಿಂಟೂಸಾಕಷ್ಟು ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದು, ಪಾಕಿಸ್ತಾನ ಸೇರಿದಂತೆ ವಿದೇಶಗಳಲ್ಲಿ ಉಗ್ರ ಚಟುವಟಿಕೆಗಳನ್ನು ನಡೆಸುವ ಸಲುವಾಗಿ ನಿಧಿ ಸಂಗ್ರಹಿಸುತ್ತಿದ್ದ. ಇದರಂತೆ ಖಚಿತ ಮಾಹಿತಿ ಆಧಾರದ ಮೇಲೆ ಪಂಜಾಬ್ ಪೊಲೀಸರು ಈತನನ್ನು 2014ರಲ್ಲಿ ಬಂಧನಕ್ಕೊಳಪಡಿಸಿದ್ದರು. ಪರಾರಿಯಾದವರ ಪೈಕಿ ವಿಕಿ ಗೊಂಡಾರ್ ಎಂಬಾತ ಕುಖ್ಯಾತ ಗ್ಯಾಂಗ್ ಸ್ಟರ್ ಆಗಿದ್ದರು, ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಸಹಚರರೊಂದಿಗೆ ಬಂಧನಕ್ಕೊಳಪಡಿಸಲಾಗಿತ್ತು.