ನವದೆಹಲಿ: ಅನಾರೋಗ್ಯ ಹಾಗೂ ಹೃದಯಾಘಾತದಿಂದಾಗಿ ಗಡಿಯಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯ ಬಿಎಸ್ ಎಫ್ ಯೋಧರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಅನಾರೋಗ್ಯ ಸಂಬಂಧವೇ ಹೆಚ್ಚು ಬಿಎಸ್ ಎಫ್ ಯೋಧರು ಸಾವನ್ನಪ್ಪಿದ್ದಾರೆ ಎಂದು ಅಂಕಿ ಅಂಶಗಳ ಪ್ರಕಾರ ತಿಳಿದು ಬಂದಿದೆ. ದೇಶದ ಅತಿ ದೊಡ್ಡ ಸೇನೆಯಾದ ಗಡಿ ಭದ್ರತಾ ಪಡೆಯಲ್ಲಿ ಮಹಿಳೆಯರು ಮತ್ತು ಪುರುಷರು ಹೆಚ್ಚು ಮಂದಿ ಇದ್ದಾರೆ. ಇವರಲ್ಲಿ ಶತೃಗಳ ಗುಂಡಿಗೆ ಬಲಿಯಾದವರಿಗಿಂತ ಹೆಚ್ಚಾಗಿ ಅನಾರೋಗ್ಯದಿಂದಾಗಿ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
2015ರ ಜನವರಿ ಮತ್ತು 2015 ರ ಸೆಪ್ಟಂಬರ್ ನಲ್ಲಿ 774 ಬಿಎಸ್ ಎಫ್ ಯೋಧರು ಸತ್ತಿದ್ದು ಅದರಲ್ಲಿ ಯುದ್ಧ ಸಂಬಂಧಿತ ಅವಗಡಗಳಿಗೆ 25 ಮಂದಿ ಬಲಿಯಾಗಿದ್ದಾರೆ.
ಸತ್ತ ಒಟ್ಟು 774 ಮಂದಿಯಲ್ಲಿ ಎಚ್ ಐವಿ, ಏಡ್ಸ್, ಮಲೇರಿಯಾ ಸೇರಿದಂತೆ ಹಲವು ರೋಗಗಳಿಗೆ 316 ಮಂದಿ ಬಲಿಯಾಗಿದ್ದಾರೆ. 117 ಸೈನಿಕರು ಹೃದಯಾಘಾತದಿಂದಾಗಿ ಸಾವನ್ನಪ್ಪಿದ್ದಾರೆ. 25 ಮಂದಿ ಯುದ್ದ ಸಂಬಂಧಿತ ಅವಘಡಗಳಿಂದ ಸಾವನ್ನಪ್ಪಿದ್ದಾರೆ ಎಂದು ಮಾಹಿತಿಗಳು ತಿಳಿಸಿವೆ.
ಇದರ ಜೊತೆಗೆ 192 ಮಂದಿ ರಸ್ತೆ ಮತ್ತು ರೈಲು ಅಪಘಾತದಲ್ಲಿ, 18 ಮಂದಿ ಎಚ್ ಐವಿಯಿಂದ, 38 ಮಂದಿ ಕ್ಯಾನ್ಸರ್, ಹಾಗೂ ಮಲೇರಿಯಾದಿಂದ ಐವರು ಪ್ರಾಣ ಕಳೆದುಕೊಂಡಿದ್ದಾರೆ.
ಹೀಗಾಗಿ ಸೈನಿಕರು ಸಾವಿನ ಪ್ರಮಾಣ ಕಡಿಮೆ ಮಾಡಬೇಕಿದ್ದು, ಆರೋಗ್ಯಕರ ಜೀವನ ಶೈಲಿ ರೂಢಿಸಿಕೊಳ್ಳಬೇಕಾಗಿದೆ. ಗಡಿ ಭದ್ರತಾ ಪಡೆಯಲ್ಲಿ 2.5 ಲಕ್ಷ ಯೋಧರಿದ್ದು, ರಸ್ತೆ ಅಪಘಾತಗಳಿಗೆ ಹೆಚ್ಚಿನ ಯೋಧರು ಬಲಿಯಾಗಿದ್ದಾರೆ ಎಂದು ಬಿಎಸ್ಎಫ್ ಡೈರೆಕ್ಟರ್ ಜನರಲ್ ಡಿ.ಕೆ ಪಥಕ್ ತಿಳಿಸಿದ್ದಾರೆ.
ಬಿಎಸ್ ಎಫ್ ಯೋಧರನ್ನು ಪ್ರಮುಖವಾಗಿ, ಭಾರತ ಮತ್ತು ಪಾಕಿಸ್ತಾನ ಹಾಗೂ ಭಾರತ ಮತ್ತು ಬಾಂಗ್ಲಾ ಗಡಿ ಭಾಗಗಳಲ್ಲಿ ನಿಯೋಜಿಸಲಾಗಿದೆ. ಜೊತೆಗೆ ನಕ್ಸಲರ ವಿರುದ್ಧದ ಕಾರ್ಯಾಚರಣೆಗಳಿಗೂ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಭದ್ರತೆಗೂ ಗಡಿಭದ್ರತಾ ಪಡೆಯನ್ನೇ ನಿಯೋಜಿಸಲಾಗುತ್ತದೆ.