ತಮಿಳು ನಟಿ ಸುಪರ್ಣ ಆನಂದ್ ಚೆನ್ನೈನಲ್ಲಿರುವ ತನ್ನ ಅಪಾರ್ಟ್ ಮೆಂಟ್ ನಲ್ಲಿ ಶವವಾಗಿ ಪತ್ತೆಯಾಗಿದ್ದು, ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ನಟಿ ವಾಸವಿದ್ದ ಅಪಾರ್ಟ್ ಮೆಂಟ್ ಮನೆ ಕಳೆದ ಮೂರು ದಿನಗಳಿಂದ ಲಾಕ್ ಆಗಿತ್ತು. ಆದರೆ ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದರಿಂದ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ನಟಿಯ ಮನೆಯ ಬಾಗಿಲು ಒಡೆದು ನೋಡಿದಾಗ ಸುಪರ್ಣ ಆನಂದ್ ಶವ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದೆ.
ಘಟನಾ ಸ್ಥಳದಲ್ಲಿ ಪೊಲೀಸರು ಡೆಟ್ ನೋಟ್ ವಶಪಡಿಸಿಕೊಂಡಿದ್ದಾರೆ. ಇನ್ನು ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದು ಪೊಲೀಸರು ಶಂಕಿಸಿದ್ದು ತನಿಖೆ ನಡೆಸುತ್ತಿದ್ದಾರೆ.
ಸುಪರ್ಣ ಆನಂದ್ ಸಾವಿನ ಸುದ್ದಿ ತಮಿಳು ಕಿರುತೆರೆ ಚಿತ್ರರಂಗವನ್ನು ದಂಗುಬಡಿಸಿದೆ. ಕಿರುತೆರೆ ನಿರೂಪಕಿಯಾಗಿ ವೃತ್ತಿಜೀವನ ಆರಂಭಿಸಿದ್ದ ಸುಪರ್ಣ ಆನಂದ್ ಹಲವು ಧಾರವಾಹಿಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದರು. ಇನ್ನು ಹಲವು ತಮಿಳು ಸಿನಿಮಾಗಳಲ್ಲಿ ಅಭಿನಯಿಸಿದ್ದರು.