ಪ್ರಮುಖ ವರದಿಗಳು

ನೋಟ್ ಬದಲಾಯಿಸಿಕೊಳ್ಳುವಾಗ ಎಚ್ಚರಿಕೆ ! 2.5 ಲಕ್ಷಕ್ಕೂ ಅಧಿಕ ಡೆಪಾಸಿಟ್ ದಾರರಿಗೆ ಬೀಳಲಿದೆ ತೆರಿಗೆ; ಅಕ್ರಮ ಸಾಬೀತಾದರೆ ದುಬಾರಿ ದಂಡ

Pinterest LinkedIn Tumblr

note

ನವದೆಹಲಿ: ಕಪ್ಪುಹಣವನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ 500 ಮತ್ತು 1000 ರು.ಗಳ ನೋಟ್ ಗಳನ್ನು ನಿಷೇಧಿಸಿ ಮಹತ್ವದ ನಿರ್ಧಾರ ಕೈಗೊಂಡಿದ್ದ ಕೇಂದ್ರ ಸರ್ಕಾರ ಇದೀಗ ಬ್ಯಾಂಕ್ ಠೇವಣಿಗಳ ಮೇಲೆ ತೀವ್ರ ನಿಗಾ ಇರಿಸಿದೆ.

ನೋಟ್ ಗಳ ಮೇಲಿನ ನಿಷೇಧದ ಬೆನ್ನಲ್ಲೇ ತಮ್ಮ ಬಳಿ ಇರುವ 500 ಮತ್ತು 1000 ನೋಟ್ ಗಳನ್ನು ಬದಲಾಯಿಸಿಕೊಳ್ಳಲು ಜನ ಬ್ಯಾಂಕ್ ಗಳಿಗೆ ಮುಗಿಬಿದ್ದಿದ್ದು, ಇದೇ ಹೊತ್ತಿನಲ್ಲೇ ಕೇಂದ್ರ ಸರ್ಕಾರ ಕಾಳಧನಿಕರನ್ನು ಗುರುತಿಸಿ ಅವರಿಂದ ಕಪ್ಪುಹಣವನ್ನು ಹೊರಗೆಳೆಯುವ ಯೋಜನೆ ರೂಪಿಸಿದೆ. ಇದೇ ಕಾರಣಕ್ಕಾಗಿ ಇಂದಿನಿಂದ ಆರಂಭವಾಗಲಿರುವ ಬ್ಯಾಂಕ್ ಗಳು ಮತ್ತು ಅವುಗಳ ಠೇವಣಿಗಳ ಮೇಲೆ ನಿಗಾ ಇರಿಸಲು ಮುಂದಾಗಿದೆ. ಇದಕ್ಕಾಗಿ ತನ್ನ ವಿತ್ತ ಸಚಿವಾಲಯ ಹಾಗೂ ತೆರಿಗೆ ಇಲಾಖೆ ಅಧಿಕಾರಿಗಳನ್ನು ಕೇಂದ್ರ ಸರ್ಕಾರ ನಿಯೋಜಿಸಿದ್ದು, ಅಕ್ರಮ ಹಣ ಕಂಡುಬಂದರೆ ದುಬಾರಿ ದಂಡವಿಧಿಸುವಂತೆಯೂ ಸೂಚನೆ ನೀಡಿದೆ.

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಗ್ರಾಹಕರು ಸಲ್ಲಿಸುತ್ತಿರುವ ಆದಾಯ ತೆರಿಗೆ ದಾಖಲೆಗಳು ಹಾಗೂ ಬ್ಯಾಂಕ್ ಠೇವಣಿಗಳನ್ನು ಪರಿಶೀಲಿಸುತ್ತೇವೆ. ಒಂದು ವೇಳೆ ವ್ಯತ್ಯಾಸ ಕಂಡುಬಂದರೆ ವಿಚಾರಣೆ ನಡೆಸುತ್ತೇವೆ. ಅಕ್ರಮ ಎಂದು ಸಾಬೀತಾದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಮೂಲಗಳ ಪ್ರಕಾರ ಯಾವುದೇ ಖಾತೆಗೆ 2.5ಲಕ್ಷಕ್ಕೂ ಅಧಿಕ ಹಣ ಠೇವಣಿಯಾದರೆ ಆ ಹಣಕ್ಕೆ ತೆರಿಗೆ ವಿಧಿಸುವಂತೆ ಕೇಂದ್ರ ಸರ್ಕಾರದ ವಿತ್ತ ಸಚಿವಾಲಯ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಕೇವಲ ಅದು ಮಾತ್ರವಲ್ಲದೆ ಗ್ರಾಹಕರು ಠೇವಣಿಗಾಗಿ ತರುವ ಹಣದ ಕುರಿತ ದಾಖಲೆಗಳಿಂದ ಅದು ಅಕ್ರಮ ಎಂದು ಸಾಬೀತಾದರೆ ಭಾರಿ ದಂಡ ವಿಧಿಸುವಂತೆಯೂ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.

ಪ್ರತಿಯೊಂದು ಠೇವಣಿಗೂ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಸಂಖ್ಯೆಗಳನ್ನು ಪಡೆಯುವಂತೆ ಬ್ಯಾಂಕ್ ಗಳಿಗೆ ಈಗಾಗಲೇ ಸೂಚನೆ ನೀಡಲಾಗಿದ್ದು, ಕೇವಲ ನಗದು ಮಾತ್ರವಲ್ಲದೇ ಆಭರಣಗಳ ಮೇಲಿನ ಠೇವಣಿಗಳಿಗೂ ಪ್ಯಾನ್ ಕಾರ್ಡ್ ನಂಬರ್ ಪಡೆಯುವಂತೆ ಸೂಚನೆ ನೀಡಿದೆ. ಆದರೆ 1.5ರಿಂದ 2 ಲಕ್ಷದ ವರೆಗಿನ ಹಣಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಳೆಯ ನೋಟುಗಳ ಬದಲಾವಣೆಗೆ ನವೆಂಬರ್ 10ರಿಂದ ಡಿಸೆಂಬರ್ 30ರವರೆಗೆ ಕಾಲಾವಕಾಶ ನೀಡಲಾಗಿದ್ದು, 2.5ಲಕ್ಷಕ್ಕೂ ಅಧಿಕ ಠೇವಣಿಯಾಗುವ ಪ್ರತಿಯೊಂದು ಖಾತೆಯನ್ನೂ ನಿರಂತರ ವೀಕ್ಷಣೆಯಲ್ಲಿಡುವಂತೆಯೂ ಕೇಂದ್ರ ಸರ್ಕಾರ ಬ್ಯಾಂಕ್ ಗಳಿಗೆ ಸೂಚನೆ ನೀಡಿದೆ ಎಂದು ಹೇಳಲಾಗುತ್ತಿದೆ.

Comments are closed.