ಕರ್ನಾಟಕ

ನಟ ದರ್ಶನ ಮನೆ ವಶಕ್ಕೆ ಪಡೆದ ಜಿಲ್ಲಾಡಳಿತ

Pinterest LinkedIn Tumblr

darshan-house1

ಬೆಂಗಳೂರು: ರಾಜಕಾಲುವೆ ಒತ್ತುವರಿ ಜಾಗದಲ್ಲಿ ನಿರ್ಮಾಣವಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮನೆಯನ್ನು ಶನಿವಾರ ಸಾಂಕೇತಿಕವಾಗಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ.

ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಬಡಾವಣೆಯಲ್ಲಿರುವ ದರ್ಶನ್ ಮನೆ ಸೇರಿದಂತೆ ಒತ್ತುವರಿ ಆಗಿರುವ ಜಾಗಗಳನ್ನು ವಶಕ್ಕೆ ಪಡೆಯುವ ಪ್ರಕ್ರಿಯೆ ಜಿಲ್ಲಾಡಳಿತ ಇಂದು ಅರಂಭಿಸಿದ್ದು, ದರ್ಶನ್ ಮನೆಯ ಗೋಡೆಯ ಮೇಲೆ ಇದು ಸರ್ಕಾರಿ ಜಾಗ ಎಂದು ಬರೆಯುವ ಮೂಲಕ ಸಾಂಕೇತಿಕವಾಗಿ ವಶಕ್ಕೆ ಪಡೆಯಲಾಗಿದೆ.

ತಹಶೀಲ್ದಾರ್ ಶಿವಕುಮಾರ್ ಅವರು ನೇತೃತ್ವ ಈ ಕಾರ್ಯಾಚರಣೆ ನಡೆಯುತ್ತಿದ್ದು, ದರ್ಶನ್ ಮನೆಯ ಬಳಿ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ. ಕೆಲವರು ಮಾಧ್ಯಮದವರಿಗೆ ಫೋಟೋ ತೆಗೆಯದಂತೆ, ವಿಡಿಯೋ ಮಾಡದಂತೆ ತಡೆ ಒಡ್ಡುತ್ತಿದ್ದಾರೆ.

ಇನ್ನು ಮಾಜಿ ಸಚಿವ ಶಾಮನೂರು ಶಿವಶಂಕಪ್ಪ ಅವರ ಒಡೆತನದ ಎಸ್ ಎಸ್ ಆಸ್ಪತ್ರೆ ಪಕ್ಕದ ಖಾಲಿ ಜಾಗದಲ್ಲಿ ಸರ್ಕಾರಿ ಸ್ವತ್ತು ಎಂದು ನಾಮಫಲಕ ಅಳವಡಿಸುವ ಕಾರ್ಯ ನಡೆದಿದೆ.

ನಟ ದರ್ಶನ್ ಅವರು ಒಟ್ಟು 2,100 ಚ. ಅಡಿ ರಾಜ ಕಾಲುವೆ ಒತ್ತುವರಿ ಮಾಡಿದ್ದು, ಶಾಮನೂರು ಶಿವಶಂಕರಪ್ಪ ಅವರ ಆಸ್ಪತ್ರೆ ಸಂಪೂರ್ಣ ಒತ್ತುವರಿ ಜಾಗದಲ್ಲಿರುವುದು ದೃಢಪಟ್ಟಿದೆ.

ಕಳೆದ ವಾರ ಮುಂದಿನ ಏಳು ದಿನಗಳಲ್ಲಿ ಒತ್ತುವರಿ ಜಾಗವನ್ನು ತೆರವುಗೊಳಿಸುವಂತೆ ಇಬ್ಬರಿಗೂ ಅಂತಿಮ ನೋಟಿಸ್ ನೀಡಲಾಗಿದ್ದು, ಒಂದು ವೇಳೆ ತೆರವುಗೊಳಿಸದಿದ್ದೆರೆ ತಾವೇ ತೆರವು ಕಾರ್ಯಾಚರಣೆ ನಡೆಸುವುದಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ ಶಂಕರ್ ಅವರು ಎಚ್ಚರಿಕೆ ನೀಡಿದ್ದರು. ಆದರೂ ಮನೆ ಹಾಗೂ ಆಸ್ಪತ್ರೆ ತೆರವುಗೊಳಿಸದ ಹಿನ್ನೆಲೆಯಲ್ಲಿ ಇಂದು ವಶಕ್ಕೆ ಪಡೆಯಲಾಗಿದೆ.

Comments are closed.