ಮನೋರಂಜನೆ

ಕೊನೆಗೂ ‘ಏ ದಿಲ್ ಹೈ ಮುಶ್ಕಿಲ್’ ಚಿತ್ರಕ್ಕೆ ಬಿಡುಗಡೆ ಭಾಗ್ಯ ! ವಿಧಿಸಿದ ಮೂರು ಷರತ್ತುಗಳು ಏನು ಗೊತ್ತಾ..?

Pinterest LinkedIn Tumblr

yei-dilhai

ಮುಂಬೈ: ಕಡೆಗೂ ಏ ದಿಲ್ ಹೈ ಮುಶ್ಕಿಲ್ ಚಿತ್ರಕ್ಕೆ ಬಿಡುಗಡೆ ಭಾಗ್ಯ ದೊರೆತಿದೆ. ಶನಿವಾರ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ನಿರ್ವಪಕ ಸಂಘದ ಅಧ್ಯಕ್ಯ ಮುಖೇಶ್ ಭಟ್, ನಿರ್ದೇಶಕ ಕರಣ್ ಜೋಹರ್ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ನಡುವಿನ ಮಾತುಕತೆ ಫಲ ನೀಡಿದೆ. ಎಂಎನ್ಎಸ್ನ ವಿಧಿಸಿದ ಮೂರು ಷರತ್ತುಗಳಿಗೆ ಚಿತ್ರತಂಡ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ ಚಿತ್ರ ಬಿಡುಗಡೆಗೆ ಇದ್ದ ಅಡೆತಡೆ ದೂರವಾಗಿದೆ.

ಪಾಕ್ ನಟ ಫವಾದ್ ಖಾನ್ ಅವರಿಗೆ ಚಿತ್ರದಲ್ಲಿ ಅವಕಾಶ ನೀಡಿದ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಭಾರತೀಯ ಸೈನಿಕರ ಶ್ರೇಯೋಭಿವೃದ್ಧಿಗೆ 5 ಕೋಟಿ ರೂ., ಚಿತ್ರದ ಪ್ರಾರಂಭದಲ್ಲಿ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವುದು ಮತ್ತು ಭವಿಷ್ಯದಲ್ಲಿ ಪಾಕ್ ಕಲಾವಿದರನ್ನು ಭಾರತೀಯ ಚಿತ್ರರಂಗದಲ್ಲಿ ಬಳಸಿಕೊಳ್ಳದಿರುವುದು. ಈ ಮೂರು ಷರತ್ತುಗಳನ್ನು ಒಪ್ಪಿದರೆ ಮಾತ್ರ ಅವಕಾಶ ನೀಡಲಾಗುವುದು ಎಂದು ಠಾಕ್ರೆ ತಿಳಿಸಿದರು. ಇದಕ್ಕೆ ಮುಖೇಶ್ ಭಟ್ ಮತ್ತು ಏ ದಿಲ್ ಹೈ ಮುಶ್ಕಿಲ್ ಚಿತ್ರ ತಂಡ ಸಮ್ಮತಿ ಸೂಚಿಸಿತು. ಇದರಿಂದಾಗಿ ಅ.28ರಂದು ವಿಶ್ವದಾದ್ಯಂತ ಚಿತ್ರ ಬಿಡುಗಡೆಯಾಗಲಿದೆ.

ಬಳಿಕ ಮಾತನಾಡಿದ ಮುಖೇಶ್ ಭಟ್, ಸಭೆ ಸುಖಾಂತ್ಯವಾಗಿದೆ. ಎಂಎನ್ಎಸ ನೀಡಿದ ಷರತ್ತುಗಳಿಗೆ ಸಮ್ಮತಿ ಸೂಚಿಸಿದ್ದೇವೆ. ನಮಗೆ ದೇಶದ ಶ್ರೇಯೋಭಿವೃದ್ಧಿ ಮುಖ್ಯ. ಭವಿಷ್ಯದಲ್ಲಿ ಪಾಕ್ ಕಲಾವಿದರಿಗೆ ಯಾವುದೇ ರೀತಿ ಅವಕಾಶ ನೀಡುವುದಿಲ್ಲ ಎಂದು ಮುಖ್ಯಮಂತ್ರಿಗಳಿಗೆ ಭರವಸೆ ನೀಡಿದ್ದೇನೆ ಎಂದು ತಿಳಿಸಿದರು.

ಇನ್ನು ಎಂಎನ್ ಎಸ್ ಮುಖ್ಯಸ್ಥ ಠಾಕ್ರೆ ಮಾತನಾಡಿ, ಪಾಕ್ ಕಲಾವಿದರನ್ನು ಚಿತ್ರದಲ್ಲಿ ಬಳಸಿಕೊಂಡವರು ತಮ್ಮ ತಪ್ಪಿಗೆ ಪ್ರಾಯಶ್ಚಿತವಾಗಿ ಕನಿಷ್ಠ 5 ಕೋಟಿ ರೂಪಾಯಿಯನ್ನು ಸೈನಿಕರ ಕಣ್ಯಾಣಕ್ಕೆ ನೀಡಬೇಕು. ಈ ಮೂಲಕ ದೇಶಕ್ಕಾಗಿ ಪ್ರಾಣ ತ್ಯಾಗಮಾಡಿದವರಿಗೆ ಗೌರವ ಸಲ್ಲಿಸಿ ಎಂದು ಸಲಹೆ ನೀಡಿದರು.

ಏ ದಿಲ್ ಹೈ ಮುಶ್ಕಿಲ್ ಚಿತ್ರವನ್ನು ದೇಶದಲ್ಲಿ ಬಿಡುಗೆ ಮಾಡಬಾರದು ಎಂದು ಎಂಎನ್ಎಸ್ ಭಾರೀ ಪ್ರತಿಭಟನೆ ಹಮ್ಮಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ನಿರ್ವಪಕ ಸಂಘದ ಅಧ್ಯಕ್ಷ ಮುಖೇಶ್ ಭಟ್ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಬಳಿ ಸಹ ಮಾತುಕುತೆ ನಡೆಸಿದ್ದರು. ಇದಕ್ಕೆ ಗೃಹ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ, ಯಾವುದೇ ಅಡೆತಡೆಯಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದರು.

ಉಗ್ರರು ಗಡಿಯಲ್ಲಿ ನಡೆಸಿದ ಉರಿ ದಾಳಿಯಲ್ಲಿ 19 ಭಾರತೀಯ ಸೈನಿಕರು ಸಾವನ್ನಪ್ಪಿದ್ದರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೈನ್ಯ ಪಿಓಕೆಯಲ್ಲಿ ಸೀಮಿತ ದಾಳಿ ನಡೆಸಿ, ಉಗ್ರರನ್ನು ಸದೆ ಬಡಿದಿತ್ತು. ಗಡಿಯಲ್ಲಿನ ಈ ವಾತಾವರಣ ಉಭಯ ದೇಶಗಳ ಸಂಬಂಧ ಹಳೆಸಲು ಕಾರಣವಾಗಿದೆ. ಈಗಾಗಲೇ ಪಾಕಿಸ್ತಾನದಲ್ಲಿ ಭಾರತೀಯ ಟಿ.ವಿ ಚಾನಲ್ ಮತ್ತು ಚಿತ್ರಗಳನ್ನು ಬ್ಯಾನ್ ಮಾಡಲಾಗಿದೆ.

Comments are closed.