ಕರ್ನಾಟಕ

ವಿಶ್ವಪ್ರಸಿದ್ಧ ಮೈಸೂರು ದಸರಾ ಜಂಬೂ ಸವಾರಿಗೆ ಚಾಲನೆ….ಜನವೋ ಜನ

Pinterest LinkedIn Tumblr

dasara

ಮೈಸೂರು: ಇತಿಹಾಸ ಪ್ರಸಿದ್ಧ ಮೈಸೂರಿನಲ್ಲಿ ದಸರಾ ಹಬ್ಬದ ವಿರಾಟ್ ವೈಭವ; ತಳಿರು ತೋರಣಗಳಿಂದ ಸಾಲಂಕೃತಗೊಂಡಿರುವ ಬೀದಿಗಳ ಹಾಗೂ ಸೂಜಿಗಲ್ಲಿನಂತೆ ರಸಿಕರ ಸೆಳೆಯುತ್ತಿರುವ ಅರಮನೆಗಳ ಸೌಂದರ್ಯದ ನಡುವೆ ಜಂಬೂಸವಾರಿ ಕಣ್ಣಾರೆ ಕಂಡು ಮೈನವೀರೇಳಿಸುವ ಜಟ್ಟಿಗಳ ಕಾಳಗ ಆಕರ್ಷಣೆ ಬೇರೆ. ದೇಶ ವಿದೇಶಗಳಿಂದ ಆಗಮಿಸಿದ್ದ ಜನರ ಜೊತೆಗೆ ರಾಜ್ಯದ ಮೂಲೆ, ಮೂಲೆಗಳಿಂದ ಆಗಮಿಸಿದ್ದ ಲಕ್ಷಾಂತರ ಮಂದಿ ಜಂಬೂಸವಾರಿಯ ವೈಭವವನ್ನು ಕಣ್ತುಂಬಿಕೊಂಡು ನಾಡ ದೇವತೆ ಶ್ರೀ ಚಾಮುಂಡೇಶ್ವರಿಗೆ ಕೈ ಮುಗಿದು ಪುನೀತರಾದರು.

ಮಧ್ಯಾಹ್ನ 2.16ಕ್ಕೆ ಸರಿಯಾಗಿ ಸಲ್ಲುವ ಶುಭ ಮಕರ ಲಗ್ನದಲ್ಲಿ ಅಂಬಾವಿಲಾಸ ಅರಮನೆಯ ಉತ್ತರ ದ್ವಾರದಲ್ಲಿ ನಂದಿ ಧ್ವಜಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪೂಜೆ ಸಲ್ಲಿಸುವ ಮೂಲಕ ಜಂಬೂಸವಾರಿಗೆ ಚಾಲನೆ ನೀಡಿದರು.

ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾಗಿರುವ ನಾಡದೇವತೆ ಚಾಮುಂಡೇಶ್ವರಿಯನ್ನು ಹೊತ್ತ ಗಜಪಡೆ ಅರಮನೆ ದ್ವಾರದಿಂದ ಹೊರ ಬರುತ್ತಿದ್ದಂತೆ ನೆರೆದಿದ್ದ ಜನರ ಹರ್ಷೋದ್ಗಾರ ಮುಗಿಲು ಮುಟ್ಟಿದ್ದವು.

ಅರಮನೆ ಮುಂಭಾಗದಲ್ಲಿ ನಿರ್ಮಿಸಲಾಗಿರುವ ವೇದಿಕೆಯನ್ನೇರಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಸೇರಿದಂತೆ ಹಲವು ಗಣ್ಯರು ತಾಯಿ ಚಾಮುಂಡೇಶ್ವರಿಗೆ ಪುಷ್ಪನಮನ ಸಲ್ಲಿಸಿದರು.

ನಾಡ ದೇವತೆ ಶ್ರೀ ಚಾಮುಂಡೇಶ್ವರಿ ವಿರಾಜಮಾನವಾಗಿರುವ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯನ್ನು ಹೊತ್ತ ಅರ್ಜುನ ಆನೆ ಎಂದಿನ ಗಜ ಗಾಂಭೀರ್ಯದಿಂದ ಮೈಸೂರಿನ ರಾಜಮಾರ್ಗಗಳಲ್ಲಿ ಹೆಜ್ಜೆ ಇಡುತ್ತಾ ಸಾಗಿದೆ. ಅರ್ಜುನನಿಗೆ ಇತರ ಗಜಗಳು ಸಾಥ್ ನೀಡಿ ಮೆರವಣಿಗೆ ಆಕರ್ಷಣೆಗೆ ಮೆರಗು ತುಂಬಿದವು.

ಅಂಬಾರಿ ಹೊತ್ತ ಬಲರಾಮನ ಜೊತೆ ಪೊಲೀಸ್ ಬ್ಯಾಂಡ್‌ನ ಆಕರ್ಷಕ ತಾಳವಾದ್ಯ, ಕಂಸಾಳೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು, ಮನಮೋಹಕ ನೃತ್ಯ, ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಸ್ತಬ್ಧ ಚಿತ್ರಗಳು ಜಂಬೂ ಸವಾರಿಗೆ ಕಳೆ ತುಂಬಿದವು.

ಐತಿಹಾಸಿಕ ದಸರಾ ಉತ್ಸವಕ್ಕೆ ಇದೇ ಅ. 1 ರಂದು ಚಾಮುಂಡಿ ಬೆಟ್ಟದಲ್ಲಿ ನಾಡೋಜ ಚೆನ್ನವೀರ ಕಣವಿ ಉದ್ಘಾಟಿಸಿದ್ದರು. ನಂತರ 10 ದಿನಗಳ ಕಾಲ ಮೈಸೂರಿನಲ್ಲಿ ಪ್ರತಿದಿನ ಅದ್ಧೂರಿ ಸಾಂಸ್ಕೃತಿಕ ಉತ್ಸವಗಳು ನಡೆದಿದ್ದವು.

ಜನವೋ ಜನ

ದಸರಾ ಉತ್ಸವದ ಕೊನೆಯ ದಿನವಾದ ವಿಜಯದಶಮಿಯ ಜಂಬೂ ಸವಾರಿ ಮೆರವಣಿಗೆ ನೋಡಲು ಜಂಬೂಸವಾರಿ ಸೂಗುವ ರಸ್ತೆಯ ಇಕ್ಕೇಲಗಳಲ್ಲೂ ಲಕ್ಷಾಂತರ ಜನ ಸೇರಿದ್ದರು. ರಸ್ತೆ ಬದಿಯ ಮರ, ಎತ್ತರದ ಕಟ್ಟಡಗಳ ಮೇಲೆ ನಿಂತು ಜಂಬೂಸವಾರಿ ವೈಭವವನ್ನು ಜನ ಕಣ್ ತುಂಬಿಸಿಕೊಂಡರು.

ನಾಡಿನ ವೈವಿಧ್ಯಮಯ ಸಂಸ್ಕೃತಿಯನ್ನು ಬಿಂಬಿಸುವ 30 ಜಿಲ್ಲೆದಗಳ ಇತಿಹಾಸ, ಪರಂಪರೆಯನ್ನು ಸಾರುವ ಸ್ತಬ್ಧಚಿತ್ರಗಳು ನೋಡುಗರ ಮನ ಸೆಳೆದವು.

ಕಲ್ಬುರ್ಗಿಯ ಚಂದ್ರಲಾಂಬ ಪರಮೇಶ್ವರಿ ದೇವಸ್ಥಾನ, ಸಿರಸಿಯ ಮಾರಿಕಾಂಭ ದೇವಾಲಯ, ಕೋಲಾರದ ಸೋಮೇಶ್ವರ ದೇವಾಲಯ, ಬಾಗಲಕೋಟೆಯ ಸಂಗಮನಾಥ ದೇವಾಲಯ, ವಿಜಪುರದ ಆಲಮಟ್ಟಿ ಜಲಾಶಯ, ಶಿವಮೊಗ್ಗದ ಇಕ್ಕೇರಿ ದೇವಸ್ಥಾನ ಹಾಗೂ ಜೋಗ ಜಲಪಾತದ ಸ್ತಬ್ಧಚಿತ್ರಗಳು ಆಕರ್ಷಣೀಯ ಎನಿಸಿದವು.

ಇದರ ಜೊತೆಗೆ ‌ಡೊಳ್ಳುಕುಣಿತ, ಗೊರವರ ಕುಣಿತ, ಪೂಜಾ ಕುಣಿತ, ಪಟದ ಕುಣಿತ, ಬೆದರುಬೊಂಬೆ, ಮರಗಾಲು, ಹುಲಿವೇಷ, ಕೀಲು ಕುದುರೆ, ಯಕ್ಷಗಾನ, ಕೋಲಾಟ, ಕತ್ತಿವರಸೆ ಸೇರಿದಂತೆ 59 ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಸಾಗಿ ಜಾನಪದ ಸಂಸ್ಕೃತಿಯನ್ನು ಬಿಂಬಿಸಿದವು.

ಎನ್‌ಸಿಸಿ, ಸ್ಕೌಟ್ಸ್ ಮತ್ತು ಗೈ‌ಡ್ಸ್, ಕೆಎಸ್ಆರ್‌ಪಿ, ಹೋಮ್ ಗಾರ್ಡ್ಸ್, ಅಗ್ನಿ ಶಾಮಕದಳದವರು ಮೆರವಣಿಗೆಯಲ್ಲಿ ಆಕರ್ಷಕ ಪಥಸಂಚಲನ ನಡೆಸಿದವು.

ಮೈಸೂರು ಅರಮನೆಯಿಂದ ಆರಂಭವಾದ ಜಂಬೂಸವಾರಿ ಮೆರವಣಿಗೆ ಜಯಚಾಮರಾಜೇಂದ್ರ ವೃತ್ತ, ಕೆ.ಆರ್. ವೃತ್ತ. ಸಯ್ಯಾಜಿರಾವ್ ರಸ್ತೆ ಸೇರಿದಂತೆ ಪ್ರಮುಖ ಮಾರ್ಗಗಳಲ್ಲಿ ಸಾಗಿ ಬನ್ನಿ ಮಂಟಪದಲ್ಲಿ ಪೂರ್ಣಗೊಂಡಿತು.

ಬನ್ನಿಮಂಟಪದಲ್ಲಿ ಇಂದು ರಾತ್ರಿ 8 ಗಂಟೆಗೆ ಅತ್ಯಾಕರ್ಷಕ ಟಾರ್ಚ್ ಲೈಟ್ ಪರೇಡ್ ನಡೆಯಲಿದ್ದು, ಈ ಪರೇಡ್‌ನಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಗೌರವ ವಂದನೆ ಸ್ವೀಕರಿಸುವರು.

ಬಿಗಿ ಭದ್ರತೆ

ಜಂಬೂಸವಾರಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಅಗತ್ಯ ಸಂಖ್ಯೆಯ ಸಿಸಿ ಕ್ಯಾಮರಾಗಳನ್ನು ಅಳವಡಿಸುವ ಮೂಲಕ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಬಾಂಬ್ ನಿಷ್ಕ್ರೀಯದಳ, ಶ್ವಾನದಳ, ಕೆಎಸ್ಆರ್‌ಪಿ ಸೇರಿದಂತೆ 5 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು. ಇಂದಿನ ಎಲ್ಲಾ ಕಾರ್ಯಕ್ರಮದಲ್ಲಿ ಸಚಿವರುಗಳಾದ ಎಚ್.ಸಿ. ಮಹದೇವಪ್ಪ, ಎಚ್.ಎಸ್. ಮಹದೇವ ಪ್ರಸಾದ್, ತನ್ವೀರ್ ಸೇಠ್, ಉಮಾಶ್ರೀ, ಮೇಯರ್ ಭೈರಪ್ಪ, ಶಾಸಕರುಗಳಾದ ಎಂ.ಕೆ. ಸೋಮಶೇಖರ್, ವಾಸು, ಜಿಲ್ಲಾಧಿಕಾರಿ ರಣ್‌ದೀಪ್, ಪೊಲೀಸ್ ಆಯುಕ್ತ ದಯಾನಂದ, ಎಸ್.ಪಿ. ರವಿ ಡಿ. ಚನ್ನಣ್ಣನವರ್ ಸೇರಿದಂತೆ ಅನೇಕ ಗಣ್ಯರು, ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.