ಮುಂಬೈ: ಗಡಿಯಲ್ಲಿ ದೇಶ ಕಾಯುತ್ತಿರುವ ಸೈನಿಕರಿಗೆ ನಾವು ಕೈ ಜೋಡಿಸಿ, ಇನ್ನಷ್ಟು ಬಲ ತುಂಬೋಣ. ಪಾಕ್ ಕಲಾವಿದರ ಕುರಿತು ಮಾತನಾಡಲು ಇದು ಸೂಕ್ತ ಸಮಯವಲ್ಲ ಎಂದು 74ನೇ ವಸಂತಕ್ಕೆ ಕಾಲಿಟ್ಟ ಅಮಿತಾಭ್ ಬಚ್ಚನ್ ಮಂಗಳವಾರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮಿತಾಭ್, ಕಳೆದ ಸೆ.18ರಂದು ಉಗ್ರರು ನಡೆದ ಉರಿ ದಾಳಿಗೆ, ಸೆ.28ರಂದು ಭಾರತೀಯ ಸೈನ್ಯ ಸೀಮಿತ ದಾಳಿ ಮೂಲಕ ಪ್ರತಿಕಾರ ತೀರಿಸಿಕೊಂಡಿದೆ. ಇದೀಗ ನಾವು ನಿಮ್ಮೊಂದಿಗೆ ನಾವಿದ್ದೇವೆ ಎಂದು ಸೈನ್ಯಕ್ಕೆ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಮಾಡಬೇಕು. ಈ ಕಾರ್ಯಕ್ಕೆ ಎಲ್ಲ ಭಾರತೀಯರು ಒಗ್ಗಟ್ಟು ಪ್ರದರ್ಶಿಸಿ, ಶತ್ರುಗಳಿಗೆ ದಿಟ್ಟ ಉತ್ತರ ನೀಡಬೇಕಾಗಿದೆ ಎಂದು ತಿಳಿಸಿದರು.
ಪಾಕ್ ಕಲಾವಿದರ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಬಿಗ್ ಬಿ, ಕಾಲವೇ ಇದಕ್ಕೆ ಉತ್ತರ ನೀಡಲಿದೆ ಎಂದು ಹೇಳಿದರು. ಇನ್ನು ಮಿತಾಭ್ ಬಚ್ಚನ್ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿಸಬೇಕೆಂಬ ಸ್ನೇಹಿತ ಶತ್ರುಘ್ನ ಸಿನ್ಹ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ಶತ್ರುಘ್ನ ಅವರು ಹಾಸ್ಯ ಪ್ರವೃತ್ತಿಯವರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ ಎಂದು ಹೇಳಿದರು.
ಅಮಿತಾಭ್ ತಮ್ಮ ಅಭಿಮಾನಿಗಳ ಜತೆಗೆ ಜನ್ಮದಿನವನ್ನು ಆಚರಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ, ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಹಾಗೂ ಸಹ ಕಲಾವಿದರು ತಮ್ಮ ನೆಚ್ಚಿನ ನಟನಿಗೆ ವಿಶಿಷ್ಟವಾಗಿ ಶುಭ ಕೋರಿದ್ದಾರೆ.