ಪ್ರಮುಖ ವರದಿಗಳು

ಬಸ್ ನಲ್ಲಿ ಹೋಗುತ್ತಿದ್ದ ವೇಳೆ ಪತ್ನಿಯ ಸಾವು; ಸುರಿಯುವ ಮಳೆಯ ಮಧ್ಯೆಯೇ ಮಗು, ತಂದೆಯನ್ನು ಬಸ್ ನಿಂದ ಹೊರಹಾಕಿ ಅಮಾನವೀಯತೆ ಮೆರೆದ ಕಂಡಕ್ಟರ್

Pinterest LinkedIn Tumblr

43

ದಮೊಹ್: ಬಸ್ ನಲ್ಲಿಯೇ ಮೃತಪಟ್ಟ ಪತ್ನಿಯ ಸಾವಿನ ದುಃಖದಲ್ಲಿದ್ದ ವ್ಯಕ್ತಿಯೊಂದಿಗೆ ಕಂಡಕ್ಟರ್ ವೊಬ್ಬ ಅಮಾನವೀಯವಾಗಿ ನಡೆದುಕೊಂಡು, ಸುರಿಯುವ ಮಳೆಯ ಮಧ್ಯೆಯೇ ವ್ಯಕ್ತಿ ಹಾಗೂ ಆತನ ಮಗುವನ್ನು ಬಸ್ ನಿಂದ ಹೊರಹಾಕಿರುವ ಅಮಾನವೀಯ ಘಟನೆಯೊಂದು ಮಧ್ಯಪ್ರದೇಶದಲ್ಲಿ ನಡೆದಿದೆ.

ಛತ್ತರ್ ಪುರ್ ಜಿಲ್ಲೆಯ ನಿವಾಸಿಯಾಗಿರುವ ರಾಮ್ ಸಿಂಗ್ ಎಂಬುವವರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ಪತ್ನಿಯನ್ನು ಬಸ್ ವೊಂದರಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ರಾಮ್ ಸಿಂಗ್ ಅವರ ಪತ್ನಿ ಕೆಲ ದಿನಗಳ ಹಿಂದಷ್ಟೇ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದರು. ಇದರಂತೆ ಇಂದು ತೀವ್ರ ಅನಾರೋಗ್ಯ ಉಂಟಾದ ಹಿನ್ನೆಲೆಯಲ್ಲಿ 5 ದಿನಗಳ ಮಗುವೊಂದಿಗೆ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ. ಈ ವೇಳೆ ಮಾರ್ಗದ ಮಧ್ಯೆಯೇ ಆಕೆ ಮೃತಪಟ್ಟಿದ್ದಾಳೆ.

ಈ ವೇಳೆ ಅಮಾನವೀಯವಾಗಿ ನಡೆದುಕೊಂಡಿರುವ ಬಸ್ ಕಂಡಕ್ಟರ್ ಮೃತದೇಹದೊಂದಿಗೆ ಪ್ರಯಾಣ ಮಾಡಲು ಇತರೆ ಪ್ರಯಾಣಿಕರು ವಿರೋಧ ವ್ಯಕ್ತಪಡಿಸುತ್ತಿದ್ದು, ಕೂಡಲೇ ಮೃತದೇಹದೊಂದಿಗೆ ಕೆಳಗಿಳಿಯುವಂತೆ ಹೇಳಿದ್ದಾನೆ.

ಅರಣ್ಯ ಪ್ರದೇಶದ ಮಧ್ಯೆ ಬಸ್ ಚಲಿಸುತ್ತಿದ್ದು, ಧಾರಾಕಾರ ಮಳೆ ಸುರಿಯುತ್ತಿದೆ. ಈ ಸಮಯದಲ್ಲಿ ಹೇಗೆ ಇಳಿಯಲು ಸಾಧ್ಯ ಎಂದು ರಾಮ್ ಸಿಂಗ್ ಪ್ರಶ್ನಿಸಿದ್ದಾರೆ. ಈ ವೇಳೆ ಆತನ ಮಾತನ್ನು ಕೇಳದ ಕಂಡೆಕ್ಟರ್ ಬಲವಂತವಾಗಿ ಮೃತದೇಹದೊಂದಿಗೆ ರಾಮ್ ಸಿಂಗ್ ಮತ್ತು ಆತನ 5 ದಿನಗಳ ಮಗಳನ್ನು ಕೆಳಗಿಳಿಸಿದ್ದಾನೆ.

ರಸ್ತೆ ಮಧ್ಯೆಯೇ ಪತ್ನಿ ಮೃತದೇಹನ್ನು ಮಲಗಿಸಿದ ರಾಮ್ ಸಿಂಗ್ ಹಸಿವಿನಿಂದ ನರಳುತ್ತಿದ್ದ ಮಗಳಿಗೆ ತಿಂಡಿಯನ್ನು ತಿನ್ನಿಸಲು ಆರಂಭಿಸಿದ್ದಾನೆ. ಈ ವೇಳೆ ಅದೇ ರಸ್ತೆಯಲ್ಲಿ ಮೃತ್ಯುಂಜಯ ಹಜಾರಿ ಮತ್ತು ರಾಜೇಶ್ ಪಟೇಲ್ ಎಂಬ ವಕೀಲರು ಹೋಗುತ್ತಿದ್ದರು. ನಂತರ ವ್ಯಕ್ತಿಯನ್ನು ಕಂಡ ಅವರು ವಾಹನವನ್ನು ನಿಲ್ಲಿಸಿ ವಿಚಾರಣೆ ನಡೆಸಿದ್ದಾರೆ.

ನಂತರ ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಬೇಸರದ ಸಂಗತಿ ಎಂದರೆ ಸ್ಥಳಕ್ಕೆ ಬಂದ ಪೊಲೀಸರೂ ಮಾಹಿತಿ ಪಡೆದುಕೊಂಡು ಸಹಾಯಕ್ಕೆ ಬಾರದೆ ಮತ್ತೆ ಹಿಂತಿರುಗಿ ಹೋಗಿದ್ದಾರೆ.

ಈ ಕುರಿತಂತೆ ಮಾತನಾಡಿರುವ ವಕೀಲ ಪಟೇಲ್, ಪೊಲೀಸರಿಗೆ ಮಾಹಿತಿ ನೀಡಿದ ಕೆಲ ಗಂಟೆಗಳ ಬಳಿಕ ಸ್ಥಳಕ್ಕೆ ಬಂದಿದ್ದರು. ಸಹಾಯ ಮಾಡದೆಯೇ ಮಾಹಿತಿ ಪಡೆದುಕೊಂಡು ಹಿಂತಿರುಗಿ ಹೋಗಿಬಿಟ್ಟರು ಎಂದು ಹೇಳಿದ್ದಾರೆ.

ನಂತರ ವಕೀಲರೇ ಆ್ಯಂಬುಲೆನ್ಸ್ ಕರೆ ಮಾಡಿ ಮೃತದೇಹವನ್ನು ರಾಮ್ ಸಿಂಗ್ ಅವರ ಮನೆಗೆ ಕಳುಹಿಸಿಕೊಟ್ಟಿದ್ದಾರೆ.

ಇನ್ನು ಘಟನೆ ಬಗ್ಗೆ ಬಟಿಯಾಗರ್ ಪೊಲೀಸ್ ಠಾಣೆಯ ಅಧಿಕಾರಿಗಳನ್ನು ವಿಚಾರಿಸಿದಾಗ, ಆ ರೀತಿಯ ಯಾವುದೇ ವರದಿಗಳು ತಿಳಿದುಬಂದಿಲ್ಲ ಎಂದು ತಿಳಿಸಿದ್ದಾರೆ.

ಘಟನೆ ಕುರಿತಂತೆ ಕಂಡಕ್ಟರ್ ಶಾರ್ದಾ ಸೇನ್ ಮಾತನಾಡಿದ್ದು, ಬಸ್ ನಲ್ಲಿದ್ದ ಉಳಿದ ಪ್ರಯಾಣಿಕರು ಮೃತದೇಹದೊಂದಿಗೆ ಪ್ರಯಾಣ ಮಾಡಲು ಸಾಧ್ಯವಿಲ್ಲ ಎಂದು ಹೇಳಿ ವಿರೋಧ ವ್ಯಕ್ತಪಡಿಸುತ್ತಿದ್ದರು. ಹೀಗಾಗಿ ಅನಿವಾರ್ಯವಾಗಿ ಆತನನ್ನು ಕೆಳಗಿಳಿಸಿ ಬಸ್ ನ್ನು ತೆಗೆದುಕೊಂಡು ಹೋಗಲಾಯಿತು ಎಂದು ಹೇಳಿಕೊಂಡಿದ್ದಾನೆ.

Comments are closed.