ಕರಾವಳಿ

ಸ್ವಾತಂತ್ರ್ಯೋತ್ಸವದಂದು ಜೈಲಲ್ಲಿರುವ 300 ಕೈದಿಗಳಿಗೆ ಬಿಡುಗಡೆ ಭಾಗ್ಯ

Pinterest LinkedIn Tumblr

jail-new

ಬೆಂಗಳೂರು: ರಾಜ್ಯದ ನಾನಾ ಜೈಲುಗಳಲ್ಲಿರುವ ಜೈಲು ಹಕ್ಕಿಗಳಿಗೆ ಬಿಡುಗಡೆ ಭಾಗ್ಯ ಸಿಗುವ ಸಾಧ್ಯತೆ ಇದೆ. ಸ್ವಾತಂತ್ರ್ಯೋತ್ಸವ ದಿನದಂದು (ಆ. 15) ಸನ್ನಡತೆ ಆಧಾರದ ಮೇಲೆ ಕೈದಿಗಳನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಕಾರಾಗೃಹ ಇಲಾಖೆ ಪಟ್ಟಿ ಸಿದ್ಧಪಡಿಸಿದ್ದು, ಇದನ್ನು ರಾಜ್ಯಪಾಲರಿಗೆ ಕಳುಹಿಸಿಕೊಡಲಿದೆ. ಹೊಸ ಮಾರ್ಗಸೂಚಿ ಅನ್ವಯ 300 ಕೈದಿಗಳ ಪಟ್ಟಿ ಸಿದ್ಧಪಡಿಸಲಾಗಿದ್ದು, ಇದರಲ್ಲಿ ಮಾಫಿ ಅವಧಿ ಸೇರಿ 14 ವರ್ಷ ಶಿಕ್ಷೆ ಪೂರೈಸಿರುವ, 10 ವರ್ಷ ಶಿಕ್ಷೆ ಪೂರೈಸಿದ, 60 ವರ್ಷ ಮೇಲ್ಪಟ್ಟ ಮಹಿಳಾ ಕೈದಿಗಳು ಸೇರಿದ್ದಾರೆ ಎನ್ನಲಾಗಿದೆ. ಗಣರಾಜ್ಯೋತ್ಸವ ಸಂದರ್ಭದಲ್ಲಿ 352 ಸನ್ನಡತೆ ಕೈದಿಗಳನ್ನು ಬಿಡುಗಡೆ ಮಾಡಲಾಗಿತ್ತು. ಆದರೆ, ಆ ಸಂದರ್ಭದಲ್ಲಿ ಹಳೆ ಮಾರ್ಗಸೂಚಿ ಅನುಸರಿಸಿದ ಕಾರಣ ಬಹುತೇಕ ಮಹಿಳಾ ಕೈದಿಗಳಿಗೆ ಬಿಡುಗಡೆ ಭಾಗ್ಯ ಸಿಕ್ಕಿರಲಿಲ್ಲ.

ಜೊತೆಗೆ ಶಿಶು ಹತ್ಯೆ ಸೇರಿ ಕೆಲವು ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಬಿಡುಗಡೆ ಅರ್ಹತೆ ಹೊಂದಿದ್ದರೂ ಬಿಡುಗಡೆಯಾಗಿರಲಿಲ್ಲ.

ಹಳೇ ಮಾರ್ಗಸೂಚಿಯಲ್ಲಿ ತಾಂತ್ರಿಕ ತೊಡಕು ಎದುರಾಗಿತ್ತು. ಈ ಕುರಿತು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಗಮನಕ್ಕೆ ತರಲಾಗಿತ್ತು. ಕೇರಳ ಮಾದರಿಯ ಬಿಡುಗಡೆ ಮಾರ್ಗಸೂಚಿ ರಚಿಸಿ ಅದರನ್ವಯ ಬಿಡುಗಡೆಗೆ ಕಾರಾಗೃಹ ಇಲಾಖೆಯ ಹಿಂದಿನ ಎಡಿಜಿಪಿ ಕೆ.ವಿ.ಗಗನ್‍ದೀಪ್ ಮುಂದಾಗಿದ್ದರೂ ಆ ಪ್ರಸ್ತಾವನೆ ನೆನೆಗುದಿಗೆ ಬಿದ್ದಿತ್ತು. ಅವರ ವರ್ಗಾವಣೆ ನಂತರ ಕಾರಾಗೃಹ ಇಲಾಖೆ ಡಿಜಿಪಿಯಾಗಿ ಹೆಚ್.ಎನ್. ಸತ್ಯನಾರಾಯಣ ರಾವ್ ಅಧಿಕಾರ ವಹಿಸಿಕೊಂಡಾಗ ಹೊಸ ಮಾರ್ಗಸೂಚಿ ಅನ್ವಯ ಕೈದಿಗಳ ಬಿಡುಗಡೆಗೆ ಪ್ರಸ್ತಾವನೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದರು.

ಇದರನ್ವಯ ಬೆಳಗಾವಿಯ ಹಿಂಡಲಗಾ ಜೈಲಿನ 43 ಸನ್ನಡತೆ ಕೈದಿಗಳನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ. ಹಿಂಡಲಗಾ ಜೈಲಿನಲ್ಲಿ 985 ಕೈದಿಗಳಿದ್ದು, 200 ಕೈದಿಗಳು ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. 14 ವರ್ಷಕ್ಕಿಂತ ಹೆಚ್ಚು ಕಾಲ ಸೆರೆವಾಸ ಅನುಭವಿಸಿದ 43 ಕೈದಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆಗೆ ಕಾರಾಗೃಹ ಸಲಹಾ ಮಂಡಳಿ ಪ್ರಸ್ತಾವನೆ ಸಲ್ಲಿಸಿದೆ. ಜೂ.25ರಂದು ನಡೆದಿದ್ದ ಸಭೆಯಲ್ಲಿ ಜೈಲು ಅಧಿಕಾರಿಗಳು, ಕೊಲೆ ಮತ್ತಿತರ ಪ್ರಕರಣಗಳಲ್ಲಿ ಸೆರೆವಾಸ ಅನುಭವಿಸಿ, ಉತ್ತಮ ನಡತೆ ತೋರಿದ 50 ಕೈದಿಗಳ ಬಿಡುಗಡೆ ಪಟ್ಟಿ ತಯಾರಿಸಿದ್ದರು.

ಸಲಹಾ ಮಂಡಳಿ ಕೈದಿಗಳ ಸಮಗ್ರ ಹಿನ್ನೆಲೆ ತಿಳಿದುಕೊಂಡು, 43 ಕೈದಿಗಳ ಬಿಡುಗಡೆಗೆ ಮಾತ್ರ ಒಪ್ಪಿಗೆ ನೀಡಿದೆ. ಇದರಲ್ಲಿ ಇಬ್ಬರು ಮಹಿಳಾ ಕೈದಿಗಳೂ ಇದ್ದಾರೆ. 2016ರ ಜನವರಿ 26ರಂದು ಹಿಂಡಲಗಾ ಜೈಲಿನಲ್ಲಿ ಸನ್ನಡತೆ ಆಧಾರದಲ್ಲಿ 114 ಕೈದಿಗಳನ್ನು ಬಿಡುಗಡೆಗೊಳಿಸ ಲಾಗಿತ್ತು. ಇನ್ನು ಬೆಂಗಳೂರು, ಮೈಸೂರು ಮತ್ತಿತರ ಜೈಲುಗಳಲ್ಲಿರುವ ಸನ್ನಡತೆ ಕೈದಿಗಳ ಪಟ್ಟಿ ತಯಾರಿಸಬೇಕಿದ್ದು, ಈ ಬಗ್ಗೆ ಕಾರಾಗೃಹ ಇಲಾಖೆ ಪಟ್ಟಿ ಸಿದ್ಧತೆ ಮಾಡಿಕೊಳ್ಳುತ್ತಿದೆ ಎನ್ನಲಾಗಿದೆ. ಹೊಸ ಮಾರ್ಗಸೂಚಿ ಅನ್ವಯ ಸನ್ನಡತೆ ಕೈದಿಗಳ ಬಿಡುಗಡೆ ಪಟ್ಟಿ ತಯಾರಿಸಲಾಗುತ್ತಿದೆ. ಶೀಘ್ರದಲ್ಲೇ ಸರ್ಕಾರದ ಮುಖಾಂತರ ರಾಜ್ಯಪಾಲರಿಗೆ ಪಟ್ಟಿ ಸಲ್ಲಿಸಲಾಗುವುದು ಎಂದು ಕಾರಾಗೃಹ ಇಲಾಖೆ ಡಿಜಿಪಿ ಹೆಚ್.ಎನ್. ಸತ್ಯನಾರಾಯಣರಾವ್ ತಿಳಿಸಿದ್ದಾರೆ.

Comments are closed.