ಮುಂಬಯಿ : ಗರ್ಭಿಣಿ ಆದಾಗ ಎಷ್ಟೋ ನಟಿಯರು ಕ್ಯಾಮೆರಾ ಮುಂದೆ ಕಾಣಿಸ್ಕೊಳ್ಳೋದಿಲ್ಲ. ಹೀಗಿರುವಾಗ ನಾಲ್ಕೈದು ತಿಂಗಳ ಗರ್ಭಿಣಿ ಆಗಿರುವ ಕರೀನಾ ಕಪೂರ್ ‘ವೀರೆ ದಿ ವೆಡ್ಡಿಂಗ್’ನಲ್ಲಿ ನಟಿಸುತ್ತಿದ್ದಾರೆ. ಕರೀನಾಳಂತೆ ಈ ಹಿಂದೆಯೂ ಸ್ಟಾರ್ ನಟಿಯರು ಗರ್ಭಿಣಿ ಆಗಿದ್ದಾಗ ಬಣ್ಣ ಹಚ್ಚಿರೋದು ಕೌತುಕ ವಿಚಾರ
ಅಲ್ಲೆಲ್ಲೋ ಹಾಲಿವುಡ್ ನಟಿಯರು ಪ್ರೆಗ್ನೆಂಟ್ ಇದ್ದಾಗ ಫೋಟೋಶೂಟ್ ಮಾಡ್ಕೊಳ್ತಾರೆ. ಉಬ್ಬಿದ ಹೊಟ್ಟೆ ಮೇಲೆ ಚೆಂದದ ಟ್ಯಾಟೂ ಹಾಕಿಸ್ಕೊಳ್ಳೋದು ಅವರ ಫ್ಯಾಶನ್. ಈ ಪರಂಪರೆಯನ್ನು ಬಾಲಿವುಡ್ ಸ್ವೀಕರಿಸಿದ್ದು ಬಹಳ ಕಡಿಮೆ. ಇಲ್ಲಿ ನಟಿಮಣಿಗಳು ಗರ್ಭ ಧರಿಸಿದರೆ ಪಂಜರದ ಗಿಳಿಯಂತೆ ಬೆಚ್ಚನೆ ಗೂಡಿನಲ್ಲಿ ಕೂರೋದೇ ಹೆಚ್ಚು. ಸಾರ್ವಜನಿಕವಾಗಿ ಹೊರಗೆ ಕಾಲಿಡೋದು ಕಡಿಮೆ. ಕಾಲಿಟ್ಟರೂ ಗುಪ್ತ್ಗುಪ್ತ್ ಆಗಿ ಕಾರಲ್ಲೇ ಹೋಗಿ, ಗಪ್ಚುಪ್ ಕೆಲಸ ಮುಗಿಸಿ, ಕ್ಯಾಮೆರಾ ಕಣ್ಣಿಗೆ ಬೀಳದೆ ವಾಪಸಾಗೋದು ಇವರ ರೂಢಿ. ಪ್ರೆಗ್ನೆಂಟ್ ಇದ್ದಾಗ ಜಾಸ್ತಿ ಫೋಟೋ ತೆಗೆಸಿಕೊಳ್ಬಾರ್ದು, ಮೀಡಿಯಾಗಳ ಕಣ್ಣಿಗೆ ಬಿದ್ದು ಪ್ರಚಾರದ ವಸ್ತು ಆಗ್ಬಾರ್ದು ಅನ್ನೋ ಕಾಳಜಿ ಇಲ್ಲಿದ್ದಿರಬಹುದು.
ಆದರೀಗ ಕರೀನಾ ಕಪೂರ್ ತುಳಿಯುತ್ತಿರುವ ಹಾದಿಯೇ ಭಿನ್ನ. ಇತ್ತೀಚೆಗಷ್ಟೇ ಪತಿ ಸೈಫ್ ಅಲಿಖಾನ್, ‘ಕರೀನಾ ಈಗ ನಾಲ್ಕು ತಿಂಗಳ ಗರ್ಭಿಣಿ. ಡಿಸೆಂಬರ್ ವೇಳೆ ಹೊಸ ಅತಿಥಿ ಬರಲಿದ್ದಾನೆ’ ಎಂದಿದ್ದರು. ಹಾಗೆ ನೋಡಿದರೆ ಕರೀನಾ, ರಾಣಿ ಮುಖರ್ಜಿಯಂತೆಯೇ ಮನೆಯಲ್ಲಿಯೇ ಕೂರಬಹುದಿತ್ತು. ಆದರವರು ‘ವೀರೆ ದಿ ವೆಡ್ಡಿಂಗ್’ ಚಿತ್ರಕ್ಕೆ ಸಹಿ ಹಾಕಿ, ಇದೇ ತಿಂಗಳಿನಿಂದ ಶುರುವಾಗುವ ಶೂಟಿಂಗಿನಲ್ಲಿ ಭಾಗಿ ಆಗ್ತಿದ್ದಾರೆ. ಶಶಾಂಕ ಘೋಷ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಪ್ರೆಗ್ನೆಂಟ್ ಕರೀನಾ ಜೊತೆಗೆ ಸೋನಂ ಕಪೂರ್ ನಟಿಸುತ್ತಿದ್ದಾರೆ.
ತನ್ನ ಕೂಸಿಗೆ ಐದಾರು ತಿಂಗಳಾಗಿರುವಾಗಲೇ ಸಿನಿಪ್ರಿಯರಿಗೆ ತೋರಿಸುವ ತವಕ ಕರೀನಾದ್ದಂತೆ. ‘ಗರ್ಭಿಣಿಯರು ಸಾಕಷ್ಟು ಎಚ್ಚರ ವಹಿಸಬೇಕೆನ್ನೋದು ಗೊತ್ತು. ಕಲಾವಿದೆಯರಿಗೆ ಕೆಲವೊಮ್ಮೆ ಇದು ಅನ್ವಯಿಸದು’ ಎನ್ನುವ ಕರೀನಾಗೆ ಈ ಚಿತ್ರದಲ್ಲೂ ಸಿಕ್ಕಿರುವುದು ಪ್ರಗ್ನೆಂಟ್ ಪಾತ್ರವೇ! ಹಾಗೆ ನೋಡಿದರೆ, ಪ್ರೆಗ್ನೆಂಟ್ ಆಗಿದ್ದಾಗ ತಾರೆಯರು ನಟಿಸಿದ್ದು ಇದೇ ಮೊದಲಲ್ಲ.
ಕಾಜೊಲ್: 6 ತಿಂಗಳು, ವಿ ಆರ್. ಫ್ಯಾಮಿಲಿ
2010ರಲ್ಲಿ ತೆರೆಕಂಡ ‘ವಿ ಆರ್.. ಫ್ಯಾಮಿಲಿ’ ಸಿನಿಮಾದಲ್ಲಿ ಮಾಯಾ ಪಾತ್ರದಲ್ಲಿ ಕಾಜೊಲ್ ನಟಿಸಿದ್ದರು. ಅಲ್ಲವರು ಮೂರು ಮಕ್ಕಳ ತಾಯಿ, ನಾಲ್ಕನೇ ಮಗುವಿನ ಗರ್ಭಿಣಿ. ಅಲ್ಲಿ ಪಾತ್ರಕ್ಕಾಗಿ ಕಾಜೊಲ್ ಹೊಟ್ಟೆಗೆ ಬಟ್ಟೆ ಕಟ್ಟಿಕೊಂಡು ನಟಿಸಲಿಲ್ಲ. ಕೃಷ್ಣಸುಂದರಿ ಆಗ ಎರಡನೇ ಮಗುವಿನ ತಾಯಿ! ಕಾಜೊಲ್ ಆಗ ಶೂಟಿಂಗ್ ಅಲ್ಲದೆ, ಸಿನಿಮಾ ಬಿಡುಗಡೆಯ ಪ್ರಚಾರಕ್ಕೂ ಕೊನೆಯ ತನಕ ಬಂದಿದ್ದರು. ‘ಡೆಲಿವರಿ ತನಕ ಯಾವುದೇ ಪಾತ್ರ ಒಪ್ಕೊಳ್ಬೇಡ’ ಎಂದು ಅಜಯ್ ದೇವಗನ್ ತನ್ನ ಪತ್ನಿಗೆ ಯಾವತ್ತೂ ಹೇಳಿಯೇ ಇರ್ಲಿಲ್ವಂತೆ
ಜೂಹಿ ಚಾವ್ಲಾ: 7 ತಿಂಗಳು, ಝಾಂಕರ್ ಬೀಟ್ಸ್
ಈ ವಿಚಾರದಲ್ಲಿ ಚಾಕ್ಲೆಟ್ ಚೆಲುವೆ ಜೂಹಿ ಚಾವ್ಲಾರನ್ನು ಮೆಚ್ಚಲೇಬೇಕು 2012 ರಲ್ಲಿ ಮಗಳು ಝಾನ್ವಿ ಗರ್ಭದಲ್ಲಿರುವಾಗಲೇ ಎರಡು ಸಿನಿಮಾಗಳನ್ನು ಜೂಹಿ ಮುಗಿಸಿದ್ದರು. ‘ಏಕ್ ರಿಷ್ತಾ’, ‘ಅಮ್ದಾನಿ ಅತ್ತಾನಿ ಖರ್ಚಾ ರುಪೈಯ್ಯಾ’ ಚಿತ್ರಗಳ ಶೂಟಿಂಗ್ ಅನ್ನು ಮೂರ್ನಾಲ್ಕು ತಿಂಗಳ ಗರ್ಭಿಣಿ ಇರುವಾಗಲೇ ಮುಗಿಸಿದ್ದರು. 2003 ರಲ್ಲಿ ಮಗ ಅರ್ಜುನ್ ಗರ್ಭದಲ್ಲಿರುವಾಗ ‘ಝಾಂಕರ್ ಬೀಟ್ಸ್’ ಸಿನಿಮಾದಲ್ಲಿ ನಟಿಸಿದ್ದರು. ಆಗ ಚಾವ್ಲಾ 7 ತಿಂಗಳ ಗರ್ಭಿಣಿ! ಇದೇ ವೇಳೆ ಅಮೆರಿಕದಲ್ಲಿ ನಡೆದ ಸ್ಟೇಜ್ ಶೋನಲ್ಲಿ ಚಾವ್ಲಾ ಮೆತ್ತಗೆ ಸ್ಟೆಪ್ ಹಾಕಿದ್ದರು.
ನಂದಿತಾ ದಾಸ್: 6 ತಿಂಗಳು, ಐ ಆಯಮ್
2011ರಲ್ಲಿ ತೆರೆಕಂಡ ‘ಐ ಆಯಮ್’ನಲ್ಲಿ ನಂದಿತಾ ದಾಸ್ಳನ್ನು ನೀವೂ ಕಂಡಿರಬಹುದು. ವೀರ್ಯದಾನಿಯೊಬ್ಬನಿಂದ ಪ್ರೆಗ್ನೆಂಟ್ ಆಗುವ ಆ ಸಿಂಗಲ್ ಮದರ್ ಕತೆ ಈಗಲೂ ಕಣ್ಣಿಗೆ ಕಟ್ಟುತ್ತದೆ. ನಂದಿತಾ ದಾಸ್ ಆಗ ನಿಜ ಜೀವನದಲ್ಲೂ ಆರು ತಿಂಗಳ ಗರ್ಭಿಣಿ! ಮಗ ‘ವಿಹಾನ್’ ಹುಟ್ಟುವ ತನಕ ನಂದಿತಾ ಕ್ಯಾಮೆರಾ ಮುಂದೆ ಬಣ್ಣ ಹಚ್ಚಿದ್ದು ವಿಶೇಷ. ಕೆಲವು ತಿಂಗಳುಗಳ ಹಿಂದೆ ‘ಐ ಆಯಮ್’ ಸಿನಿಮಾದ ಚಿತ್ರೀಕರಣ ನಡೆದ ಸ್ಥಳಗಳಿಗೆ ನಂದಿತಾ ತಮ್ಮ ಮಗನನ್ನು ಕರೆದುಕೊಂಡು ಹೋಗಿ ಆ ಸುಮರ ನೆನಪುಗಳನ್ನು ಮೆಲುಕು ಹಾಕಿದ್ದರು.
ಶ್ರೀದೇವಿ: 6 ತಿಂಗಳು, ಜುಡಾಯಿ
ಅದು 1997 ರ ಕತೆ. ಅನಿಲ್ ಕಪೂರ್ ಜೊತೆಗಿನ ‘ಜುಡಾಯಿ’ ಚಿತ್ರವನ್ನು ನಿರ್ಮಿಸಲು ಶ್ರೀದೇವಿಯ ಮಾವ ಸುರಿಂದರ್ ಕಪೂರ್ ಯೋಜನೆ ರೂಪಿಸಿದ್ದರು. ಆ ಚಿತ್ರದಲ್ಲಿ ಅನಿಲ್ ಕಪೂರ್ ಜೊತೆಗೆ ಶ್ರೀದೇವಿ ನಟಿಸಬೇಕೆಂಬುದು ಅವರ ಆಸೆ. ಅದರ ಹಿಂದಿನ ವರ್ಷವೇ ಬೋನಿ ಕಪೂರ್ ಜೊತೆ ಶ್ರೀದೇವಿಯ ಮದ್ವೆಯೂ ಆಗಿತ್ತು. 6 ತಿಂಗಳ ಗರ್ಭಿಣಿಯಾದರೂ ‘ಜುಡಾಯಿ’ಯಲ್ಲಿ ಶ್ರೀದೇವಿ ನಟಿಸಿದ್ದು ಕೇವಲ ಮಾವನ ಆಸೆಗಾಗಿ. ಶ್ರೀದೇವಿ ಪುತ್ರಿ ಝಾನ್ವಿ ಯಾವಾಗ ಬಾಲಿವುಡ್ಗೆ ಬರ್ತಾಳೆ ಅಂತ ನಾವೀಗ ಕನವರಿಸುತ್ತಿದ್ದೇವೆ. ಅದೇ ಝಾನ್ವಿ ಅಮ್ಮನ ಗ’ರ್ದಲ್ಲಿರುವಾಗಲೇ ನಟಿಸಿದ್ದಳೆಂಬುದು ಅನೇಕರಿಗೆ ಗೊತ್ತಿಲ್ಲ.
ಜಯಾ ಬಚ್ಚನ್: 3ತಿಂಗಳು, ಶೋಲೆ
‘ಶೋಲೆ’ಯನ್ನು ನೀವೆಷ್ಟು ಸಲ ನೋಡಿರಬಹುದು? ಮೂರು, ಆರು, ಹತ್ತು…!! ಇಷ್ಟು ಸಲ ನೋಡಿರುವ ನೀವು ಆ ಚಿತ್ರದಲ್ಲಿ ಜಯಾ ಬಚ್ಚನ್ ಪ್ರೆಗ್ನೆಂಟ್ ಆಗಿದ್ದಳೆಂಬುದನ್ನು ಗುರುತಿಸುತ್ತೀರಾ? ಸ್ವಲ್ಪ ಕಷ್ಟವೇ ಆಗುತ್ತೆ ಬಿಡಿ. ಆಗ ಪತಿ ಅಮಿತಾಜೊತೆ ನಟಿಸುವಾಗ ಜಯಾಗೆ ತಾನು ಪ್ರೆಗ್ನೆಂಟ್ ಎಂಬುದೇ ತಿಳಿದಿರಲಿಲ್ಲ. ರಾಮನಗರದ ಶೂಟಿಂಗ್ನಲ್ಲಿ ಪಾಲ್ಗೊಳ್ಳುವಾಗ ಜಯಾ 3 ತಿಂಗಳ ಗರ್ಭಿಣಿ! ಹಾಗೆ ಹುಟ್ಟಿದ ಮೊದಲ ಮಗುವೇ ಶ್ವೇತಾ ಬಚ್ಚನ್. ಸೆಟ್ನಲ್ಲಿರುವಾಗ ತಲೆ ಚಕ್ಕರ್ ಬರುವಹಾಗೆ ಆಗುತ್ತಿದ್ದರೂ ಜಯಾ, ಇದೆಲ್ಲ ಬಿಸಿಲಿನ ತಾಪಕ್ಕಿರಬಹುದು ಎಂದು ತಳ್ಳಿಹಾಕಿದ್ದರಂತೆ.

Comments are closed.