ಲಖನೌ: ತಾಯಿ ಮತ್ತು ಮಗಳ ಮೇಲೆ ನಡೆದ ಪೈಶಾಚಿಕ ಕೃತ್ಯದ ಕುರಿತು ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಬರೇಲಿಯಲ್ಲಿ ಈ ಘಟನೆ ನಡೆದಿದ್ದು, ದಾರಿಯಲ್ಲಿ ಸಾಗತ್ತಿದ್ದ ಶಿಕ್ಷಕಿಯನ್ನು ಕಾರಿನಲ್ಲಿ ಬಂದ ಮೂವರು ದುಷ್ಕರ್ಮಿಗಳು ಬಲವಂತವಾಗಿ ಕಾರಿನಲ್ಲಿ ಅಪಹರಿಸಿದ್ದಾರೆ. ಬಳಿಕ ಚಲಿಸುತ್ತಿದ್ದ ಕಾರಿನಲ್ಲಿಯೇ ಆಕೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಲಾಗಿದ್ದು, ಶಿಕ್ಷಕಿ ವಿರೋಧಿಸಿದ್ದರಿಂದ ಆಕೆಯ ಹಣೆ ಮೇಲೆ ಗನ್ ಇಟ್ಟು ಸಾಮೂಹಿಕವಾಗಿ ಆತ್ಯಾಚಾರ ಮಾಡಲಾಗಿದೆ. ಅಲ್ಲದೆ ಅತ್ಯಾಚಾರವನ್ನು ಮೊಬೈಲ್ ನಲ್ಲಿ ಸೆರೆಹಿಡಿಯಲಾಗಿದ್ದು, ವಿಷಯವನ್ನು ಬಹಿರಂಗಪಡಿಸಿದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾರೆ.
ಬಳಿಕ ಆಕೆಯನ್ನು ನಿರ್ಜನ ಪ್ರದೇಶದ ಮೈದಾನವೊಂದರ ಬಳಿ ಎಸೆದು ಹೋಗಿದ್ದಾರೆ. ಸ್ಥಳೀಯರ ನೆರವಿನಿಂದ ಶಿಕ್ಷಕಿ ಚೇತರಿಸಿಕೊಂಡು ಬಳಿಕ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಘಟನಾ ಸ್ಥಳದಲ್ಲಿ ಸಾಕ್ಷ್ಯಾಧಾರಗಳನ್ನು ಕಲೆಹಾಕುತ್ತಿದ್ದಾರೆ.
ಸ್ಥಳೀಯ ಎಸ್ ಪಿ ಅಮಾನತು
ಇನ್ನು ಬಲಂದ್ ಶಹರ್ ನಲ್ಲಿ ನಡೆದ ತಾಯಿ ಮತ್ತು ಮಗಳ ಮೇಲಿನ ಅತ್ಯಾಚಾರ ಪ್ರಕರಣದಿಂದಾಗಿ ದೇಶಾದ್ಯಂತ ತೀವ್ರ ಟೀಕೆಗೆ ಗುರಿಯಾಗಿರುವ ಉತ್ತರ ಪ್ರದೇಶ ಸರ್ಕಾರಕ್ಕೆ ಇದೀಗ ಶಿಕ್ಷಕಿ ಮೇಲಿನ ಅತ್ಯಾಚಾರ ಪ್ರಕರಣ ಗಾಯದ ಮೇಲಿನ ಬರೆಯಂತಾಗಿದ್ದು, ಆಗಬಹುದಾದ ಮುಜುಗರವನ್ನು ತಡೆಯಲು ಸ್ಥಳೀಯ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಸಿಂಗ್ ರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.
ಬಲಂದ್ ಶಹರ್ ಅತ್ಯಾಚಾರ ಆರೋಪಿಗಳನ್ನೇ ಹಿಡಿಯಲು ತಿಣುಕಾಡುತ್ತಿರುವ ಉತ್ತರ ಪ್ರದೇಶ ಪೊಲೀಸರಿಗೆ ಇದೀಗ ಬರೇಲಿ ಅತ್ಯಾಚಾರ ಪ್ರಕರಣ ಹೊಸ ತಲೆನೋವಾಗಿ ಪರಿಣಮಿಸಿದೆ.
Comments are closed.