ಪ್ರಮುಖ ವರದಿಗಳು

ಸಂಸತ್‍ನಲ್ಲಿ ಕೋಲಾಹಲ ಸೃಷ್ಟಿಸಿದ ದಲಿತಯುವಕರಿಗೆ ಥಳಿಸಿದ ಪ್ರಕರಣ

Pinterest LinkedIn Tumblr

wq

ನವದೆಹಲಿ: ಗುಜರಾತ್‍ನ ಸೌರಾಷ್ಟ್ರದಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯ ಪ್ರಕರಣ ಇಂದೂ ಕೂಡ ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಧ್ವನಿಸಿ ತೀವ್ರ ಕೋಲಾಹಲಕ್ಕೆ ಕಾರಣವಾಯಿತು.ರಾಜ್ಯಸಭೆಯನ್ನು ಪದೇ ಪದೇ ಮುಂದೂಡಬೇಕಾಯಿತು. ಸೌರಾಷ್ಟ್ರದ ಉನಾದಲ್ಲಿ ಗೋರಕ್ಷಕರೆಂದು ಹೇಳಿಕೊಂಡ ಹಲವರು ಇತ್ತೀಚೆಗೆ ನಾಲ್ವರು ದಲಿತ ಯುವಕರನ್ನು ಬಟ್ಟೆ ಬಿಚ್ಚಿ ಕೈಗಳನ್ನು ಕಂಬಿಗೆ ಕಟ್ಟಿ ಹಿಂದಿನಿಂದ. ಅಮಾನುಷವಾಗಿ ಕೋಲುಗಳಿಂದ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈಲ್‍ನಂತೆ ಹರಡುತ್ತಿದ್ದಂತೆಯೇ ದಲಿತ ಸಂಘಟನೆಗಳು ಕಳೆದ ಮೂರು ದಿನಗಳಿಂದ ಪ್ರತಿಭಟನೆ ನಡೆಸುತ್ತಿವೆ.ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯ, ಹಿಂಸೆ ಗಣನೀಯವಾಗಿ ಹೆಚ್ಚಿದೆ.

ದಲಿತ ಯುವಕರನ್ನು ಅಮಾನವೀಯವಾಗಿ ದೌರ್ಜನ್ಯಕ್ಕೀಡುಮಾಡಲಾಗುತ್ತಿದೆ ಎಂದು ಕಾಂಗ್ರೆಸ್, ಬಿಎಸ್‍ಪಿ, ಎಎಪಿ ಸೇರಿದಂತೆ ವಿಪಕ್ಷಗಳ ಸದಸ್ಯರು ಉಭಯ ಸದನಗಳಲ್ಲಿ ಪ್ರತಿಭಟನೆ ನಡೆಸಿದರು.ಇದೇ ವೇಳೆ ಆಮ್ ಆದ್ಮಿ ಪಕ್ಷವು ಈ ಬಗ್ಗೆ ನಿಲುವಳಿ ಸೂಚನೆಯನ್ನೂ ಮಂಡಿಸಿತ್ತು. ಕಾಂಗ್ರೆಸ್ ಕೂಡ ಲೋಕಸಭೆಯಲ್ಲಿ ಗುಜರಾತ್ ಹಿಂಸಾಚಾರದ ಬಗ್ಗೆ ನೋಟಿಸ್ ನೀಡಿತ್ತು.

ರಾಜ್ಯಸಭೆಯಲ್ಲಿ ಬಿಎಸ್‍ಪಿ, ಕಾಂಗ್ರೆಸ್, ಟಿಎಂಸಿ, ಜೆಡಿಯು ಸದಸ್ಯರು ಪ್ರತಿಭಟಿಸಿದರು. ಸೌರಾಷ್ಟ್ರದ ಉನಾದಲ್ಲಿ ಹಸು ಕೊಂದು ಚರ್ಮ ತೆಗೆದಿದ್ದಾರೆ ಎಂದು ದಲಿತ ಯುವಕರನ್ನು ಥಳಿಸಲಾಗಿದೆ. ನಾವು ಹಸು ಸಾಯಿಸಿಲ್ಲ, ಸತ್ತ ಹಸು ಚರ್ಮ ತೆಗೆದಿದ್ದೇವೆ ಎಂದು ಅಂಗಲಾಚಿದರೂ ಕೇಳದೆ ಥಳಿಸಲಾಗಿದೆ ಎಂದು ವಿಪಕ್ಷ ಸದಸ್ಯರು ಸರ್ಕಾರದ ವಿರುದ್ಧ ಹರಿಹಾಯ್ದರು. ಈ ಮಧ್ಯೆ ರಾಜ್ಯಸಭೆಯನ್ನು ಮೂರ್ನಾಲ್ಕು ಬಾರಿ ಮುಂದೂಡಲಾಯಿತು. ಈ ನಡುವೆ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಸಭಾಧ್ಯಕ್ಷರ ಬಳಿ ಮಾತನಾಡಲು ಅವಕಾಶ ಕೇಳುತ್ತಿದ್ದಂತೆಯೇ ಬಿಎಸ್‍ಪಿ ನಾಯಕಿ ಮಾಯಾವತಿ ಅವರು ತಾವು ಮೊದಲು ಮಾತನಾಡಬೇಕು ಎಂದು ವಾದಕ್ಕಿಳಿದರು. ಈ ಸಂದರ್ಭ ಎರಡೂ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ನಂತರ ಉಪಸಭಾಧ್ಯಕ್ಷ ಪಿ.ಜೆ.ಕುರಿಯನ್ ಅವರು ಮಾಯಾವತಿ ಅವರು ಮಾತನಾಡಲಿ ಎಂದು ಮನವಿ ಮಾಡಿದರು. ಆದರೆ, ಗದ್ದಲ, ವಾಗ್ವಾದ ನಿಯಂತ್ರಣಕ್ಕೆ ಬಾರದಿದ್ದಾಗ ಮತ್ತೆ 10 ನಿಮಿಷ ಕಲಾಪ ಮುಂದೂಡಿದರು. ಕೊನೆಗೆ 12.30ರ ವರೆಗೆ ರಾಜ್ಯಸಭೆ ಮುಂದೂಡಲಾಯಿತು.ಮತ್ತೆ ರಾಜ್ಯಸಭೆ ಸಮಾವೇಶಗೊಂಡ ನಂತರವೂ ವಿಪಕ್ಷಗಳ ಗಲಾಟೆ ಆರಂಭವಾಯಿತು. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದಾಗ ಸಭಾಧ್ಯಕ್ಷರ ಪೀಠದಲ್ಲಿದ್ದ ಹಮೀದ್ ಅನ್ಸಾರಿ ಕಲಾಪವನ್ನು ಮತ್ತೆ ಮಧ್ಯಾಹ್ನ 2 ಗಂಟೆವರೆಗೆ ಮುಂದೂಡಿದರು.

Comments are closed.