ಪ್ರಮುಖ ವರದಿಗಳು

ಶಾಸಕಾಂಗ ಪಕ್ಷದ ನಾಯಕತ್ವ: ನಿತೀಶ್‌ ಆಯ್ಕೆಗೆ ತಡೆ; ಹೈಕೋರ್ಟ್‌ ತಡೆಯಾಜ್ಞೆ

Pinterest LinkedIn Tumblr

nitish

ಪಟ್ನಾ/ ನವದೆಹಲಿ: ಬಿಹಾರ ಜೆಡಿಯು ಶಾಸಕಾಂಗ ಪಕ್ಷದ ನಾಯ­ಕರಾಗಿ ನಿತೀಶ್‌ ಕುಮಾರ್‌ ಅವರ ಆಯ್ಕೆಯನ್ನು ಮಾನ್ಯ ಮಾಡಿದ ಕ್ರಮಕ್ಕೆ ಪಟ್ನಾ ಹೈಕೋರ್ಟ್‌ ತಡೆಯಾಜ್ಞೆ ವಿಧಿಸಿರುವುದರ ಮಧ್ಯೆಯೇ, ನಿತೀಶ್‌ ಅವರು ರಾಜಕೀಯ ಬಿಕ್ಕಟ್ಟನ್ನು ಬುಧ­ವಾರ ರಾಷ್ಟ್ರಪತಿ ಭವನಕ್ಕೆ ಕೊಂಡೊಯ್ದರು.

ನಿತೀಶ್‌ಗೆ ಅಡಚಣೆ: ನಿತೀಶ್‌ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಮಾನ್ಯ ಮಾಡಿದ ವಿಧಾನಸಭೆ ಪ್ರಭಾರ ಕಾರ್ಯದರ್ಶಿಯವರ ಕ್ರಮಕ್ಕೆ ಪಟ್ನಾ ಹೈಕೋರ್ಟ್‌ ತಡೆಯಾಜ್ಞೆ ವಿಧಿಸಿರು­ವುದರಿಂದ, ಆದಷ್ಟು ಬೇಗನೇ ಮುಖ್ಯ­ಮಂತ್ರಿ ಗಾದಿಗೆ ಏರುವ ಅವರ ಆಸೆಗೆ ಅಡಚಣೆ ಎದುರಾಗಿದೆ.

ಈ ಸಂಬಂಧ ಜಿತನ್‌ ರಾಮ್‌ ಮಾಂಝಿ ಅವರ ಬೆಂಬಲಿಗರಾದ ಪಕ್ಷದ ಶಾಸಕ ರಾಜೇಶ್ವರ್ ಸಿಂಗ್  ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಲ್‌.ಎನ್‌.ರೆಡ್ಡಿ ಮತ್ತು ನ್ಯಾಯಮೂರ್ತಿ ವಿಕಾಸ್‌ ಜೈನ್‌ ಅವರ ವಿಭಾಗೀಯ ನ್ಯಾಯಪೀಠವು ಈ ತಡೆಯಾಜ್ಞೆ ವಿಧಿಸಿದೆ.

130 ಶಾಸಕರ ಪರೇಡ್‌: ರಾಷ್ಟ್ರಪತಿಯವರ ಮುಂದೆ ತಮ್ಮ ಬೆಂಬಲಕ್ಕಿರುವ 130 ಶಾಸಕರ ಪರೇಡ್‌ ನಡೆಸಿದ ನಿತೀಶ್ ಅವರು, ಮುಖ್ಯಮಂತ್ರಿ ಜಿತನ್‌ ರಾಮ್‌ ಮಾಂಝಿ ಅವರಿಗೆ ಸದನದಲ್ಲಿ ಬಹುಮತ ಸಾಬೀತು­ಪಡಿಸಲು ಸೂಚಿಸ­ಬೇಕು ಎಂದು ಕೋರಿದರು.

ರಾಜ್ಯಪಾಲ ಕೇಸರಿನಾಥ್‌ ತ್ರಿಪಾಠಿ ಅವರು ಕ್ರಮ ತೆಗೆದುಕೊಳ್ಳಲು ವಿಳಂಬ ಮಾಡುತ್ತಿರುವುದರಿಂದ ದ್ವೇಷಮಯ ರಾಜಕೀಯ ವಾತಾವರಣ ನಿರ್ಮಾಣ­ವಾಗುತ್ತಿದ್ದು ಶಾಸಕರ ಖರೀದಿಗೆ ಇದು ಆಸ್ಪದ ನೀಡುವಂತಿದೆ ಎಂದು ಅವರು ದೂರಿದರು.

ನಿತೀಶ್‌ ಅವರೊಂದಿಗೆ ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಶರದ್‌ ಯಾದವ್‌, ಆರ್‌ಜೆಡಿ ನಾಯಕ ಲಾಲು ಪ್ರಸಾದ್‌, ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್‌ ಯಾದವ್‌ ಮತ್ತು ಕಾಂಗ್ರೆಸ್‌ ನಾಯಕ ಸಿ.ಪಿ.ಜೋಷಿ ಅವರೂ ರಾಷ್ಟ್ರಪತಿ ಭವನಕ್ಕೆ ತೆರ­ಳಿದ್ದರು. ಈವ­ರೆಗೆ ಸರ್ಕಾರ ರಚಿಸಲು ತಮ್ಮನ್ನು ಆಹ್ವಾನಿಸಬೇಕು ಎಂದು ಹಕ್ಕು ಮಂಡಿಸುತ್ತಿದ್ದ ಅವರು ಬುಧವಾರ ತಮ್ಮ ಬೇಡಿಕೆಯನ್ನು ಬದಲಾಯಿಸಿ, ರಾಜ್ಯ­ಪಾಲರು ಅಗತ್ಯವೆನಿಸಿದರೆ ಮಾಂಝಿ ಅವರಿಗೆ ಸೀಮಿತ ಕಾಲಮಿತಿ­ಯೊಳಗೆ ಬಹುಮತ ಸಾಬೀತು­ಪಡಿಸಲು ಸೂಚಿಸಬೇಕು ಎಂದು ಒತ್ತಾಯಿಸಿದರು.

ಲಾಲು ಪ್ರಸಾದ್‌ ಅವರೂ ಇದೇ ಮಾತುಗಳನ್ನು ಆಡಿದರು. ‘ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಲು ಪಿತೂರಿ ನಡೆಸುತ್ತಿದೆ. ಬಿಹಾರವು ಸೂಕ್ಷ್ಮ ರಾಜ್ಯವಾಗಿದೆ. ಒಂದೊಮ್ಮೆ ರಾಷ್ಟ್ರಪತಿ ಆಳ್ವಿಕೆ ಜಾರಿ ಮಾಡಿದರೆ ಅಲ್ಲಿ ಏನಾಗುತ್ತದೆ ಎನ್ನುವುದನ್ನು ಹೇಳಲು ಸಾಧ್ಯವಿಲ್ಲ’ ಎಂದು ಎಚ್ಚರಿಕೆ ನೀಡಿದರು.

ರಾಷ್ಟ್ರಪತಿ ಭವನದಿಂದ ಹೊರಬಂದ ಮೇಲೆ ಸುದ್ದಿಗಾರರ ಜತೆ ಮಾತನಾಡಿದ ನಿತೀಶ್‌ ಅವರು, ‘ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಎಲ್ಲವನ್ನೂ ಕೇಳಿಸಿ­ಕೊಂಡ ರಾಷ್ಟ್ರಪತಿಯವರು, ಒಟ್ಟಾರೆ ಪರಿಸ್ಥಿತಿಯನ್ನು ಅವಲೋಕಿಸುವುದಾಗಿ ಹೇಳಿದ್ದಾರೆ’ ಎಂದು ತಿಳಿಸಿದರು.

‘ನಮಗೆ ಸ್ಪಷ್ಟ ಬಹುಮತವಿದೆ. ಪಟ್ನಾ ರಾಜಭವನದ ಆವರಣದಲ್ಲಿ 130 ಶಾಸಕರ ಪರೇಡ್‌ ನಡೆಸಿದ್ದವು. ಇವತ್ತು ಇಷ್ಟೇ ಸಂಖ್ಯೆಯ ಶಾಸಕರು ರಾಷ್ಟ್ರಪತಿ ಭವನದಲ್ಲಿ ನನ್ನ ಜತೆ ಇದ್ದಾರೆ. ಇದ­ರಿಂದ ಯಾರಿಗೆ ಬಹುಮತ ಇದೆ ಎಂಬುದು ಯಾರಿ­ಗಾದರೂ ಗೊತ್ತಾ­ಗುತ್ತದೆ. ಇಷ್ಟಾಗಿಯೂ ಸರ್ಕಾರ ರಚನೆಗೆ ಅವಕಾಶ ನೀಡದೇ ಇರುವುದು ಅನ್ಯಾಯ ಹಾಗೂ ಪ್ರಜಾತಾಂತ್ರಿಕ ವ್ಯವಸ್ಥೆಯೊಂದಿಗೆ ಆಡುತ್ತಿರುವ ಚೆಲ್ಲಾಟ­ವಾಗಿದೆ’ ಎಂದು ಮಾಜಿ ಮುಖ್ಯಮಂತ್ರಿ ನಿತೀಶ್‌ ಹೇಳಿದರು.

ಜಿತನ್‌ ಮಾಂಝಿ ಅವರನ್ನು ಪಕ್ಷದಿಂದ ಉಚ್ಚಾಟಿಸಿದ ನಂತರ ನಿತೀಶ್‌ ಅವರು ಫೆ.೭ರಂದು ಶಾಸಕಾಂಗ ಪಕ್ಷದ ಹೊಸ ನಾಯಕರಾಗಿ ಆಯ್ಕೆಯಾ­ಗಿದ್ದರು. ಇದಾದ ಮೇಲೆ ಫೆ.೯ರಂದು ನಿತೀಶ್‌ ಅವರು ರಾಜ್ಯಪಾಲ ಕೇಸರಿನಾಥ್‌ ತ್ರಿಪಾಠಿ ಅವರನ್ನು ಭೇಟಿಯಾಗಿ ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದರು.

Write A Comment