ಬೆಂಗಳೂರು: ‘ದೇಶದ ಬಹುಸಂಖ್ಯಾತ ಶಿಕ್ಷಣ ವಂಚಿತ, ನಿರುದ್ಯೋಗಿ ಯುವ ಸಮುದಾಯದ ಮೇಲೆ ನಕ್ಸಲರು ಕಾತುರದ ಕಣ್ಣಿಟ್ಟಿದ್ದು ಅವರ ಕೈಗಳಿಗೆ ಬಂದೂಕು ನೀಡಲು ತವಕಿಸುತ್ತಿದ್ದಾರೆ. ಆದ್ದರಿಂದ ಉತ್ತಮ ಶಾಲೆಗಳಲ್ಲಿ ಶಿಕ್ಷಣ ಪಡೆದ ಪ್ರತಿಷ್ಠಿತ ಸಮುದಾಯವು ಇಂತಹ ಅವಕಾಶಗಳಿಗೆ ಎಡೆಮಾಡಿಕೊಡದಂತೆ ದೇಶದ ಭವಿಷ್ಯಕ್ಕೆ ಉತ್ತಮ ಭಾಷ್ಯ ಬರೆಯುವ ಜವಾಬ್ದಾರಿ ಹೊಂದಿದೆ’ ಎಂದು ತಿರುವನಂತಪುರಂ ಕ್ಷೇತ್ರದ ಕಾಂಗ್ರೆಸ್ ಸಂಸದ ಶಶಿ ತರೂರ್ ಅಭಿಪ್ರಾಯಪಟ್ಟರು.
ಬಿಷಪ್ ಕಾಟನ್ ಬಾಲಕರ ಶಾಲೆಯ ನಿರ್ಗಮಿಸುತ್ತಿರುವ ಹನ್ನೆರಡನೇ ತರಗತಿ ವಿದ್ಯಾರ್ಥಿಗಳಿಗೆ ಭಾನುವಾರ ಏರ್ಪಡಿಸಿದ್ದ ‘ಗ್ರ್ಯಾಜುಯೇಷನ್’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಕೇವಲ 1 ಸಾವಿರಕ್ಕೆ ಅಥವಾ ಒಂದು ಹೊತ್ತಿನ ಊಟಕ್ಕೆ ಬಂದೂಕು ಎತ್ತಿಕೊಂಡು ಜನರನ್ನು ಸಾಯಿಸುವ ಹತಾಶ ಮನಸ್ಸುಗಳು ಕಂಡು ಬರುತ್ತಿವೆ. ಇದು ಜನಸಂಖ್ಯೆ ವೈರುಧ್ಯದ ಪರಿಣಾಮವೂ ಹೌದು’ ಎಂದ ತರೂರ್, ‘ಉತ್ತಮ ಶಾಲೆಗಳಲ್ಲಿ ಶಿಕ್ಷಣ ಪಡೆದವರು ದೇಶದ ಆರ್ಥಿಕತೆಗೆ, ಶಿಕ್ಷಣ ವಂಚಿತರ ಸಬಲೀಕರಣಕ್ಕೆ ನೆರವಾಗುವ ಬಹುದೊಡ್ಡ ಜವಾಬ್ದಾರಿ ಹೊಂದಿದ್ದಾರೆ’ ಎಂದು ಎಚ್ಚರಿಸಿದರು.
ಅಗ್ನಿ ಪರೀಕ್ಷೆ: ‘ಶಾಲೆಯಲ್ಲಿ ಕಲಿತ ಪಠ್ಯಕ್ಕಿಂತಲೂ ಹೆಚ್ಚಾಗಿ ನಾವು ನಿಜ ಜೀವನದಲ್ಲಿ ಎದುರಿಸಬೇಕಾದ ಅಗ್ನಿ ಪರೀಕ್ಷೆಗಳು ದೊಡ್ಡವು. ಹೀಗಾಗಿ ಶಿಕ್ಷಕರು ಮಕ್ಕಳನ್ನು ಕೇವಲ ಪರೀಕ್ಷೆಗೆ ಮಾತ್ರವೇ ಸಿದ್ಧಪಡಿಸುವ ಮಾನಸಿಕ ಸ್ಥಿತಿಯಿಂದ ಹೊರಬರಬೇಕು’ ಎಂದು ತರೂರ್ ಪ್ರತಿಪಾದಿಸಿದರು.
‘ಮಾನವೀಯ ಮೌಲ್ಯಗಳು ಮತ್ತು ಗಣಿತ ಪ್ರಪಂಚಕ್ಕೆ ಭಾರತೀಯರು ನೀಡಿರುವ ಕೊಡುಗೆ ಸಣ್ಣದೇನಲ್ಲ. ಆದರೆ ಇಂದು ನಮ್ಮಲ್ಲಿ ಒಂದು ಒಳ್ಳೆ ಮನೆ ಕಟ್ಟುವಂತಹ ಕೌಶಲ್ಯವೂ ಉಳಿದಿಲ್ಲ. ಪ್ರಾಚೀನ ಬೌದ್ಧಿಕ ಪಾರುಪತ್ಯದ ಉತ್ತಮ ಅಂಶಗಳು ಕ್ಷೀಣಿಸಿವೆ. ಶುಚಿತ್ವವೇ ಇಲ್ಲದ ಗಲೀಜು ಭಾರತ ನಮ್ಮನ್ನು ಅಣಕಿಸುತ್ತಿದೆ’ ಎಂದು ಅವರು ವಿಷಾದಿಸಿದರು.
‘ಮೊಬೈಲ್‌ನಂತಹ ಪುಟ್ಟ ಸಾಧನ ಇಂದು ಬಹಳಷ್ಟು ಕ್ರಾಂತಿ ಮಾಡಿದೆ. ಇಂತಹ ಸನ್ನಿವೇಶದಲ್ಲಿ ಕಲಿತವರು ತಮ್ಮ ಪ್ರತಿಭೆಗಳನ್ನು ಒರೆಗೆ ಹಚ್ಚುವ ಮೂಲಕ ಜನಸಮುದಾಯದ ಕಲ್ಯಾಣಕ್ಕೆ ದುಡಿಯುವ ಸಂಕಲ್ಪ ಮಾಡಬೇಕು’ ಎಂದು ಅವರು ಹೇಳಿದರು.
ದಕ್ಷಿಣ ಭಾರತದ ಚರ್ಚ್‌ಗಳ ಅಧ್ಯಕ್ಷ ಡಾ.ಜಿ.ದೈವಾಶೀರ್ವಾದಂ, ಪ್ರಾಂಶುಪಾಲರಾದ ಜಾನ್ ಝಕಾರಿಯಾ, ಹೈಕೋರ್ಟ್‌ನ ಹಿರಿಯ ವಕೀಲ ಆದಿತ್ಯ ಸೋಂಧಿ ಇತರ ಗಣ್ಯರು ಹಾಜರಿದ್ದರು.