ಅಂತರಾಷ್ಟ್ರೀಯ

ಪೆಟ್ರೋಲ್‌ಗಾಗಿ ಪಾಕ್ ಪರದಾಟ

Pinterest LinkedIn Tumblr

petrol30

ಇಸ್ಲಾಮಾಬಾದ್: ಕಳೆದ ವಾರದಿಂದ ಪಾಕಿಸ್ತಾನದಲ್ಲಿ ತೈಲ ಸಮಸ್ಯೆ ಬಿಗಡಾಯಿಸಿದೆ. ಪ್ರಮುಖ ನಗರಗಳ ಪೆಟ್ರೋಲ್ ಬಂಕ್ ಮುಂದೆ ವಾಹನಗಳು ಸಾಲುಗಟ್ಟಿವೆ. ಕೆಲವು ಬಂಕ್‌ಗಳ ಮುಂದೆ ಹೊಡೆದಾಟವೂ ನಡೆದಿದೆ. ವಿದ್ಯುತ್ ಉತ್ಪಾದಿಸಲೂ ತೈಲ ಲಭಿಸುತ್ತಿಲ್ಲ.

ಕೆಲವೊಬ್ಬರು ಪರಿಸ್ಥಿತಿ ಬಳಸಿಕೊಂಡು ನೂರಾರು ಪಟ್ಟು ಹೆಚ್ಚು ಬೆಲೆಗೆ ತೈಲ ಮಾರುತ್ತಿದ್ದಾರೆ. ಹಲವು ಬಂಕ್‌ಗಳು ಬಾಗಿಲೆಳೆದುಕೊಂಡಿವೆ. ಅಕ್ರಮ ತೈಲ ದಾಸ್ತಾನು ಪತ್ತೆ ಹಚ್ಚಲು ಪೊಲೀಸರು ಗಸ್ತು ತಿರುಗುತ್ತಿದ್ದಾರೆ.

ಸೌದಿ ಅರೇಬಿಯಾ ಪ್ರವಾಸದಲ್ಲಿದ್ದ ಪ್ರಧಾನಿ ನವಾಜ್ ಷರೀಫ್ ಅವರು ಶನಿವಾರ ತವರಿಗೆ ಆಗಮಿಸಿದ್ದು, ತೈಲ ಬಿಕ್ಕಟ್ಟು ಕಂಡು ಹೌಹಾರಿದ್ದಾರೆ. ಸಮಸ್ಯೆಗೆ ಕಾರಣ ಅರಿಯಲು ತನಿಖೆಗೆ ಆದೇಶಿಸಿದ್ದಾರೆ. ಹಾಗೆಯೇ, ಪೆಟ್ರೋಲಿಯಂ ಕಾರ‌್ಯದರ್ಶಿ ಅಬಿದ್ ಸಯೀದ್, ಉಪ ಕಾರ‌್ಯದರ್ಶಿ ನಯೀಂ ಮಲಿಕ್, ತೈಲ ಮಹಾ ನಿರ್ದೇಶಕ ಸಿ ಎಂ ಅಜಂ, ‘ಪಾಕಿಸ್ತಾನ್ ಸ್ಟೇಟ್ ಆಯಿಲ್’ ಮುಖ್ಯಸ್ಥ ಅಮ್ಜದ್ ಜಂಜುವಾ ಅವರನ್ನು ಅಮಾನತುಗೊಳಿಸಿದ್ದಾರೆ. ಷರೀಫ್ ಅವರಿಗೆ ಆಪ್ತರಾಗಿರುವ ಕಾರಣ ತೈಲ ಸಚಿವ ಶಹೀದ್ ಖಾನ್ ಅಬ್ಬಾಸಿ ಕುರ್ಚಿ ಉಳಿಸಿಕೊಂಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಪ್ರಾಂತೀಯ ಸರಕಾರಗಳು ಪೆಟ್ರೋಲ್ ಅಕ್ರಮ ಮಾರಾಟದ ಬಗ್ಗೆ ನಿಗಾ , ತಪಾಸಣೆ ನಡೆಸಬೇಕು ಎಂದು ಪ್ರಧಾನಿ ಸೂಚಿಸಿದ್ದಾರೆ. ತೀವ್ರ ಚಳಿಯ ಈ ಸಂದರ್ಭದಲ್ಲಿ ಪೆಟ್ರೋಲ್ ಅಭಾವ ಪಂಜಾಬ್ ಪ್ರಾಂತ್ಯ ಮತ್ತು ಖೈಬರ್ ಪಕ್ತುಂಕ್ವಾದ ಕೆಲ ಭಾಗಗಳ ಜನಜೀವನಕ್ಕೆ ತೊಡಕಾಗಿ ಪರಿಣಮಿಸಿದೆ. ಇಲ್ಲಿನ ಮಾರುಕಟ್ಟೆಗಳಲ್ಲಿ ಪೆಟ್ರೋಲ್ ದಾಸ್ತಾನಿದ್ದು, ದುಬಾರಿ ಬೆಲೆಗೆ ಮಾರಾಟವಾಗುತ್ತಿದೆ. ಕೆಲವು ಮುಖ್ಯ ಸ್ಟೇಷನ್‌ಗಳು 6 ದಿನಗಳಿಂದ ಮುಚ್ಚಿವೆ. ಲಾಹೋರ್‌ನಲ್ಲಿ ಮಾತ್ರ ನ್ಯಾಚುರಲ್ ಗ್ಯಾಸ್ ಸ್ಟೇಷನ್‌ಗಳಲ್ಲಿ ಸಿಲಿಂಡರ್ ಮರು ಪೂರಣ ನಡೆಯುತ್ತಿದೆ.

ಮಧ್ಯಪ್ರಾಚ್ಯದಿಂದ 50 ಸಾವಿರ ಟನ್ ಕಚ್ಚಾ ಪೆಟ್ರೋಲಿಯಂ ಪೂರೈಕೆಯಾಗಿದ್ದು, ಕರಾಚಿ ಬಂದರು ತಲುಪಿದೆ. ಇದು ಬಿಕ್ಕಟ್ಟು ಪರಿಹಾರಕ್ಕೆ ನೆರವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Write A Comment