ಕರ್ನಾಟಕ

ಅಖಂಡ ಕರ್ನಾಟಕದ ದೃಷ್ಟಿಕೋನದಲ್ಲೇ ಉಕ ಅಭಿವೃದ್ಧಿಗೆ ಸರಕಾರದ ಸಂಕಲ್ಪ: ನಂಜುಂಡಪ್ಪ ವರದಿಯೇ ಅಳತೆಗೋಲು; ಸಿದ್ದರಾಮಯ್ಯ

Pinterest LinkedIn Tumblr

siddu

ಅಖಂಡ ಕರ್ನಾಟಕದ ದೃಷ್ಟಿಕೋನದಲ್ಲೇ ಉತ್ತರ ಕರ್ನಾಟಕವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲಾಗುವುದು. ಇದಕ್ಕೆ ನಂಜುಂಡಪ್ಪ ವರದಿಯೇ ಅಳತೆಗೋಲು. ಹೈದರಾಬಾದ್ ಹಾಗೂ ಮುಂಬಯಿ ಕರ್ನಾಟಕ ಪ್ರಾಂತ್ಯದ ಹಿಂದುಳಿದ ಪ್ರದೇಶಗಳಿಗೆ ಕಾಯಕಲ್ಪ ನೀಡಲು ಹೆಚ್ಚಿನ ಒತ್ತು ಕೊಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಉತ್ತರ ಕರ್ನಾಟಕದ ಬೇಡಿಕೆಗಳ ಬಗ್ಗೆ ಅಧಿವೇಶನದಲ್ಲಿ ಮೂರು ದಿನಗಳಿಂದ ನಡೆದ ಚರ್ಚೆಗೆ ಸಿಎಂ ವಿಧಾನಸಭೆಯಲ್ಲಿ ಶುಕ್ರವಾರ ಸುದೀರ್ಘ ಉತ್ತರ ನೀಡಿದರು.

ಆದರೆ, ವಿಶೇಷ ಪ್ಯಾಕೇಜ್ ಘೋಷಿಸಲಿಲ್ಲ ಎಂದು ಬಿಜೆಪಿ ಸಭಾತ್ಯಾಗ ಮಾಡಿದರೆ, ಮೆಕ್ಕೆ ಜೋಳ, ತೊಗರಿ ಇನ್ನಿತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಲು ಆಗ್ರಹಿಸಿ ಜೆಡಿಎಸ್ ಶಾಸಕರು ಧರಣಿ ನಡೆಸಿದರು.

ಬಜೆಟ್ ಭಾಷಣದಂತೆ ಟಿಪ್ಪಣಿ ತಂದಿದ್ದ ಸಿದ್ದರಾಮಯ್ಯ, ”ಅಭಿವೃದ್ಧಿ ವಿಚಾರದಲ್ಲಿ ಉತ್ತರ ಮತ್ತು ದಕ್ಷಿಣ ಕರ್ನಾಟಕದ ನಡುವಿನ ಅಂತರವೆಷ್ಟು ಎಂಬ ಬಗ್ಗೆ ಅಂಕಿ, ಅಂಶಗಳ ಮೂಲಕ ನಿದರ್ಶನ ಒದಗಿಸಿದರು. ಹಾಲಿ ಯೋಜನೆಗಳನ್ನು ಕಾಲಬದ್ಧವಾಗಿ ಪೂರ್ಣಗೊಳಿಸಲಾಗುವುದು,”ಎನ್ನುವ ಮೂಲಕ ಇದಕ್ಕೆ ಹೊಸ ಯೋಜನೆಗಳ ಅಗತ್ಯವಿಲ್ಲ ಎಂಬ ಸಂದೇಶ ರವಾನಿಸಿದರು.

ಚರ್ಚೆಯ ವೇಳೆ ಶಾಸಕರು ಪ್ರಸ್ತಾಪಿಸದೆ ಇರುವ ಹಲವು ಸಂಗತಿಗಳನ್ನೂ ಸದನದ ಗಮನಕ್ಕೆ ತಂದರು. ಹೊಸ ಯೋಜನೆ ಪ್ರಕಟಿಸುವುದಕ್ಕಿಂತ ತಮ್ಮ ಸರಕಾರ ಕೈಗೊಂಡ ಕ್ರಮಗಳ ಮಾಹಿತಿ ನೀಡಿದರು. ಜತೆಗೆ ಇದೆಲ್ಲವೂ ಒಟ್ಟಾರೆ ಉತ್ತರ ಕರ್ನಾಟಕದ ಶ್ರೇಯೋಭಿವದ್ಧಿಗೆ ಎಂಬ ರೀತಿಯಲ್ಲಿ ಸಮರ್ಥನೆ ಕೊಟ್ಟರು. ಕೈಗಾರಿಕಾ ಕಾರಿಡಾರ್‌ಗಳು, ವಿಶೇಷ ಹೂಡಿಕೆ ವಲಯಗಳು, ನೀರಾವರಿ, ಶಿಕ್ಷಣ, ಆರೋಗ್ಯ ಇನ್ನಿತರ ಕ್ಷೇತ್ರಕ್ಕೆ ಒತ್ತು ಕೊಡುತ್ತಿರುವುದನ್ನು ಮನದಟ್ಟು ಮಾಡುವ ಯತ್ನ ಮಾಡಿದರು.

ಬಿಜೆಪಿಯಾಗಲಿ, ಜೆಡಿಎಸ್‌ನಿಂದಾಗಲಿ ಮುಖ್ಯಮಂತ್ರಿ ಉತ್ತರಕ್ಕೆ ತಿರುಗೇಟು ನೀಡುವ ಅಥವಾ ಪಟ್ಟು ಹಿಡಿದು ಸ್ಪಷ್ಟೀಕರಣ ಕೇಳುವ ಅಸ್ತ್ರವನ್ನು ಝಳಪಿಸಿದಂತೆ ಕಾಣಿಸಲಿಲ್ಲ. ಅದಕ್ಕೆ ಸಿದ್ಧತೆ ಕೊರತೆ ಎನಿಸುವಂತಿತ್ತು ಪ್ರತಿಪಕ್ಷಗಳ ನಡವಳಿಕೆ.

ನಂಜುಂಡಪ್ಪ ವರದಿ
ರಾಜ್ಯದ ಸಮಗ್ರ ಅಭಿವದ್ಧಿಗೆ ನಂಜುಂಡಪ್ಪ ವರದಿಯೇ ವೈಜ್ಞಾನಿಕವಾಗಿದೆ. ಅವರು ಅಖಂಡ ಕರ್ನಾಟಕದ 114 ತಾಲೂಕುಗಳನ್ನು ಹಿಂದುಳಿದ ಪಟ್ಟಿಗೆ ಸೇರಿಸಿದ್ದಾರೆ. ಈ ಪೈಕಿ ಅತ್ಯಂತ ಹಿಂದುಳಿದ (39), ಅತಿ ಹಿಂದುಳಿದ (40), ಹಿಂದುಳಿದ (35) ತಾಲೂಕುಗಳಿವೆ. 2007-08 ರಿಂದ ವರದಿ ಜಾರಿ ಮಾಡಲಾಗುತ್ತಿದ್ದು, ಈವರೆಗೆ 17,871 ಕೋಟಿ ರೂ. ಹಂಚಿಕೆ ಮಾಡಲಾಗಿದೆ. 14,194 ಕೋಟಿ ರೂ. ಬಿಡುಗಡೆಯಾಗಿದ್ದು, 13,566 ಕೋಟಿ ರೂ. ಖರ್ಚಾಗಿದೆ. ವರದಿಯಂತೆ 60:40 ಅನುಪಾತದಡಿ (ಉಕ ಮತ್ತು ದ.ಕರ್ನಾಟಕ) ನೀಡಲಾಗಿದೆ. ಹಾಲಿ ಆರ್ಥಿಕ ವರ್ಷದಲ್ಲಿ 2,267 ಕೋಟಿ ರೂ. ನೀಡಲಾಗಿದ್ದು, 718 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದಕ್ಕೆ ಮುನ್ನ ಈ ಸಂಬಂಧ ಧಾರವಾಡದ ಬಹುಶಿಸ್ತೀಯ ಅಭಿವದ್ಧಿ-ಸಂಶೋಧನಾ ಕೇಂದ್ರದಿಂದ (ಸಿಎಂಡಿಆರ್) ಮೌಲ್ಯಮಾಪನ ಮಾಡಿಸಲಾಗುವುದು. ನಂತರ ಎಷ್ಟು ವರ್ಷಗಳ ಕಾಲ ನಂಜುಂಡಪ್ಪ ವರದಿ ಅನುಷ್ಠಾನ ಜಾರಿಯಲ್ಲಿಡಬಹುದು ಎಂಬ ತೀರ್ಮಾನಕ್ಕೆ ಬರಲಾಗುವುದು. ಆದರೆ, ಈ ವರದಿಯಡಿ ಅಭಿವದ್ಧಿಯ ನಿರ್ವಹಣೆಗೆ ಅಭಿವದ್ಧಿ ಆಯುಕ್ತರ ನೇತತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.

ನೀರಾವರಿ
”ಬೆಂಗಳೂರಿನ ತಲಾ ಆದಾಯ 1.83 ಲಕ್ಷ ರೂ. ಇದ್ದರೆ, ಯಾದಗಿರಿಯಲ್ಲಿ 33 ಸಾವಿರ ರೂ. ಇದೆ. ಮೈಸೂರು, ಮಂಡ್ಯಕ್ಕಿಂತ ಧಾರವಾಡದಲ್ಲಿ ಜಾಸ್ತಿಯಿದೆ. ಹೀಗಾಗಿ ತೀರ ಕಡಿಮೆ ಆದಾಯವಿರುವ ಪ್ರದೇಶಗಳಲ್ಲಿ ಸುಧಾರಣೆ ತರಬೇಕಿದೆ. ನೀರಾವರಿಗೆ ಪ್ರತಿ ವರ್ಷ 10 ಸಾವಿರ ಕೋಟಿ ರೂ. ನಂತೆ ನೀಡಲು ಸರಕಾರ ಬದ್ಧವಾಗಿದೆ. 165 ನೀರಾವರಿ ಯೋಜನೆಗಳಲ್ಲಿ 102 ಉತ್ತರ ಕರ್ನಾಟಕದ್ದಾಗಿದ್ದು, ಒಟ್ಟಾರೆ 44,877 ಕೋಟಿ ರೂ. ವೆಚ್ಚ ಮಾಡಲಾಗಿದೆ. ಕ್ರಮವಾಗಿ ಉತ್ತರ, ದಕ್ಷಿಣದ ಪಾಲು ಶೇ. 72 ಮತ್ತು ಶೇ. 28 ಇದೆ. 27 ಲಕ್ಷ ಹೆಕ್ಟೇರ್‌ಗೆ ನೀರಾವರಿಯಾಗಿದ್ದು, ಉಳಿದ ಕಾಮಗಾರಿಗಳನ್ನು ಆದ್ಯತೆ ಮೇರೆಗೆ ಪೂರ್ಣಗೊಳಿಸಲಾಗುವುದು. ಹನಿ ನೀರಾವರಿಗೆ ಪ್ರೋತ್ಸಾಹ ನೀಡಲಾಗುತ್ತಿದ್ದು, ಇದರಿಂದ 5 ರಿಂದ 6 ಲಕ್ಷ ಹೆಕ್ಟೇರ್ ನೀರಾವರಿಗೆ ಒಳಪಡಲಿದೆ,” ಎಂದು ಹೇಳಿದರು.

”2011 ರ ಜನಗಣತಿ ಪ್ರಕಾರ ರಾಜ್ಯದ ಸರಾಸರಿ ಸಾಕ್ಷರತೆ ಪ್ರಮಾಣ ಶೇ.75.36. ಉತ್ತರ ಕರ್ನಾಟಕದಲ್ಲಿ ಶೇ. 69.86 ಇದ್ದು, ಹೈದರಾಬಾದ್ ಪ್ರಾಂತ್ಯದಲ್ಲಿ ಶೇ. 64.45 (ಶೇ. 11 ರಷ್ಟು ಕಡಿಮೆ) ಇದೆ. ಈ ಭಾಗದಲ್ಲಿ ಶಾಲೆ ಬಿಡುವುದು, ಗುಳೇ ಹೋಗುವುದು ಜಾಸ್ತಿಯಾಗಿದ್ದು, ಅವರನ್ನು ವಾಪಸ್ ಶಾಲೆಗೆ ಕರೆತರಲು ಕಾರ್ಯಕ್ರಮ ರೂಪಿಸಲಾಗಿದೆ. ಬಾಲಕಿಯರಿಗೆ ಪ್ರತಿ ದಿನದ ಹಾಜರಿಗೆ ತಲಾ 2 ರೂ. ಕೊಡಲಾಗುತ್ತಿದೆ. 2 ಬಜೆಟ್‌ನಲ್ಲಿ 12 ಹೊಸ ಮೆಡಿಕಲ್ ಕಾಲೇಜುಗಳನ್ನು ಕೊಡಲಾಗಿದ್ದು, ಪ್ರತಿ ಜಿಲ್ಲೆಗೊಂದು ಮೆಡಿಕಲ್ ಕಾಲೇಜು ನೀಡುವುದು ಸರಕಾರದ ಗುರಿಯಾಗಿದೆ. ಮಕ್ಕಳು ಹಾಗೂ ತಾಯಂದಿರ ಸುರಕ್ಷತೆಗಾಗಿ ಮಡಿಲು, ತಾಯಿ ಭಾಗ್ಯ ಯೋಜನೆ ತರಲಾಗಿದೆ. ತಜ್ಞ ವೈದ್ಯರಿಲ್ಲದ ಕಡೆಗೆ ಖಾಸಗಿ ಆಸ್ಪತ್ರೆಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಹೆರಿಗೆಯಾಗುವ 1 ಲಕ್ಷ ತಾಯಂದಿರಲ್ಲಿ 140 ಮಂದಿ ಮತರಾಗುವ ವರದಿಯಿದ್ದು, ಉತ್ತರ ಕರ್ನಾಟಕ ಭಾಗದಲ್ಲಿ ಈ ಸಂಖ್ಯೆ 177 ಇದೆ. ಹೀಗಾಗಿ ಪೌಷ್ಟಿಕಾಂಶಯುಕ್ತ ಆಹಾರ ಪೂರೈಸಲಾಗುತ್ತಿದೆ,” ಎಂದರು.

ರಾಜ್ಯೋತ್ಸವ ಪ್ರಶಸ್ತಿಯಲ್ಲೂ ಉಕಕ್ಕೆ ಅನ್ಯಾಯ ವಿಚಾರದ ಬಗ್ಗೆ ಪ್ರಸ್ತಾಪಿಸಿ,” 2010 ರಲ್ಲಿ 162 ಸಾಧಕರಲ್ಲಿ 29 (ಶೇ.18), 2013ರಲ್ಲಿ 58ರಲ್ಲಿ 18 ಮಂದಿ, 2014 ರಲ್ಲಿ 59ಮಂದಿಯಲ್ಲಿ 19 ಮಂದಿ ಉತ್ತರ ಕರ್ನಾಟಕದವರು ಇದ್ದಾರೆ. ಕೆಪಿಎಸ್‌ಸಿ ನೇಮಕದಲ್ಲಿರುವ ತಾರತಮ್ಯವನ್ನು ಹಂತ ಹಂತವಾಗಿ ಸರಿಪಡಿಸಲಾಗುವುದು. ಬಾಲ ಕಾರ್ಮಿಕರನ್ನು ನಿವಾರಿಸುವುದಕ್ಕೂ ಕ್ರಮ ಕೈಗೊಳ್ಳಲಾಗುವುದು,” ಎಂದು ಭರವಸೆ ನೀಡಿದರು.

ಕೈಗಾರಿಕೆ
”ಹೊಸ ಕೈಗಾರಿಕಾ ನೀತಿಯಡಿ ಉನ್ನತಾಧಿಕಾರ ಸಮಿತಿ ಮತ್ತು ಮುಖ್ಯ ಕಾರ್ಯದರ್ಶಿ ನೇತತ್ವದ ಸಮಿತಿಯಿಂದ ಈ ಭಾಗದ 13 ಜಿಲ್ಲೆಗಳಲ್ಲಿ 23,165 ಕೋಟಿ ರೂ. ಹೂಡಿಕೆಗೆ ಒಪ್ಪಿಗೆ ಕೊಡಲಾಗಿದ್ದು, 34,800 ಉದ್ಯೋಗ ಸಷ್ಟಿಯಾಗಲಿದೆ. ಚಿತ್ರದುರ್ಗ-ಬಳ್ಳಾರಿ-ಗುಲ್ಬರ್ಗ-ಬೀದರ್, ರಾಯಚೂರು-ಬಾಗಲಕೋಟ-ಕೊಪ್ಪಳ-ಬಳ್ಳಾರಿ ನಡುವೆ ರಾಜ್ಯ ಹೆದ್ದಾರಿ ಕಾರಿಡಾರ್ ನಿರ್ಮಿಸಲಾಗುವುದು. ಧಾರವಾಡ-ಬೆಳಗಾವಿ-ಹಾವೇರಿ-ಗದಗದ ನಡುವೆ ವಿಶೇಷ ಹೂಡಿಕೆ ವಲಯ ಹಾಗೂ ಕಲಬುರ್ಗಿ-ಬೀದರ್ ಮಧ್ಯೆ ರಾಷ್ಟ್ರೀಯ ಹೂಡಿಕೆ ಉತ್ಪಾದನಾ ವಲಯ ಸ್ಥಾಪಿಸಲಾಗುವುದು. ಯಾದಗಿರಿಯಲ್ಲಿ ಸಾವಿರ ಕೋಟಿ ರೂ. ವೆಚ್ಚದಲ್ಲಿ ಉದ್ದಿಮೆ ಆರಂಭಿಸಲು ಕೋಕೋ ಕೋಲಾ ಸಂಸ್ಥೆ ಮುಂದೆ ಬಂದಿದೆ. ಹಾಗೆಯೇ 53 ಫಾರ್ಮಾಸ್ಯುಟಿಕಲ್ ಕಂಪನಿಗಳು ಆಂಧ್ರದಿಂದ ಬರಲು ತಯಾರಾಗಿವೆ. ಕೊಲ್ಲಾಪುರದ ಉದ್ಯಮಿಗಳು ಬೆಳಗಾವಿ ಭಾಗದಲ್ಲಿ ಕೈಗಾರಿಕೆ ಪ್ರಾರಂಭಿಸಲು ಆಸಕ್ತಿ ತೋರಿದ್ದಾರೆ. ಕೌಶಲ್ಯ ಅಭಿವದ್ಧಿಗೆ ಈ ಭಾಗದಲ್ಲಿ 8 ಜಿಟಿಟಿಸಿ ಕೇಂದ್ರಗಳಿದ್ದು, ಅಗತ್ಯ ಕಂಡರೆ ಹೆಚ್ಚುವರಿ ಕೇಂದ್ರ ಆರಂಭಿಸಲಾಗುವುದು. ರಾಷ್ಟ್ರೀಯ ಹೆದ್ದಾರಿ, ಜಿಲ್ಲಾ ಮುಖ್ಯರಸ್ತೆಗಳನ್ನು ಅಭಿವದ್ಧಿ ಪಡಿಸಲು ಒತ್ತು ಕೊಡಲಾಗುತ್ತಿದೆ. ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಯೋಜನೆ ಕೈಗೆತ್ತಿಕೊಳ್ಳಲು ಕೇಂದ್ರಕ್ಕೆ ಒತ್ತಡ ತರಲಾಗುತ್ತಿದೆ. ರಾಜ್ಯದ ರೈಲ್ವೆ ಯೋಜನೆಗಳಿಗೆ ಅಗತ್ಯ ಭೂಮಿ, ಶೇ. 50 ರಷ್ಟು ಹಣ ನೀಡಲಾಗಿದೆ. ಬೆಳಗಾವಿ, ಮೈಸೂರು, ಮಂಗಳೂರು ವಿಮಾನ ನಿಲ್ದಾಣ ಅಭಿವದ್ಧಿ ಪ್ರಗತಿಯ
ಲಿದ್ದು, ಗುಲ್ಬರ್ಗ, ಬೀದರ್, ವಿಜಯಪುರ ವಿಮಾನ ನಿಲ್ದಾಣ ಯೋಜನೆಯಲ್ಲಿನ ಗೊಂದಲವನ್ನು ಶೀಘ್ರ ಬಗೆಹರಿಸಲಾಗುವುದು,” ಎಂದರು.

ಕುಡಿಯುವ ನೀರು
”ಕುಡಿಯುವ ನೀರಿನ ಉದ್ದೇಶಕ್ಕೆ ಈ ವರ್ಷ 2,527 ಕೋಟಿ ರೂ. ಒದಗಿಸಲಾಗಿದ್ದು, ಇದರಲ್ಲಿ ಉತ್ತರದ 13 ಜಿಲ್ಲೆಗಳಿಗೆ 1,462 ಕೋಟಿ ರೂ. ಲಭ್ಯವಾಗಿದೆ. ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಆರಂಭಿಸಲಾಗುತ್ತಿದ್ದು, ವಿಶ್ವಬ್ಯಾಂಕ್ ನೆರವಿನಡಿ ಜಲ ನಿರ್ಮಿಲ ಯೋಜನೆ ಕಾರ್ಯಗತಗೊಳಿಸಲಾಗುತ್ತಿದ್ದು, 937 ಕೋಟಿ ರೂ. ವ್ಯಯಿಸಲಾಗುವುದು. ಇದರಡಿ ಉತ್ತರ ಕರ್ನಾಟಕದ 496 ಗ್ರಾಮಗಳು ಬರಲಿವೆ. ಸ್ವಚ್ಛ ಭಾರತ ಅಭಿಯಾನದಡಿ 2018 ರ ವೇಳೆಗೆ ಸಂಪೂರ್ಣ ಶೌಚಾಲಯ ನಿರ್ಮಿಸಲಾಗುವುದು,” ಎಂದರು.

ದಕ್ಷಿಣ ಕರ್ನಾಟಕದಲ್ಲಿ 714 ರ ಬದಲು 1,392 ಆರೋಗ್ಯ ಕೇಂದ್ರಗಳಿದ್ದರೆ, ಉತ್ತರದಲ್ಲಿ 177 ಆರೋಗ್ಯ ಕೇಂದ್ರಗಳು ಹೆಚ್ಚುವರಿ ಇವೆ. ಅಗತ್ಯ ಕಂಡರೆ ಇನ್ನೂ ಹೆಚ್ಚಿನ ಕೇಂದ್ರಗಳನ್ನು ಆರಂಭಿಸಲಾಗುವುದು. ವೈದ್ಯರ ಖಾಲಿ ಹುದ್ದೆ ಭರ್ತಿ ಮಾಡಲಾಗುವುದು,”ಎಂದರು.

ಕತ್ತಿಗೆ ಕಿವಿ ಮಾತು
ಪ್ರತ್ಯೇಕ ರಾಜ್ಯದ ಬೇಡಿಯಿಟ್ಟಿರುವ ಮಾಜಿ ಸಚಿವ ಉಮೇಶ ಕತ್ತಿ ಅವರನ್ನು ಉದ್ದೇಶಿಸಿದ ಸಿಎಂ ”ಉತ್ತರ-ದಕ್ಷಿಣ ಕರ್ನಾಟಕವೆಂಬ ಭೇದ, ಭಾವದಿಂದ ನೋಡಬಾರದು. ಏಕೀಕರಣದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಳ್ಳಬಾರದು. ”ನೀವು ಮೊದಲು ಹೀಗಿರಲಿಲ್ಲ. ಇನ್ನು ಹೀಗೆಲ್ಲ ಪ್ರತ್ಯೇಕ ರಾಜ್ಯದ ವಿಚಾರ ಮಾತಾಡಬೇಡಿ,” ಎಂದು ಕಿವಿ ಮಾತು ಹೇಳಿದರು.

ಪ್ರತಿಪಕ್ಷಗಳ ಸಿಟ್ಟು
ಉತ್ತರ ಕರ್ನಾಟಕ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್ ಘೋಷಿಸದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಬಿಜೆಪಿ ಸದಸ್ಯರು ಸಭಾತ್ಯಾಗ ನಡೆಸಿದರು.ಮೆಕ್ಕೆ ಜೋಳ, ತೊಗರಿ ಇನ್ನಿತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಲು ಆಗ್ರಹಿಸಿ ಜೆಡಿಎಸ್ ಶಾಸಕರು ಧರಣಿ ನಡೆಸಿದರು.ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತ ವಿರೋಧಿ ಧೋರಣೆ ತಳೆದಿರುವುದಾಗಿ ಜೆಡಿಎಸ್ ಸದಸ್ಯರು ಘೋಷಣೆ ಕೂಗಿದರು.

ಪ್ರಚಾರ ಪ್ರಿಯ ಅಲ್ಲ
”ಕಾಂಗ್ರೆಸ್ ಸರಕಾರ ರಚನೆಯಾಗಿ 18 ತಿಂಗಳಲ್ಲಿ ನುಡಿದಂತೆ ನಡೆಯಲಾಗಿದ್ದು, 195 ಭರವಸೆಯಲ್ಲಿ 165 ಭರವಸೆ ಈಡೇರಿಸಲಾಗಿದೆ. ಆದರೆ, ಇದಕ್ಕೆಲ್ಲ ಸರಿಯಾದ ಪ್ರಚಾರ ಸಿಕ್ಕಿಲ್ಲವೆಂಬ ಮಾತುಗಳಿವೆ. ಆದರೆ, ಎಂದಿಗೂ ಪ್ರಚಾರದ ಹಿಂದೆ ಬಿದ್ದಿಲ್ಲ. ಜನರು ಭೇಟಿಯಾದಾಗ ಉತ್ತಮ ಕೆಲಸವಾಗುತ್ತದೆ ಎನ್ನುತ್ತಾರೆ. ಜನರ ದನಿ ನೆಲದ ದನಿಯಾಗಿರುತ್ತದೆ. ನುಡಿದಂತೆ ನಡೆಯದಿದ್ದರೆ ಚುನಾವಣೆಯಲ್ಲಿ ಜನರು ಶಿಕ್ಷೆ ಕೊಡುತ್ತಾರೆ,” ಎಂದು ಸಿದ್ದರಾಮಯ್ಯ ಹೇಳಿದರು.

ಕೈಗಾರಿಕೆ ವಿರೋಧಿಯಲ್ಲ
”ಧಾರವಾಡದಿಂದ ಹೀರೋ ಮೋಟಾರ್ಸ್‌ ಸಂಸ್ಥೆ ಆಂಧ್ರಕ್ಕೆ ತೆರಳಿದಾಗ, ನನ್ನನ್ನು ಕೈಗಾರಿಕಾ ವಿರೋಧಿಯೆಂದು ಬಿಂಬಿಸುವ ಯತ್ನ ಮಾಡಲಾಯಿತು. ಅದೊಂದು ಸಂಸ್ಥೆ ವಲಸೆ ಹೋದದ್ದರಿಂದ ಎಲ್ಲ ಕೈಗಾರಿಕೆಗಳೂ ಆಂಧ್ರಕ್ಕೆ ಹೊರಟವೆಂದು ಹೇಳಲಾಯಿತು. ಆದರೆ, ಹೊಸ ಕೈಗಾರಿಕಾ ನೀತಿ ಅನ್ವಯಯ ಉದ್ಯಮ ವಲಯ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಉತ್ತರ ಕರ್ನಾಟಕಕ್ಕೆ ಒತ್ತು ಕೊಡಲಾಗುತ್ತಿದೆ,” ಎಂದು ಸಿಎಂ ಸ್ಪಷ್ಟ ಪಡಿಸಿದರು.

Write A Comment