ಕರ್ನಾಟಕ

ಚೆನ್ನೈಗೆ ಹಾರಿದ ಮಗುವಿನ ಮಿಡಿವ ಹೃದಯ (updated news)

Pinterest LinkedIn Tumblr

141219kpn86

ಬೆಂಗಳೂರು : ಮಗುವಿನ ಜೀವಂತ ಹೃದಯವನ್ನು ಶುಕ್ರವಾರ ನಗರದಿಂದ ಚೆನ್ನೈಗೆ ವಿಶೇಷ ವಿಮಾನದಲ್ಲಿ ರವಾನಿಸಿ ಮತ್ತೊಂದು ಮಗುವಿಗೆ ಯಶಸ್ವಿ ಜೋಡಣೆ ಮಾಡಿದ ಘಟನೆ ನಡೆದಿದೆ.

ಕಳೆದ ಸೆ.3ರಂದು ಅಪಘಾತದಲ್ಲಿ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡ ಮಹಿಳೆಯ ಹೃದಯವನ್ನು ಬಿಜಿಎಸ್ ಗ್ಲೋಬಲ್ ಆಸ್ಪತ್ರೆಯಿಂದ ಚೆನ್ನೈಗೆ ಸಾಗಿಸಿ ಫೋರ್ಟಿಸ್ ಮಲಾರ್ ಆಸ್ಪತ್ರೆಯಲ್ಲಿ ಯುವಕನೊಬ್ಬನಿಗೆ ಕಸಿ ಮಾಡಿ ಆತನ ಜೀವ ಉಳಿಸಲಾಗಿತ್ತು. ಇದೀಗ ಮತ್ತೊಮ್ಮೆ ಉಭಯ ರಾಜ್ಯಗಳ ವೈದ್ಯರ ಜಂಟಿ ಕಾರ್ಯಾಚರಣೆಯಲ್ಲಿ ಎರಡೂವರೆ ವರ್ಷದ ಮಗುವಿನ ಜೀವ ಉಳಿಸಲಾಗಿದೆ.

ನಗರದಲ್ಲಿ ನೆಲೆಸಿರುವ ಜಾರ್ಖಂಡ್ ಮೂಲದ ಐಟಿ ಕಂಪನಿ ಉದ್ಯೋಗಿಯೊಬ್ಬರ ಎರಡು ವರ್ಷ ಒಂಬತ್ತು ತಿಂಗಳ ಪುತ್ರನನ್ನು ತೀವ್ರ ಜ್ವರದ ಹಿನ್ನೆಲೆಯಲ್ಲಿ ವಾರದ ಹಿಂದೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಜ್ವರ ಕಡಿಮೆಯಾಗದ ಹಿನ್ನೆಲೆಯಲ್ಲಿ ಎರಡು ದಿನಗಳ ಹಿಂದೆ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಿದ್ದರು. ಅಲ್ಲಿಯೂ ಚಿಕಿತ್ಸೆ ಫಲಕಾರಿಯಾಗದೆ ತೀವ್ರ ಜ್ವರದಿಂದ ಮಗುವಿನ ಮಿದುಳು ಗುರುವಾರ ರಾತ್ರಿ ನಿಷ್ಕ್ರಿಯಗೊಂಡಿತು.

ಮಣಿಪಾಲ್ ಆಸ್ಪತ್ರೆ ವೈದ್ಯರು ಮಗುವಿನ ಪೋಷಕರೊಂದಿಗೆ ಮಾತುಕತೆ ನಡೆಸಿ ”ಮಗುವಿನ ಮಿದುಳು ನಿಷ್ಕ್ರಿಯಗೊಂಡಿದೆ. ಆದರೆ ಮಗುವಿನ ಅಂಗಾಂಗಳು ಜೀವಂತ ಇವೆ. ಮತ್ತೊಂದು ಮಗುವಿಗೆ ಅಂಗಾಂಗ ದಾನ ಮಾಡಬಹುದು” ಎಂದು ಮಾಹಿತಿ ನೀಡಿದರು. ಇದಕ್ಕೆ ಪೋಷಕರೂ ಒಪ್ಪಿದರು. ಅಂಗಾಂಗಗಳ ಕಸಿಗೆ ಸರಕಾರ ರಚಿಸಿರುವ ಪ್ರಾದೇಶಿಕ ಸಮನ್ವಯ ಸಮಿತಿಯ ಅನುಮತಿಯನ್ನೂ ಪಡೆಯಲಾಯಿತು. ಕೊನೆಗೆ ಹೃದಯ ಬೇಕಿರುವ ರೋಗಿಗಾಗಿ ಶೋಧ ನಡೆಸಿದಾಗ ಚೆನ್ನೈನ ಫೋರ್ಟಿಸ್ ಮಲಾರ್ ಆಸ್ಪತ್ರೆಯಲ್ಲಿ ಹೃದ್ರೋಗದಿಂದ ಬಳಲುತ್ತಿರುವ ಮಗುವಿಗೆ ತುರ್ತಾಗಿ ಹೃದಯ ಬೇಕಾಗಿದೆ ಎಂಬ ಮಾಹಿತಿ ತಿಳಿಯಿತು.

ಮಲಾರ್ ಆಸ್ಪತ್ರೆಯ ಐವರು ವೈದ್ಯರು ಹಾಗೂ ಐವರು ನರ್ಸ್‌ಗಳ ತಂಡ ಗುರುವಾರ ರಾತ್ರಿಯೇ ನಗರಕ್ಕೆ ಆಗಮಿಸಿತು. ರಕ್ತ ಪರೀಕ್ಷೆ ನಡೆಸಿ ರಕ್ತ ಹೊಂದಾಣಿಕೆಯಾಗುವುದನ್ನು ಖಾತರಿ ಪಡಿಸಿಕೊಳ್ಳಲಾಯಿತು. ಶುಕ್ರವಾರ ಬೆಳಗ್ಗೆ ಎರಡೂ ಆಸ್ಪತ್ರೆಗಳ ವೈದ್ಯರು ಸರ್ಜರಿ ನಡೆಸಿ ಮಧ್ಯಾಹ್ನ 1.20ರ ವೇಳೆಗೆ ಹೃದಯವನ್ನು ತೆಗೆದು ಸುರಕ್ಷಿತ ಬಾಕ್ಸ್‌ನಲ್ಲಿ ಇಟ್ಟು ಚೆನ್ನೈಗೆ ಕೇವಲ 80 ನಿಮಿಷದಲ್ಲಿ ಸಾಗಿಸಲಾಯಿತು.

heart

ಪೊಲೀಸರಿಂದ ಗ್ರೀನ್ ಕಾರಿಡಾರ್
ನಗರ ಸಂಚಾರ ಪೊಲೀಸರು ಜೀವಂತ ಹೃದಯವನ್ನು ಮಣಿಪಾಲ್ ಆಸ್ಪತ್ರೆಯಿಂದ ಸಮೀಪದಲ್ಲೇ ಇರುವ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಂಬ್ಯುಲೆನ್ಸ್‌ನಲ್ಲಿ ಸಾಗಿಸಲು ಸಂಚಾರ ಮುಕ್ತ (ಗ್ರೀನ್ ಕಾರಿಡಾರ್) ವ್ಯವಸ್ಥೆ ಮಾಡಿಕೊಟ್ಟರು. ಇದರಿಂದ ಕೆಲವೇ ನಿಮಿಷಗಳಲ್ಲಿ ಆಂಬ್ಯುಲೆನ್ಸ್ ಏರ್‌ಪೋರ್ಟ್ ತಲುಪಿತು. ಅಲ್ಲಿಂದ ವಿಶೇಷ ವಿಮಾನದಲ್ಲಿ ಹೊರಟು ಮಧ್ಯಾಹ್ನ 2:20ಕ್ಕೆ ಚೆನ್ನೈ ತಲುಪಿತು. ಅಲ್ಲಿ ಮೊದಲೇ ಸಿದ್ಧವಾಗಿದ್ದ ಆಂಬ್ಯುಲೆನ್ಸ್‌ನಲ್ಲಿ ಫೋರ್ಟಿಸ್ ಆಸ್ಪತ್ರೆಗೆ ಮಧ್ಯಾಹ್ನ 2.30ಕ್ಕೆ ಸಾಗಿಸಲಾಯಿತು. ಸಂಜೆಯ ವೇಳೆ ಆರು ವೈದ್ಯರ ತಂಡ ಯಶಸ್ವಿಯಾಗಿ ಹೃದಯ ಕಸಿ ನಡೆಸಿತು. ಮಗುವನ್ನು ಐಸಿಯುಗೆ ಸ್ಥಳಾಂತರಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಮಣಿಪಾಲ್ ಆಸ್ಪತ್ರೆಯಿಂದ ಎಚ್‌ಎಎಲ್ ಏರ್‌ಪೋರ್ಟ್‌ಗೆ ಜೀವಂತ ಹೃದಯವನ್ನು ಸಾಗಿಸಲು ಆಂಬುಲೆನ್ಸ್‌ಗೆ ಸಂಚಾರ ಮುಕ್ತ ವ್ಯವಸ್ಥೆ ಮಾಡಲು ಡಿಸಿಪಿ ಬಾಬು ರಾಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಒಬ್ಬರು ಎಸಿಪಿ, ಮೂವರು ಇನ್‌ಸ್ಪೆಕ್ಟರ್, ಆರು ಮಂದಿ ಎಸ್‌ಐ ಹಾಗೂ 15 ಮಂದಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.

ಮಗುವಿನ ಮಿದುಳು ನಿಷ್ಕ್ರಿಯಗೊಂಡಿದೆ. ಆದರೆ ಮಗುವಿನ ಅಂಗಾಂಗಗಳು ಜೀವಂತವಾಗಿದ್ದು, ದಾನ ಮಾಡುವಂತೆ ಮಗುವಿನ ತಂದೆಗೆ ಹೇಳಿದೆ. ಅವರು ಅದಕ್ಕೆ ಒಪ್ಪಿಕೊಂಡರು. ಪೋಷಕರಿಗೂ ಈ ಬಗ್ಗೆ ಮಾಹಿತಿ ಇದ್ದಿದ್ದರಿಂದ ನಿರ್ಧಾರ ತೆಗೆದುಕೊಳ್ಳಲು ಹೆಚ್ಚು ಸಮಯ ಬೇಕಾಗಲಿಲ್ಲ. ಎರಡೂ ರಾಜ್ಯಗಳ ಸಂಚಾರ ಪೊಲೀಸರು ಸಂಚಾರ ಮುಕ್ತ ವ್ಯವಸ್ಥೆ ಕಲ್ಪಿಸಿದ್ದರಿಂದ ನಿಗದಿತ ಅವಧಿಯೊಳಗೆ ಚೆನ್ನೈಗೆ ಜೀವಂತ ಹೃದಯ ರವಾನಿಸಲು ಸಾಧ್ಯವಾಯಿತು.
-ಡಾ.ಸುದರ್ಶನ್ ಬಲ್ಲಾಳ್, ಮಣಿಪಾಲ್ ಆಸ್ಪತ್ರೆ ನಿರ್ದೇಶಕರು.

ರಾಜ್ಯದಲ್ಲಿ ಯಾವ ಮಗುವಿಗೂ ಹೃದಯ ಬೇಕಿರಲಿಲ್ಲ. ಹೀಗಾಗಿ ನೆರೆಯ ತಮಿಳುನಾಡಿನಲ್ಲಿ ವಿಚಾರಿಸಿದಾಗ ಫೋರ್ಟಿಸ್ ಮಲಾರ್ ಆಸ್ಪತ್ರೆಯಲ್ಲಿರುವ ಮಗುವಿಗೆ ಅಗತ್ಯವಿರುವುದು ಗೊತ್ತಾಯಿತು. ಕೂಡಲೇ ರಕ್ತ ಹೊಂದಾಣಿಕೆಯಾಗುವುದೇ ಎಂಬುದನ್ನು ಪರಿಶೀಲಿಸಲಾಯಿತು. ಮಗುವಿನ ಪೋಷಕರು ಹೃದಯ ದಾನ ಮಾಡಲು ಒಪ್ಪಿದ್ದು ಅನುಕೂಲವಾಯಿತು.
– ಕೆ.ಯು.ಮಂಜುಳಾ, ಅಂಗಾಂಗಳ ಕಸಿ ಮುಖ್ಯ ಸಮನ್ವಯಾಧಿಕಾರಿ.

ವೈದ್ಯರ ಚಿಕಿತ್ಸೆ ಮೇಲೆ ನಂಬಿಕೆ ಇಟ್ಟಿದ್ದೆ. ಆದರೆ ಚಿಕಿತ್ಸೆಯಿಂದ ನನ್ನ ಪುತ್ರನ ಉಳಿಸಿಕೊಳ್ಳಲಾಗಲಿಲ್ಲ. ನನ್ನ ಪುತ್ರನ ಮರಣ ನಂತರವೂ ಆತ ಬದುಕಿರಲಿ ಎಂಬ ಆಸೆಯಿಂದ ಅಂಗಾಂಗ ದಾನ ಮಾಡಲು ಗಟ್ಟಿ ನಿರ್ಧಾರ ತೆಗೆದುಕೊಂಡೆ. ಮೂರು ತಿಂಗಳ ಹಿಂದೆ ಜೀವಂತ ಹೃದಯ ಚೆನ್ನೈಗೆ ರವಾನಿಸಿ ಯಶಸ್ವಿಯಾಗಿ ಕಸಿ ನಡೆಸಿದ್ದನ್ನು ನಾನು ಸುದ್ದಿವಾಹಿನಿಗಳ ಮೂಲಕ ನೋಡಿದ್ದು ಪ್ರೇರಣೆಯಾಯಿತು.
– ಮಗುವಿನ ತಂದೆ

Write A Comment