ಕರ್ನಾಟಕ

ವ್ಯವಸ್ಥೆಯ ಒಳಗಿದ್ದೇ ನನ್ನ ಹೋರಾಟ: ಡಾ.ಸಿದ್ದಲಿಂಗಯ್ಯ

Pinterest LinkedIn Tumblr

Siddalingaiah

ಬೆಂಗಳೂರು : ”ದೇವನೂರು ಅವರದ್ದು ವ್ಯವಸ್ಥೆ ಹೊರಗಿದ್ದು ಹೋರಾಟವಾದರೆ, ನನ್ನದು ವ್ಯವಸ್ಥೆಯ ಒಳಗಿದ್ದು ಹೋರಾಟ. ನನ್ನಲ್ಲಿನ ಆಕ್ರೋಶ ಕಮ್ಮಿಯಾಗಿದ್ದರೂ ವಿಚಾರದ ಒಳದನಿ, ಪ್ರತಿಪಾದನೆ ಬದಲಾಗಿಲ್ಲ. ದೇವನೂರು ಅವರ ಆಶಯವನ್ನು ಸಮ್ಮೇಳನದ ವೇದಿಕೆಯಲ್ಲಿಯೇ ಹೇಳಿ ಕನ್ನಡ ರಕ್ಷಣೆಯ ಆಂದೋಲನ ಸೃಷ್ಟಿಯಾಗಲು ನೆರವಾಗುತ್ತೇನೆ” ಎಂದು 81ನೇ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಡಾ. ಸಿದ್ದಲಿಂಗಯ್ಯ ಹೇಳಿದರು.

”ವಿಕ”ಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಜೀವಪರ ಕಾಳಜಿ, ಹೋರಾಟದ ಮನೋಭಾವ ಬದಲಾಗಿಲ್ಲ. ಆದರೆ ಮಾರ್ಗಗಳು, ಅಭಿವ್ಯಕ್ತಿಯ ಬಗೆ ಮಾತ್ರ ಬದಲಾಗಿದೆ ಎಂದು ಪ್ರತಿಪಾದಿಸಿದರು.
ವಿಕ: ಸೈದ್ಧಾಂತಿಕ ಕಾರಣಕ್ಕೆ ದೇವನೂರು ಮಹಾದೇವ ನಿರಾಕರಿಸಿದ್ದ ಸಮ್ಮೇಳನದ ಅಧ್ಯಕ್ಷ ಪಟ್ಟವನ್ನು ನೀವು ಒಪ್ಪಿಕೊಂಡಿದ್ದೀರಿ?
ಸಿದ್ದಲಿಂಗಯ್ಯ: ದೇವನೂರು ಅವರು ಯಾವತ್ತೂ ವ್ಯವಸ್ಥೆಯ ಹೊರಗಿದ್ದು ಹೊರಾಟ ಮಾಡಿದವರು. ನಾನು ವ್ಯವಸ್ಥೆಯ ಒಳಗಿದ್ದೇ ಹೋರಾಟ ಮಾಡಿಕೊಂಡ ಬಂದವನು. ಹಾಗಂತ ಅವರಿಗೂ ನನಗೂ ಭಿನ್ನತೆಯಿದೆ ಎಂದಲ್ಲ. ದೇವನೂರು ಪ್ರತಿಪಾದಿಸಿರುವ ವಿಷಾದ ಬಹಳ ದೊಡ್ಡ ವಿಚಾರ. ಕನ್ನಡಕ್ಕೆ ಉಂಟಾಗಿರುವ ಗಂಡಾಂತರವನ್ನು ಸಮ್ಮೇಳನದ ಅಧ್ಯಕ್ಷನಾಗಿ ಪ್ರಸ್ತಾಪ ಮಾಡುತ್ತೇನೆ. ದೇವನೂರರ ಪ್ರತಿಪಾದನೆಯೇ ಇಡೀ ಸಮ್ಮೇಳನದ ಪ್ರಧಾನ ಆಶಯವಾಗುವಂತೆ ಮಾಡಬೇಕಾಗಿದೆ.

ವಿಕ: ವಿವಾದ, ಟೀಕೆಗೆ ಗುರಿಯಾದ ಆಳ್ವಾಸ್ ನುಡಿಸಿರಿಯ ಅಧ್ಯಕ್ಷರಾದ ಅಲ್ಪಾವಧಿಯಲ್ಲಿಯೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪಟ್ಟ ಒಲಿದಿದೆ. ಎರಡರ ಭಿನ್ನತೆ ಹೇಗೆ ಪರಿಭಾವಿಸುತ್ತೀರಿ?
ಸಿದ್ಧಲಿಂಗಯ್ಯ: ಆಳ್ವಾಸ್ ನುಡಿಸಿರಿಯಲ್ಲಿ ನನ್ನ ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಲು ಅವಕಾಶವಿತ್ತು. ಯಾವುದೇ ನಿರ್ಬಂಧವಿಲ್ಲದೇ ಗೇಣಿ, ಜೀತ, ಕೊರಗರ ಸಮಸ್ಯೆ, ಅಸ್ಪೃಶ್ಯತೆ ಕುರಿತು ಮಾತನಾಡಿದೆ. ಪ್ರಗತಿ ವಿರೋಧಿಯಾಗಿ ಅಲ್ಲಿ ನಾನು ಮಾತನಾಡಬಹುದೆಂಬ ಆತಂಕದಲ್ಲಿದ್ದವರೂ ನಂತರ ಸಮಾಧಾನಗೊಂಡಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನದಲ್ಲೂ ಕನ್ನಡ, ಕನ್ನಡಿಗ, ಕರ್ನಾಟಕದ ಆಪತ್ತು ವಿವರಿಸಿ ಸರಕಾರವನ್ನು ಎಚ್ಚರಿಸುವ, ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಹೊಸ ಆಂದೋಲನಕ್ಕೆ ಕಾರಣವಾಗುವಂತಹ ಭಾಷಣ ಮಾಡುವೆ.

ವಿಕ: ಕ್ರಾಂತಿಕಾರಿ ಪದ್ಯ ಬರೆದು ಒಂದು ತಲೆಮಾರನ್ನೇ ಪ್ರಭಾವಿಸಿದ್ದ ನೀವು, ಪ್ರಭುತ್ವ ಮತ್ತು ಶೋಷಕ ಸಮಾಜದ ಕುರಿತು ಮೃದುವಾಗಿದ್ದೀರಿ? ನಿಮ್ಮ ದೃಷ್ಟಿಯಲ್ಲಿ ಜಾತಿ ಕ್ರೌರ‌್ಯ ಕಡಿಮೆಯಾಗಿದೆಯೇ ?
ಸಿದ್ಧಲಿಂಗಯ್ಯ: ಎಲ್ಲಿಯೇ ಭಾಷಣಕ್ಕೂ ಹೋದರೂ ಜಾತಿ ವಿನಾಶಕ್ಕೆ ಕರೆಕೊಡುತ್ತಾ ಬಂದಿದ್ದೇನೆ. 70ರ ದಶಕದಲ್ಲಿದ್ದ ಆಕ್ರೋಶ ಕಮ್ಮಿಯಾಗಿರಬಹುದು. ಹೇಳುವ ರೀತಿ ಬದಲಾಗಿರಬಹುದು. ಆದರೆ ವಿಚಾರ ಬದಲಾಗಿಲ್ಲ. ಒಳದನಿ ಹಾಗೆಯೇ ಇದೆ. ಅಂಬೇಡ್ಕರ್, ಮಾರ್ಕ್ಸ್, ಲೋಹಿಯಾ ಅವರ ಚಿಂತನೆಯಲ್ಲಿಯೇ ಇದ್ದೇನೆ. ದಲಿತರು ಇವತ್ತು ಒಂದು ಜಾತಿಯಲ್ಲ. ಎಲ್ಲಾ ಜಾತಿ, ಧರ್ಮ, ದೇಶಗಳಲ್ಲೂ ಅಪಮಾನಿತರು, ಅಂಚಿಗೆ ತಳ್ಳಲ್ಪಟ್ಟವರು ಇದ್ದಾರೆ. ಅಪಮಾನದಿಂದ ಸಾಯುವವರೂ ಎಲ್ಲಾ ಜಾತಿಯಲ್ಲಿಯೂ ಇದ್ದಾರೆ. ಅವರೆಲ್ಲರೂ ದಲಿತರೇ, ಅವರ ಬರಹಗಳೂ ದಲಿತಸಾಹಿತ್ಯವೇ ಎಂಬ ನಿಲುವಿಗೆ ಬಂದಿದ್ದೇನೆ.

ವಿಕ: ಸಾಹಿತ್ಯ ಸಮ್ಮೇಳನ ಜಾತ್ರೆ, ಅರ್ಥಪೂರ್ಣ ಚರ್ಚೆಗೆ ವೇದಿಕೆಯಲ್ಲ ಎಂಬ ಅಪಸ್ವರದ ಕುರಿತು?
ಸಿದ್ಧಲಿಂಗಯ್ಯ: ಅದು ಕನ್ನಡ ಹಬ್ಬ ಎಂದರೆ ತಪ್ಪಾಗುವುದಿಲ್ಲ. ಕನ್ನಡ ಮಾತನಾಡುವುದು ಕೀಳು, ಕನ್ನಡಿಗರಿಗೆ ಸಂಸ್ಕೃತಿಯೇ ಇಲ್ಲ, ಕನ್ನಡ ಮಾತನಾಡುವುದು ಅಪಮಾನ ಎಂಬ ತಲೆಮಾರು ಸೃಷ್ಟಿಯಾಗುತ್ತಿದೆ. ಇಂತಹ ಹೊತ್ತಿನಲ್ಲಿ ಕನ್ನಡಿಗರೆಲ್ಲಾ ಸೇರಿ ಕನ್ನಡ ಪರಂಪರೆ, ಚರಿತ್ರೆ, ಸಾಂಸ್ಕೃತಿಕ ಮಹತ್ವದ ಕುರಿತು ಕನ್ನಡಿಗರಲ್ಲಿ ಆತ್ಮವಿಶ್ವಾಸ, ಸ್ವಾಭಿಮಾನ ಮೂಡಿಸಲು ಸಮ್ಮೇಳನಗಳು ನಡೆಯಬೇಕು. ಕನ್ನಡದ ಕಂಟಕವನ್ನು ಸರಕಾರದ ಮುಂದಿಟ್ಟು ಎಚ್ಚರಿಸುವ ಆಂದೋಲನಕ್ಕೆ ಸಮ್ಮೇಳನ ದಾರಿಯಾಗಬೇಕು.

ವಿಕ: ಮಹಾಮೇಳಾವ ನಡೆದಾಗ ಅಲ್ಲಿನ ಸರಕಾರ ನಡುಗುತ್ತದೆ. ನಮ್ಮ ಸಮ್ಮೇಳನದ ನಿರ್ಣಯಗಳ ಬಗ್ಗೆ ಸರಕಾರ ಕಿಮ್ಮತ್ತೇ ಕೊಡುವುದಿಲ್ಲವಲ್ಲ?
ಸಿದ್ಧಲಿಂಗಯ್ಯ: ಸಮ್ಮೇಳನದ ನಿರ್ಣಯಗಳ ಬಗ್ಗೆ ಜನಪ್ರತಿನಿಧಿಗಳು ಗಂಭೀರವಾಗಿ ಆಲೋಚಿಸಿ, ಅನುಷ್ಠಾನವಾಗುವಂತೆ ನೋಡಿಕೊಳ್ಳಬೇಕು. ವಿಧಾನಮಂಡಲದಲ್ಲಿ ಚರ್ಚೆಯಾಗಬೇಕು. ಜನಪ್ರತಿನಿಧಿಗಳಲ್ಲೂ ಕನ್ನಡಾಭಿಮಾನ ಮೂಡಬೇಕು. ಹಿಂದಿನ ವರ್ಷಗಳ ನಿರ್ಣಯದ ಅನುಪಾಲನಾ ವರದಿ ಮುಂದಿನ ಸಮ್ಮೇಳನಗಳಲ್ಲಿ ಮಂಡನೆ ಮಾಡುವುದು ಕಡ್ಡಾಯವಾಗಬೇಕು.

ವಿಕ: ಸರಕಾರಗಳು ಕನ್ನಡ, ದಲಿತ, ಸಾಮಾಜಿಕ ನ್ಯಾಯದ ಪರ ಕೆಲಸ ಮಾಡುತ್ತಿವೆಯೇ?
ಸಿದ್ಧಲಿಂಗಯ್ಯ: ಇದು ರಾಜಕೀಯ ಸ್ವರೂಪದ ಪ್ರಶ್ನೆ. ಕೆಲವು ಸಚಿವರು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. ಕೆಲವರು ನಿರೀಕ್ಷೆಯಂತೆ ಇಲ್ಲ. ನಾನು ಕನ್ನಡದ ಬಗ್ಗೆಯೇ ಮಾತನಾಡುತ್ತೇನೆ. ಸಮಾಜ ಕಲ್ಯಾಣ ಸಚಿವರು ಕೆಲವು ಕಾಯಿದೆಗಳನ್ನು ತಂದು ಒಳ್ಳೆಯ ಕೆಲಸ ಮಾಡಿದ್ದಾರೆ. ಸಿದ್ದರಾಮಯ್ಯನವರು ಕನ್ನಡದಲ್ಲಿಲ್ಲದ ಕಡತಗಳನ್ನು ವಾಪಸ್ ಕಳಿಸಿದ್ದಾರೆ. ಇದು ಇತರ ಸಚಿವರಿಗೆ ಮಾದರಿಯಾಗಬೇಕು.

Write A Comment