ಕರ್ನಾಟಕ

ಮೊಬೈಲ್ ಮೋಜು: ಚವಾಣ್ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಪಟ್ಟು; ಅಂಬಿ, ಮಲ್ಲಿಕಾರ್ಜುನ್‌ರಿಂದಲೂ ವೀಡಿಯೊ ವೀಕ್ಷಣೆ: ಬಿಜೆಪಿ ಎದಿರೇಟು

Pinterest LinkedIn Tumblr

sada

ಬೆಳಗಾವಿ, ಡಿ.11: ಬಿಜೆಪಿ ಶಾಸಕ ಪ್ರಭು ಚವಾಣ್ ವಿಧಾನಸಭೆಯಲ್ಲಿ ಮೊಬೈಲ್‌ನಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರ ಭಾವಚಿತ್ರವನ್ನು ಕೆಟ್ಟ ದೃಷ್ಟಿಯಿಂದ ನೋಡಿದ ಪ್ರಕರಣ ವಿಧಾನ ಮಂಡಲದ ಉಭಯ ಸದನಗಳಲ್ಲಿಂದು ಮಾರ್ದನಿಸಿದ್ದು, ಬಿಜೆಪಿ ನಾಯಕರ ವಿರುದ್ಧ ಆಡಳಿತ ಪಕ್ಷದ ಸದಸ್ಯರು ಅಕ್ಷರಶಃ ತಿರುಗಿಬಿದ್ದರು.

ಇದರಿಂದಾಗಿ ಇಡೀ ದಿನದ ಕಲಾಪ ಬಲಿಯಾಯಿತು. ಪ್ರಭು ಚವಾಣ್ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಪಟ್ಟು ಹಿಡಿದರೆ, ವಸತಿ ಸಚಿವ ಅಂಬರೀಷ್ ಮತ್ತು ಶಾಸಕ ಎಸ್.ಎಸ್. ಮಲ್ಲಿಕಾರ್ಜುನ್ ಕೂಡಾ ಸದನದಲ್ಲಿ ವೀಡಿಯೊ ಒಂದನ್ನು ವೀಕ್ಷಿಸಿದ್ದು, ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಿಪಕ್ಷ ಸದಸ್ಯರು ಧರಣಿ. ಪ್ರತಿಧರಣಿ, ಪಟ್ಟು ಪ್ರತಿಪಟ್ಟು ಹಿಡಿದರು. ಏಟಿಗೆ ಇದಿರೇಟು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ವಿಧಾನಸಭೆಯಲ್ಲಿ ಆಡಳಿತ ಪಕ್ಷದ ಶಾಸಕರು ತೀವ್ರ ಪ್ರತಿಭಟನೆ ನಡೆಸಿ ಧರಣಿಗೆ ಮುಂದಾದರು. ಪ್ರಭು ಚವಾಣ್‌ರನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದರು. ಇತ್ತ ವಿಧಾನ ಪರಿಷತ್‌ನಲ್ಲೂ ಮೊಬೈಲ್ ಪ್ರಕರಣ ಪ್ರಸ್ತಾಪಗೊಂಡು ಆಡಳಿತ ಪಕ್ಷದ ಸದಸ್ಯರು ಧರಣಿ ನಡೆಸಿದರು. ಇದನ್ನು ವಿರೋಧಿಸಿ ಪ್ರತಿಪಕ್ಷ ಬಿಜೆಪಿ ಸಹ ಪ್ರತಿ ಧರಣಿ ನಡೆಸಿತು. ಎರಡೂ ಸದನಗಳಲ್ಲಿ ಕಲಾಪಕ್ಕೆ ಅಡ್ಡಿಯುಂಟಾಯಿತು. ವಿಧಾನಸಭೆ ಸಮಾವೇಶಗೊಳ್ಳುತ್ತಿದ್ದಂತೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಶಾಸಕರು ಈ ಪ್ರಕರಣವನ್ನು ಪ್ರಸ್ತಾಪಿಸಿದರು. ಈ ಪ್ರಕರಣ ಸಂಸತ್‌ನಲ್ಲೂ ಚರ್ಚೆಯಾಗುವ ಸಾಧ್ಯತೆ ಇದೆ. ಹೀಗಾಗಿ ಇದಕ್ಕೆ ತಕ್ಕ ಕ್ರಮ ಆಗಲೇ ಬೇಕು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಒತ್ತಾಯಿಸಿದರು. ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, ಪ್ರಭು ಚವಾಣ್ ಮಾಡಿದ್ದು ಸರಿಯಲ್ಲ. ಇದಕ್ಕಾಗಿ ಅವರು ವಿಷಾದ ವ್ಯಕ್ತಪಡಿಸಿ ಹೇಳಿಕೆ ನೀಡುತ್ತಾರೆ. ನಿಯಮಾವಳಿ ಪ್ರಕಾರ ಸದನ ನಡೆಸಬೇಕು. ನಾವು ನಮ್ಮ ಶಾಸಕರಿಗೆ ತಿಳುವಳಿಕೆ ಹೇಳಿದ್ದೇವೆ ಎಂದು ಸಮರ್ಥಿಸಿಕೊಂಡರು.

ಈ ಮಧ್ಯೆ ನಿನ್ನೆ ಪ್ರಭು ಚವಾಣ್ ಮಾತ್ರವಲ್ಲ, ಸಚಿವ ಅಂಬರೀಶ್ ಮತ್ತು ಶಾಸಕ ಎಸ್.ಎಸ್.ಮಲ್ಲಿಕಾರ್ಜುನ ಸಹ ಸದನದಲ್ಲಿ ವಿಡಿಯೋ ವೀಕ್ಷಿಸುತ್ತಿದ್ದರು ಎಂದು ಬಿಜೆಪಿಯ ಸಿ.ಟಿ.ರವಿ ಆರೋಪಿಸಿದರು. ಇದು ಧರಣಿ ನಿರತರನ್ನು ಮತ್ತಷ್ಟು ಕೆರಳಿಸಿತು. ಆಡಳಿತ ಮತ್ತು ಪ್ರತಿಪಕ್ಷ ಶಾಸಕರ ನಡುವೆ ವಾಗ್ಯುದ್ಧಕ್ಕೆ ಕಾರಣವಾಯಿತು. ಈ ಮಧ್ಯೆ ಜೆಡಿಎಸ್ ಕೂಡ ಕಾಂಗ್ರೆಸ್ ಧರಣಿಗೆ ಬೆಂಬಲ ವ್ಯಕ್ತಪಡಿಸಿತು. ತಪ್ಪಿತಸ್ಥರ ವಿರುದ್ಧ ಈಗಲೇ ಸೂಕ್ತ ಕ್ರಮ ಅಗತ್ಯ ಎಂದು ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ವಾದಿಸಿದರು. ಮಾಧ್ಯಮಗಳು ಸದನದಲ್ಲಿ ನಡೆಯುವ ರಚನಾತ್ಮಕ ಚರ್ಚೆಯತ್ತ ಗಮನ ನೀಡದೇ ಇಂತಹ ಪ್ರಕರಣಗಳನ್ನು ವಿಜೃಂಭಿಸುತ್ತವೆ. ಮಾಧ್ಯಮಗಳ ವರ್ತನೆ ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಬಿಜೆಪಿ ಶಾಸಕ ಪ್ರಭು ಚವಾಣ್ ಅವರು ಮೊಬೈಲ್‌ನಲ್ಲಿ ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿಯ ಚಿತ್ರವನ್ನು ವೀಕ್ಷಿಸುತ್ತಾ ಕುಳಿತ ಘಟನೆಯ ಹಿನ್ನೆಲೆಯಲ್ಲಿ ರೌದ್ರಾವತಾರ ತಾಳಿದರು. ತದ ನಂತರ ತಿರುಗಿ ಬಿದ್ದ ಬಿಜೆಪಿ ಸದಸ್ಯರು, ವಸತಿ ಸಚಿವ ಅಂಬರೀಷ್ ಹಾಗೂ ಶಾಸಕ ಎಸ್.ಎಸ್.ಮಲ್ಲಿಕಾರ್ಜುನ್ ಕೂಡಾ ಕುಡಿದು, ಕುಣಿಯುವ ಮೊಬೈಲ್ ದೃಶ್ಯಾವಳಿಗಳನ್ನು ವೀಕ್ಷಿಸಿದ್ದಾರೆ. ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಶಾಸಕ ಪ್ರಭು ಚವಾಣ್ ಅವರು ನಿನ್ನೆ ಮೊಬೈಲ್‌ನಲ್ಲಿ ಪ್ರಿಯಾಂಕಾ ಗಾಂಧಿಯ ದೃಶ್ಯವನ್ನು ವೀಕ್ಷಿಸಿದ್ದು ಆಕಸ್ಮಿಕವಾಗಿ ನಡೆದ ತಪ್ಪು ಘಟನೆ. ಇದಕ್ಕಾಗಿ ಕ್ಷಮೆ ಯಾಚಿಸುತ್ತೇನೆ ಎಂದು ವಿಧಾನಸಭಾ ಅಧ್ಯಕ್ಷ ಕಾಗೋಡು ತಿಮ್ಮಪ್ಪನವರ ಬಳಿ ತೆರಳಿ ಕ್ಷಮೆ ಯಾಚಿಸಿ ಬಂದರೂ, ಉಭಯ ಸದನಗಳಲ್ಲಿ ಗದ್ದಲ ತಾರಕಕ್ಕೇರಿತು.

ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, ಪ್ರಭು ಚವಾಣ್ ಅವರು ಮೊಬೈಲ್ ವೀಕ್ಷಿಸಿದ್ದು ಸರಿಯಲ್ಲ. ಹೀಗಾಗಿ ನಿನ್ನೆ ನಡೆದ ಶಾಸಕಾಂಗ ಸಭೆಯಲ್ಲಿ ಅವರಿಗೆ ಎಚ್ಚರಿಕೆ ನೀಡಲಾಗಿದೆ.ಸಭಾಧ್ಯಕ್ಷರ ಕ್ಷಮೆ ಕೋರುವಂತೆ ಸೂಚಿಸಲಾಗಿದೆ ಎಂದರು.

ಪಕ್ಷದ ತೀರ್ಮಾನದ ಅನುಸಾರ ಶಾಸಕ ಪ್ರಭು ಚವಾಣ್ ಹೋಗಿ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರ ಮುಂದೆ ಕ್ಷಮೆ ಯಾಚಿಸಿದ್ದಾರೆ. ನನ್ನನ್ನು ಕ್ಷಮಿಸಿ ಎಂದು ಕೇಳಿದ್ದಾರೆ. ಆದರೆ ಇಷ್ಟಾದರೂ ಕಾಂಗ್ರೆಸ್ ಪಕ್ಷದವರು ಉದ್ದೇಶಪೂರ್ವಕವಾಗಿ ಧರಣಿ ನಡೆಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.

ಈ ಹಂತದಲ್ಲಿ ಆಡಳಿತ-ಪ್ರತಿಪಕ್ಷಗಳ ನಡುವೆ ತೀವ್ರ ಮಾತಿನ ಗದ್ದಲ ನಡೆಯಿತಲ್ಲದೇ ಪರಸ್ಪರರ ಆರೋಪ-ಪ್ರತ್ಯಾರೋಪಗಳ ನಡುವೆ ಯಾರ ಮಾತು ಯಾರಿಗೂ ಕೇಳದಂತಹ ಸ್ಥಿತಿ ಸೃಷ್ಟಿಯಾಯಿತು.

ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಮಧ್ಯೆ ಪ್ರವೇಶಿಸಿ, ಸದನ ಕಲಾಪ ನಡೆಯಲು ಅವಕಾಶ ಮಾಡಿಕೊಡಿ ಎಂದರೂ ಕಾಂಗ್ರೆಸ್ ಸದಸ್ಯರು ಧರಣಿಯಿಂದ ಹಿಂದೆ ಸರಿಯದೆ, ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು. ಶಾಸಕ ಪ್ರಭು ಚವಾಣ್ ಅವರನ್ನು ತಕ್ಷಣವೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ಪುನಃ ಈ ವಿಷಯಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಆಡಳಿತ-ಪ್ರತಿಪಕ್ಷಗಳ ನಡುವೆ ಭಾರೀ ವಾಗ್ಯುದ್ಧ ನಡೆಯಿತಲ್ಲದೇ, ಒಂದು ಹಂತದಲ್ಲಿ ಬಿಜೆಪಿಯ ಮಾಜಿ ಸಚಿವ ಸಿ.ಟಿ.ರವಿ ಹಾಗೂ ಕಾಂಗ್ರೆಸ್‌ನ ಉಮಾಶ್ರೀ ಮಧ್ಯೆ ತಾರಕಕ್ಕೇರಿದ ಕಚ್ಚಾಟ ನಡೆಯಿತು. ಈ ಹಂತದಲ್ಲಿ ಉಭಯ ಪಕ್ಷಗಳ ನಾಯಕರನ್ನು ಸಮಾಧಾನಗೊಳಿಸಲು ವಿಧಾನಸಭಾಧ್ಯಕ್ಷರು ಯತ್ನಿಸಿದರಾದರೂ ಯತ್ನ ಸಫಲವಾಗಲಿಲ್ಲ.
ಈ ಹಂತದಲ್ಲಿ ಸದನ ಕಲಾಪವನ್ನು ಸಭಾಧ್ಯಕ್ಷರು ಮುಂದೂಡಿ ತಮ್ಮ ಕೊಠಡಿಯಲ್ಲಿ ಸಂಧಾನ ಸಭೆ ನಡೆಸಿದರಾದರೂ ಆ ಪ್ರಯತ್ನ ಸಫಲವಾಗಲಿಲ್ಲ. ತದ ನಂತರ ಸದನ ಆರಂಭವಾದಾಗ ಕಾಂಗ್ರೆಸ್ ಸದಸ್ಯರು ತಮ್ಮ ಪಟ್ಟು ಮುಂದುವರಿಸಿದಾಗ ಬಿಜೆಪಿ ಸದಸ್ಯರು, ವಸತಿ ಸಚಿವ ಅಂಬರೀಷ್ ಹಾಗೂ ಶಾಸಕ ಎಸ್.ಎಸ್.ಮಲ್ಲಿಕಾರ್ಜುನ್ ನಿನ್ನೆ ಮೊಬೈಲ್‌ನಲ್ಲಿ ವಿಡಿಯೋ ವೀಕ್ಷಣೆ ಮಾಡಿದ್ದಾರೆ ಎಂದು ಕಾಂಗ್ರೆಸ್‌ಗೆ ತಿರುಗೇಟು ನೀಡಿದರು.

ನಮ್ಮ ಪಕ್ಷದ ಶಾಸಕರು ತಪ್ಪು ಮಾಡಿದ್ದಾರೆ ಎಂದಾದಾಗ ಸಭಾಧ್ಯಕ್ಷರ ಕ್ಷಮೆ ಕೋರಲು ಸೂಚಿಸಿದೆವು. ಆದರೂ ಕಾಂಗ್ರೆಸ್ ಪಕ್ಷ ಅವರ ವಿರುದ್ಧ ಕ್ರಮಕ್ಕೆ ಪಟ್ಟು ಹಿಡಿಯುತ್ತದೆ ಎಂದಾದರೆ ವಸತಿ ಸಚಿವ ಅಂಬರೀಷ್ ಹಾಗೂ ಶಾಸಕ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನೂ ಅಮಾನತು ಮಾಡಬೇಕು ಎಂದು ಒತ್ತಾಯಿಸಿ ಸಭಾಧ್ಯಕ್ಷರೆದುರಿನ ಬಾವಿಗೆ ಬಂದು ಧರಣಿ ಆರಂಭಿಸಿದರು.
ಪ್ರಭು ಚವಾಣ್ ಅವರಂತೆ ವಸತಿ ಸಚಿವ ಅಂಬರೀಷ್ ಹಾಗೂ ಶಾಸಕ ಮಲ್ಲಿಕಾರ್ಜುನ್ ಅವರೂ ವಿಡಿಯೋ ನೋಡಿದ್ದಾರೆ. ಹೀಗಾಗಿ ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಆಗ್ರಹಿಸಿದಾಗ ಮತ್ತೆ ಆಡಳಿತ-ಪ್ರತಿಪಕ್ಷಗಳ ನಡುವೆ ಭಾರೀ ಮಾತಿನ ಚಕಮಕಿ ನಡೆಯಿತು.
ಈ ಹಂತದಲ್ಲಿ ಮರಳಿ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಸದನವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಹರಸಾಹಸ ನಡೆಸಿದರಾದರೂ ಅದು ಸಫಲವಾಗಲಿಲ್ಲ. ಕಲಾಪವನ್ನು ಸ್ವಲ್ಪ ಕಾಲ ಮುಂದೂಡಿದರು. ಸಂಜೆ ಮತ್ತೆ ಸದನ ಸೇರಿದಾಗ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ಬಿಜೆಪಿ ಸದಸ್ಯರು ಅಂಬರೀಷ್ ಮತ್ತು ಮಲ್ಲಿಕಾರ್ಜುನ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಧರಣಿ ನಿರತರಾದರು. ವಿಧಾನಪರಿಷತ್ತಿನಲ್ಲಿ ಧರಣಿ ನಡೆಸಿದ ಕಾಂಗ್ರೆಸ್ ಸದಸ್ಯರು, ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆ ನಡೆಸಬೇಕಿರುವ ಸಂದರ್ಭದಲ್ಲಿ ಬಿಜೆಪಿ ಸದಸ್ಯ ಪ್ರಭು ಚವಾಣ್ ಅವರು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯ ಚಿತ್ರವನ್ನು ಮೊಬೈಲ್‌ನಲ್ಲಿ ವೀಕ್ಷಿಸಿದ್ದು ತಪ್ಪು. ತಕ್ಷಣವೇ ಅವರನ್ನು ಸದಸ್ಯತ್ವದಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.

ಈ ಹಂತದಲ್ಲಿ ಬಿಜೆಪಿ ಸದಸ್ಯರು, ಆಗಿರುವ ಲೋಪದ ಹಿನ್ನೆಲೆಯಲ್ಲಿ ಮೊಬೈಲ್ ಬಳಕೆಯನ್ನು ಯಾರೂ ಮಾಡದಂತೆ ಆಗ್ರಹಿಸಿದಾಗ ಸಭಾಪತಿ ಶಂಕರಮೂರ್ತಿ, ಇನ್ನು ಮುಂದೆ ಯಾರಾದರೂ ಸದನಕ್ಕೆ ಮೊಬೈಲ್ ಫೋನ್ ತಂದರೆ ಕಿತ್ತುಕೊಳ್ಳು ತ್ತೇನೆ. ಅದನ್ನು ವಾಪಸ್ ಕೊಡಬೇಕೋ? ಬೇಡವೋ? ಎಂಬುದನ್ನು ಆನಂತರ ನಿರ್ಧರಿಸುತ್ತೇನೆ ಎಂದರು.

ಆದರೆ ಇದನ್ನು ಒಪ್ಪದ ಮೋಟಮ್ಮ ಮತ್ತಿತರರು, ಶಾಸಕ ಪ್ರಭು ಚವಾಣ್ ವಿರುದ್ಧ ಕ್ರಮ ಜರುಗಲೇಬೇಕು. ಪ್ರಿಯಾಂಕಾ ಗಾಂಧಿಯ ಚಿತ್ರ ವೀಕ್ಷಿಸಲು ಇವರು ಸದನಕ್ಕೆ ಬರಬೇಕಿಲ್ಲ. ಆದರೂ ಇವರು ಆ ಕೆಲಸ ಮಾಡಿದ್ದಾರೆಂದರೆ ಇವರು ಸದನಕ್ಕೆ ಜನರ ಕೆಲಸ ಮಾಡಲು ಬರುತ್ತಿಲ್ಲ ಎಂದು ಕೆಂಡ ಕಾರಿದರು.

Write A Comment