ಹೊಸದಿಲ್ಲಿ, ಡಿ.11: ರಶ್ಯವು ಭಾರತದ ಪ್ರಮುಖ ರಕ್ಷಣಾ ಪಾಲುದಾರನಾಗಿ ಉಳಿದುಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಶ್ಯದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಭಾರತ ಭೇಟಿಯ ಸಂದರ್ಭದಲ್ಲಿ ಎರಡು ದೇಶಗಳು ಮಹತ್ವದ ಅಣು ಒಪ್ಪಂದವೂ ಸೇರಿದಂತೆ ಒಂದು ಡಜನ್ಗೂ ಹೆಚ್ಚು ಒಪ್ಪಂದಗಳಿಗೆ ಗುರುವಾರ ಸಹಿ ಹಾಕಿದವು. ತದನಂತರ ಮೋದಿ ಪತ್ರಿಕಾಗೋಷ್ಠಿಯೊಂದನ್ನು ಉದ್ದೇಶಿಸಿ ಮಾತನಾಡಿದರು. ಭಾರತದ ಪ್ರಧಾನಿಯ ಜೊತೆಗೆ ವಾರ್ಷಿಕ ಶೃಂಗಸಭೆಯ ಮಾತುಕತೆಗಳಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಪುತಿನ್ ದಿಲ್ಲಿಗೆ ಆಗಮಿಸಿದ್ದರು. 22 ಗಂಟೆಗಳ ಕಾಲ ಅವರು ಭಾರತದಲ್ಲಿ ಇದ್ದರು. 2000ನೆ ಇಸವಿಯಿಂದೀಚೆಗೆ ಮಾಸ್ಕೊ ಮತ್ತು ಹೊಸದಿಲ್ಲಿಯಲ್ಲಿ ವಾರ್ಷಿಕ ಶೃಂಗ ಮಾತುಕತೆಗಳು ಪರ್ಯಾಯವಾಗಿ ನಡೆಯುತ್ತಿವೆ.
ಪುಟಿನ್ ಓರ್ವ ಮಹಾನ್ ನಾಯಕ. ಭಾರತದ ಭದ್ರತೆ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳ ವಿಚಾರಗಳಲ್ಲಿ ಅವರು ಆಧಾರಸ್ತಂಭವೆನಿಸಿಕೊಂಡಿದ್ದಾರೆ ಎಂದು ಮೋದಿ ಹೇಳಿದರು.
‘ಅವರು ದೇಶವೊಂದರ ಮಹಾನ್ ನಾಯಕರು. ರಷ್ಯಾದೊಂದಿಗೆ ನಮಗೆ ಅಭೂತಪೂರ್ವವಾದ ಪರಸ್ಪರ ಒಮ್ಮತ, ವಿಶ್ವಾಸ ಮತ್ತು ಸೌಹಾರ್ದ ಸಂಬಂಧವಿದೆ’ ಎಂದು ಮೋದಿ ಹೇಳಿದರು.
‘ಎರಡು ದೇಶಗಳ ನಡುವೆ ನಡೆದ ಈ ಶೃಂಗ ಸಭೆಯಲ್ಲಿ ಕೈಗೊಳ್ಳಲಾದ ನಿರ್ಧಾರಗಳಿಂದ ನಮಗೆ ಸಂತೃಪ್ತಿ ಉಂಟಾಗಿದೆ’ ಎಂದು ಮೋದಿ ತಿಳಿಸಿದರು.
ಅಣುವಿದ್ಯುತ್ ಸ್ಥಾವರಕ್ಕೆ ಸ್ಥಳ: ರಷ್ಯನ್ ವಿನ್ಯಾಸದ ಅಣುವಿದ್ಯುತ್ ಸ್ಥಾವರಕ್ಕಾಗಿ ಎರಡನೆ ಸ್ಥಳವೊಂದನ್ನು ಗುರುತಿಸಲು ಭಾರತ ಒಪ್ಪಿಕೊಂಡಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಸೈಯದ್ ಅಕ್ಬರುದ್ದೀನ್ ಗುರುವಾರ ತಿಳಿಸಿದ್ದಾರೆ.
ಅಣುಇಂಧನ ಕ್ಷೇತ್ರದಲ್ಲಿ ಸಹಕಾರವನ್ನು ಬಲಪಡಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ ಎಂದು ಅವರು ಟ್ವೀಟ್ ಮಾಡಿದ್ದಾರೆ.
‘ಅಣುಇಂಧನದ ಶಾಂತಿಯುತ ಬಳಕೆಗೆ ಪರಸ್ಪರ ಸಹಕಾರವನ್ನು ಬಲಪಡಿಸಲು ಶೃಂಗಸಭೆಯಲ್ಲಿ ಒಪ್ಪಿಕೊಳ್ಳಲಾಗಿದೆ. ಕೂಡಂಕುಲಂ ಘಟಕದ ನಂತರ ರಷ್ಯನ್ ವಿನ್ಯಾಸದ ಎರಡನೆ ಘಟಕದ ಸ್ಥಾಪನೆಗಾಗಿ ಆದಷ್ಟು ಬೇಗ ಸ್ಥಳ ಗುರುತಿಸಲು ಭಾರತ ಒಪ್ಪಿಕೊಂಡಿದೆ’ ಎಂದು ಅವರು ತಿಳಿಸಿದ್ದಾರೆ.