ಕರ್ನಾಟಕ

ಭಟ್ಕಳದಲ್ಲಿ ಪಾಕ್ ಪ್ರಜೆಗಳು ತಪ್ಪಿಸಿಕೊಂಡಿಲ್ಲ: ಸಚಿವ ಜಾರ್ಜ್

Pinterest LinkedIn Tumblr

K J George_0_0ಬೆಳಗಾವಿ(ಸುವರ್ಣ ವಿಧಾನಸೌಧ), ಡಿ.11: ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕಿನಲ್ಲಿ ಪ್ರವಾಸಿ ವೀಸಾದಡಿ ಬಂದಂತಹ ಯಾವ ಪಾಕಿಸ್ತಾನಿ ಪ್ರಜೆಗಳು ತಪ್ಪಿಸಿಕೊಂಡಿಲ್ಲ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.

ವಿಧಾನಪರಿಷತ್ ಸದಸ್ಯ ಘೋಟ್ನೆಕರ್ ಶ್ರೀಕಾಂತ ಲಕ್ಷ್ಮಣ ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಅವರು, ಪ್ರವಾಸಿ ವೀಸಾದಡಿ ಬಂದಂತಹ ಯಾವ ಪಾಕಿಸ್ತಾನಿ ಪ್ರಜೆಗಳೂ ತಪ್ಪಿಸಿಕೊಂಡಿಲ್ಲ. ಮೂರು ಮಂದಿ ಪಾಕಿಸ್ತಾನಿ ಪ್ರಜೆಗಳು ಪ್ರವಾಸಿ ವೀಸಾದಡಿ ಭಾರತಕ್ಕೆ ಬಂದು ಭಾರತೀಯರನ್ನು ಮದುವೆಯಾಗಿದ್ದಾರೆ. ಈ ಪೈಕಿ ಇಬ್ಬರು ಅನುಮತಿಯಿಲ್ಲದೆ ಮಂಗಳೂರು ಮತ್ತು ದಿಲ್ಲಿಗೆ ಹೋಗಿ ಬಂದಿದ್ದಾರೆ. ಈ ಸಂಬಂಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದರು.

ಈ ಪ್ರಕರಣಗಳಲ್ಲಿ ಮಾಹಿತಿ ಸಂಗ್ರಹಿಸಲು ವಿಫಲವಾಗಿದ್ದರಿಂದ ಮುಖ್ಯ ಪೊಲೀಸ್ ಕಾನ್ಸ್‌ಟೇಬಲ್ ರಾಮಚಂದ್ರ ಎಸ್.ನಾಯ್ಕ ಅವರನ್ನು ಅ.16ರಂದು ಅಮಾನತುಪಡಿಸಲಾಗಿದೆ. ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 4 ದರೋಡೆ ಪ್ರಕರಣಗಳಲ್ಲಿ ಎರಡು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, ಉಳಿದ ಎರಡು ಪ್ರಕರಣಗಳನ್ನು ಪತ್ತೆ ಹಚ್ಚುವ ಪ್ರಯತ್ನ ಜಾರಿಯಲ್ಲಿದೆ ಎಂದು ಅವರು ಹೇಳಿದ್ದಾರೆ.

ಅದೇ ರೀತಿ ಮನುಷ್ಯರು ಕಾಣೆಯಾದ 169 ಪ್ರಕರಣಗಳಲ್ಲಿ 126 ಪ್ರಕರಣಗಳನ್ನು ಹಾಗೂ ಅಪಹರಣವಾದ 31 ಪ್ರಕರಣಗಳಲ್ಲಿ 24 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, ಉಳಿದ ಪ್ರಕರಣಗಳನ್ನು ಪತ್ತೆ ಹಚ್ಚುವ ಕಾರ್ಯ ಮುಂದುವರಿದಿದೆ ಎಂದು ಜಾರ್ಜ್ ಮಾಹಿತಿ ನೀಡಿದರು.

Write A Comment