ಕರ್ನಾಟಕ

ರಂಗನತಿಟ್ಟಿಗೆ ‘ಅತಿಥಿ’ಗಳ ವಲಸೆ: ವಂಶಾಭಿವೃದ್ಧಿಗಾಗಿ ಬರುತ್ತಿರುವ ವಿವಿಧ ಜಾತಿಯ ಪಕ್ಷಿಗಳು

Pinterest LinkedIn Tumblr

ranga-fiಶ್ರೀರಂಗಪಟ್ಟಣ: ಮೈಕೊರೆವ ಚಳಿ ಶುರುವಾ­ಗುತ್ತಿ­ದ್ದಂತೆ ಇಲ್ಲಿಗೆ ಸಮೀಪದ ಪ್ರಸಿದ್ಧ ರಂಗನತಿಟ್ಟು ಪಕ್ಷಿಧಾಮಕ್ಕೆ ವಿವಿಧ ಜಾತಿಯ ಪಕ್ಷಿಗಳು ವಂಶಾಭಿವೃದ್ಧಿಗಾಗಿ ಬರಲಾರಂಭಿಸಿವೆ.

ಮೂರು ದಿನಗಳಿಂದ ಈಚೆಗೆ ವಿವಿಧ ಜಾತಿಯ ಪಕ್ಷಿ ಸಂಕುಲ ಇಲ್ಲಿನ ಕಾವೇರಿ ನದಿಯ ನಡುಗಡ್ಡೆಗೆ ಬಂದಿಳಿಯುತ್ತಿದೆ. ಪ್ರಮುಖ ಪಕ್ಷಿಗಳಾದ ತೆರೆದ ಕೊಕ್ಕಿನ ಬಕ (ಓಪನ್‌ ಬಿಲ್‌ ಸ್ಟೋರ್ಕ್‌), ಚಮಚ ಕೊಕ್ಕಿನ ಬಕ (ಸ್ಪೂನ್‌ಬಿಲ್‌ ಸ್ಟೋರ್ಕ್‌), ಹೆಜ್ಜಾರ್ಲೆ (ಪೆಲಿಕಾನ್‌) ಪಕ್ಷಿಗಳು ಇಲ್ಲಿಗೆ ಬರುತ್ತಿವೆ. ಸುಮಾರು 80 ಜತೆ ಓಪನ್‌ಬಿಲ್‌, 50 ಜತೆ ಸ್ಪೂನ್‌­ಬಿಲ್‌, 75 ಜತೆಗೂ ಹೆಚ್ಚು ಪೆಲಿಕಾನ್‌ ಪಕ್ಷಿಗಳು ಬಂದಿವೆ.

ಮಂಡಗದ್ದೆ, ಖರಗ್‌ಪುರ್‌, ಕೊಕ್ಕರೆ ಬೆಳ್ಳೂರು ಇತರ ಕಡೆಗಳಿಂದ ಪಕ್ಷಿಗಳು ಬರುತ್ತಿವೆ. ಪೆಲಿಕಾನ್‌ ಪಕ್ಷಿಗಳು ಎತ್ತರದ ಮುಳ್ಳಿನ ಮರಗಳ ಮೇಲೆ ಬೀಡು­ಬಿಟ್ಟಿದ್ದು, ಮಿಲನ ಕ್ರಿಯೆಯಲ್ಲಿ ತೊಡ­ಗಿವೆ. ಕೆಲವು ಗೂಡು ಕಟ್ಟುವ ತವಕ­ದಲ್ಲಿವೆ. ಓಪನ್‌ಬಿಲ್‌ ಹಾಗೂ ಸ್ಪೂನ್‌­ಬಿಲ್‌ಗಳು ಸಂಸಾರ ಹೂಡಲು ತಾವು ಹುಡುಕುತ್ತಿವೆ. ಫೆಬ್ರುವರಿ ಅಂತ್ಯಕ್ಕೆ ಈ ಹಕ್ಕಿಗಳ ಬಾಣಂತನ ಮುಗಿಯಲಿದೆ.

‘ಮೂರ್ನಾಲ್ಕು ದಿನಗಳಿಂದ ರಂಗನತಿ­ಟ್ಟಿಗೆ ಪಕ್ಷಿಗಳು ಬರಲಾರಂಭಿಸಿದ್ದು, ಡಿಸೆಂಬರ್‌ ಅಂತ್ಯಕ್ಕೆ ಸಹಸ್ರಾರು ಪಕ್ಷಿಗಳು ಇಲ್ಲಿಗೆ ಬರಲಿವೆ. 10 ಸಾವಿರಕ್ಕೂ ಹೆಚ್ಚು ಪಕ್ಷಿ ಸಂಕುಲ ಇಲ್ಲಿ ಸೇರಲಿದೆ’ ಎಂದು ಪಕ್ಷಿಧಾಮದ ಉಪ ವಲಯ ಅರಣ್ಯಾಧಿ­ಕಾರಿ ಕೆಂಪ ನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಕ್ಷಿಧಾಮದಲ್ಲಿ ಸದ್ಯ ವೈಟ್‌ ಐಬಿಸ್‌, ಕಾರ್ಮೊರೆಂಟ್‌, ಸ್ಟೋನ್‌ ಫ್ಲವರ್‌, ನೈಟ್‌ ಹೆರಾನ್‌, ಪರ್ಪಲ್‌ ಹೆರಾನ್‌, ಸ್ನೇಕ್‌ ಬರ್ಡ್‌ ಇತರ ಜಾತಿಯ ಪಕ್ಷಿಗಳು ಕಾಣಸಿಗುತ್ತವೆ. ಜನಪ್ರಿಯ ಪೇಂಟೆಡ್‌ ಸ್ಟೋರ್ಕ್‌ (ಬಣ್ಣದ ಕೊಕ್ಕಿನ ಬಕ) ತಿಂಗಳಾಂತ್ಯಕ್ಕೆ ತಂಡೋಪ ತಂಡವಾಗಿ ಇಲ್ಲಿಗೆ ಬರಲಿವೆ. ಇಲ್ಲಿಗೆ ಸಮೀಪದ ಗೆಂಡೆಹೊಸಹಳ್ಳಿ ಬಳಿಯ ಬಂಡಿಸಿದ್ದೇಗೌಡ ಪಕ್ಷಿಧಾಮ­ದಲ್ಲಿ ಕೂಡ ಬಗೆ ಬಗೆಯ ಪಕ್ಷಿಗಳು ಕಾಣಸಿಗುತ್ತವೆ’ ಎಂದು ಅವರು ಹೇಳುತ್ತಾರೆ.
– ಗಣಂಗೂರು ನಂಜೇಗೌಡ

Write A Comment