ಪ್ರಮುಖ ವರದಿಗಳು

ಫಿಲಿಪ್ ಹ್ಯೂಸ್‌ಗೆ ಭಾವಪೂರ್ಣ ವಿದಾಯ: ಮ್ಯಾಕ್ಸ್‌ವಿಲ್ಲೆಯಲ್ಲಿ ಅಂತ್ಯಕ್ರಿಯೆ

Pinterest LinkedIn Tumblr

clark-1

ಮ್ಯಾಕ್‌ವಿಲ್ಲೆ (ಆಸ್ಟ್ರೇಲಿಯ), ಡಿ.3: ಕಳೆದ ವಾರ ಬೌನ್ಸರ್ ಎಸೆತದಲ್ಲಿ ದಾರುಣ ಸಾವನ್ನಪ್ಪಿದ್ದ ಆಸ್ಟ್ರೇಲಿಯದ ಉದಯೋನ್ಮುಖ ಕ್ರಿಕೆಟಿಗ ಫಿಲಿಪ್ ಹ್ಯೂಸ್‌ಗೆ ಬುಧವಾರ ತವರು ಪಟ್ಟಣ ಮ್ಯಾಕ್ಸ್‌ವಿಲ್ಲೆಯಲ್ಲಿ ಪ್ರಾರ್ಥನೆಯೊಂದಿಗೆ ಸಾವಿರಾರು ಜನರು ಭಾವನಾತ್ಮಕ ವಿದಾಯ ಕೋರಿದರು.

ಹ್ಯೂಸ್ ಅವರು ನಿಧನರಾಗಿ ಆರು ದಿನಗಳ ಬಳಿಕ ಮ್ಯಾಕ್ಸ್‌ವಿಲ್ಲೆ ಹೈಸ್ಕೂಲ್‌ನಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಹ್ಯೂಸ್ ಕುಟುಂಬಿಕರು, ಸ್ನೇಹಿತರು ಹಾಗೂ ಕ್ರಿಕೆಟ್ ದಿಗ್ಗಜರು ಸಹಿತ ಜನ ಸಾಗರವೇ ಹರಿದು ಬಂದು ಅಂತಿಮ ನಮನ ಸಲ್ಲಿಸಿದರು. ಯೂತ್ ಗ್ರೂಪ್ ‘‘ಫೋರ್ ಎವೆರ್ ಯಂಗ್’’ ಗೀತೆಯನ್ನು ಹಾಡುವ ಮೂಲಕ ಅಂತ್ಯಕ್ರಿಯೆ ಆರಂಭಗೊಂಡು ಎಲ್ಟನ್ ಜಾನ್ಸನ್‌ರ ‘ಡೋಂಟ್ ಲೆಟ್ ದಿ ಸನ್ ಗೋ ಡೌನ್ ಆನ್ ಮಿ’ ಹಾಡಿನೊಂದಿಗೆ ಕೊನೆಗೊಂಡಿತು.

ಮ್ಯಾಕ್ಸ್‌ವಿಲ್ಲೆಯ ಅಂಗಡಿ- ಮುಂಗಟ್ಟುಗಳನ್ನು ಮುಚ್ಚಲಾಗಿದ್ದು, ಶಾಲಾ ಮಕ್ಕಳು ತರಗತಿಯನ್ನು ತೊರೆದು ತಮ್ಮ ನೆಚ್ಚಿನ ಕ್ರಿಕೆಟಿಗನ ಅಂತ್ಯಕ್ರಿಯೆಯಲ್ಲಿ ಭಾಗಿಯಾದರು. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಟ್ವಿಟ್ಟರ್‌ನ ಮೂಲಕ ಆಸ್ಟ್ರೇಲಿಯದ ಯುವ ಬ್ಯಾಟ್ಸ್‌ಮನ್‌ಗೆ ಶ್ರದ್ಧಾಂಜಲಿ ಅರ್ಪಿಸಿದರು. ಹ್ಯೂಸ್ ಅಂತ್ಯಕ್ರಿಯೆಯಲ್ಲಿ ಭಾರತದ ಹಂಗಾಮಿ ನಾಯಕ ವಿರಾಟ್ ಕೊಹ್ಲಿ, ತಂಡದ ನಿರ್ದೇಶಕ ರವಿ ಶಾಸ್ತ್ರಿ, ಕೋಚ್ ಡಂಕನ್ ಫ್ಲೆಚರ್ ಹಾಗೂ ಟೀಮ್ ಮ್ಯಾನೇಜರ್ ಅರ್ಷಾದ್ ಅಯೂಬ್ ಭಾಗವಹಿಸಿದ್ದರು.

ಆಸ್ಟ್ರೇಲಿಯದ ನಾಯಕ ಮೈಕಲ್ ಕ್ಲಾರ್ಕ್ ಹಾಗೂ ಟೆಸ್ಟ್ ತಂಡದ ಸಹ ಆಟಗಾರರು, ವಿಶ್ವದ ಮಾಜಿ ಹಾಗೂ ಹಾಲಿ ಆಟಗಾರರು, ಹ್ಯೂಸ್ ಸ್ನೇಹಿತರು, ಸಂಬಂಧಿಕರು, ಆಸ್ಟ್ರೇಲಿಯದ ಪ್ರಧಾನ ಮಂತ್ರಿ ಟೊನಿ ಅಬಾಟ್, ವಿರೋಧ ಪಕ್ಷದ ನಾಯಕ ಬಿಲ್ ಶಾರ್ಟೆನ್, ಮಾಜಿ ಕ್ರಿಕೆಟಿಗ ಸರ್ ರಿಚರ್ಡ್ ಹ್ಯಾಡ್ಲಿ ಸಹಿತ ಸಾವಿರಾರು ಮಂದಿ ಹ್ಯೂಸ್ ಅಂತಿಮ ದರ್ಶನ ಪಡೆದರು. ಹ್ಯೂಸ್‌ಗೆ ಮಾರಣಾಂತಿಕ ಬೌನ್ಸರ್ ಎಸೆದ ಸಿಯಾನ್ ಅಬೊಟ್ ಅಂತ್ಯಕ್ರಿಯೆಯಲ್ಲಿ ಹಾಜರಾಗಿ ಹ್ಯೂಸ್ ಕುಟುಂಬಕ್ಕೆ ಸಾಂತ್ವ್ವನ ಹೇಳಿದರು.

ಹ್ಯೂಸ್ ಅಂತ್ಯಕ್ರಿಯೆಯನ್ನು ಅಂತಾರಾಷ್ಟ್ರೀಯ ಟೆಲಿವಿಷನ್ ನ್ಯೂಸ್ ನೆಟ್‌ವರ್ಕ್‌ಗಳು ನೇರ ಪ್ರಸಾರ ಮಾಡಿದ್ದು, ಹ್ಯೂಸ್ ಕೊನೆಯ ಬಾರಿ ಆಡಿದ್ದ ಸಿಡ್ನಿ ಕ್ರಿಕೆಟ್ ಮೈದಾನ ಸೇರಿದಂತೆ ದೇಶದ ಪ್ರಮುಖ ಸ್ಟೇಡಿಯಂಗಳ ದೈತ್ಯ ಪರದೆಯಲ್ಲಿ ಪ್ರಸಾರ ಮಾಡಲಾಗಿತ್ತು. ಮಾಜಿ ಸಹ ಆಟಗಾರ ಹಾಗೂ ಸ್ನೇಹಿತ ಹ್ಯೂಸ್‌ಗೆ ಸಾರ್ವಜನಿಕವಾಗಿ ಶ್ರದ್ಧಾಂಜಲಿ ಅರ್ಪಿಸಿದ ಆಸ್ಟ್ರೇಲಿಯದ ನಾಯಕ ಮೈಕಲ್ ಕ್ಲಾರ್ಕ್ ದುಃಖ ತಡೆಯಲಾರದೆ ಕಣ್ಣೀರಿಟ್ಟರು. ಕಳೆದ ವಾರ ಹ್ಯೂಸ್‌ರ 26ನೆ ಹುಟ್ಟುಹಬ್ಬದ ದಿನ ಹ್ಯೂಸ್‌ರನ್ನು ನೆನಪಿಸಿಕೊಂಡು ಕ್ಲಾರ್ಕ್ ಕಣ್ಣೀರಿಟ್ಟಿದ್ದರು.

‘‘ಫಿಲಿಪ್ ಸ್ಫೂರ್ತಿ ಸದಾ ಕಾಲ ನಮ್ಮ ಪಂದ್ಯದ ಭಾಗವಾಗಿರುತ್ತದೆ. ಅದು ಕ್ರೀಡೆಯ ರಕ್ಷಕವಾಗಿರುತ್ತದೆ. ನಾವು ಅದನ್ನು ಪಾಲಿಸಲೇಬೇಕಾಗಿದೆ. ನನ್ನ ಕಿರಿಯ ಸಹೋದರನ ಆತ್ಮಕ್ಕೆ ಶಾಂತಿ ಸಿಗಲಿ’’ ಎಂದು ಶೋಕ ಸಂದೇಶದಲ್ಲಿ ಕ್ಲಾರ್ಕ್ ಹೇಳಿದ್ದಾರೆ. ಕ್ಲಾರ್ಕ್, ಸಹ ಆಟಗಾರರಾದ ಆ್ಯರನ್ ಫಿಂಚ್ ಹಾಗೂ ಟಾಮ್ ಕೂಪರ್, ಹ್ಯೂಸ್ ತಂದೆ ಹಾಗೂ ಸಹೋದರರು ಹ್ಯೂಸ್ ಶವಪೆಟ್ಟಿಗೆ ಸಾಗಿಸಲು ನೆರವಾದರು.

ನ.25 ರಂದು ಸಿಡ್ನಿಯಲ್ಲಿ ನ್ಯೂ ಸೌತ್ ವೇಲ್ಸ್ ಹಾಗೂ ದಕ್ಷಿಣ ಆಸ್ಟ್ರೇಲಿಯ ತಂಡಗಳ ನಡುವಿನ ಶೆಫೀಲ್ಡ್ ಶೀಲ್ಡ್ ಟೂರ್ನಿಯ ವೇಳೆ ಸೌತ್ ವೇಲ್ಸ್ ತಂಡದ ವೇಗದ ಬೌಲರ್ ಸಿಯಾನ್ ಅಬಾಟ್ ಎಸೆದ ಬೌನ್ಸರ್ ಫಿಲಿಪ್ ಹ್ಯೂಸ್ ಕುತ್ತಿಗೆಗೆ ತಾಗಿತ್ತು. ಮೈದಾನದಲ್ಲೆ ಕುಸಿದು ಬಿದ್ದ ಹ್ಯೂಸ್‌ರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ನ.27 ರಂದು ಅಸು ನೀಗಿದ್ದರು.

63 ಬ್ಯಾಟ್‌ಗಳ ಪ್ರದರ್ಶನ
ಹ್ಯೂಸ್ ಕಳೆದ ಮಂಗಳವಾರ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಅಬಾಟ್ ಬೌನ್ಸರ್ ಎಸೆತಕ್ಕೆ ಗಂಭೀರ ಗಾಯವಾಗುವ ಮೊದಲು ಅಜೇಯ 63 ರನ್ ಗಳಿಸಿದ್ದರು. ಇದರ ಸವಿ ನೆನಪಿಗಾಗಿ ಸಿಡ್ನಿ ಸ್ಟೇಡಿಯಂನೊಳಗೆ ಬುಧವಾರ 63 ಬ್ಯಾಟ್‌ಗಳನ್ನು ಇಟ್ಟು ಹ್ಯೂಸ್‌ಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಕಳೆದ ಮಂಗಳವಾರ ಹ್ಯೂಸ್ ಬೌನ್ಸರ್ ಎಸೆತಕ್ಕೆ ಕುಸಿದು ಬಿದ್ದ ಸ್ಥಳದಲ್ಲಿ ಹ್ಯೂಸ್‌ರ ಭಾವಚಿತ್ರವನ್ನು ಇಟ್ಟು ಹೂಗುಚ್ಚ ಹಾಗೂ ಕ್ರಿಕೆಟ್ ಸಲಕರಣೆಗಳನ್ನು ಇಡಲಾಗಿದೆ. ಹ್ಯೂಸ್ ಕೊನೆಯ ಪಂದ್ಯವಾಡಿದ್ದ ಪಿಚನ್ನು ಈ ವರ್ಷ ಮತ್ತೊಮ್ಮೆ ಬಳಸದೇ ಇರಲು ನಿರ್ಧರಿಸಲಾಗಿದೆ. ವಿಶ್ವದೆಲ್ಲೆಡೆಯ ಕ್ರಿಕೆಟ್ ಅಭಿಮಾನಿಗಳು ಮನೆಯ ಹೊರಗೆ, ಕ್ರೀಡಾ ಮೈದಾನಗಳಲ್ಲಿ ಬ್ಯಾಟ್‌ಗೆ ಶ್ರದ್ದಾಂಜಲಿ ಅರ್ಪಿಸುವ ಮೂಲಕ ಹ್ಯೂಸ್‌ಗೆ ಅಂತಿಮ ನಮನ ಸಲ್ಲಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು. ಹ್ಯೂಸ್ ಬಳಸುತ್ತಿದ್ದ ಬ್ಯಾಟನ್ನು ಅಂತ್ಯಕ್ರಿಯೆಯ ವೇಳೆ ಶವಪೆಟ್ಟಿಗೆಯ ಎದುರು ನಿಲ್ಲಿಸಲಾಗಿತ್ತು. ಕಳೆದ ವಾರ ಮ್ಯೂನಿಕ್‌ನಲ್ಲಿ ಹ್ಯೂಸ್ ಪಂದ್ಯ ಆಡಿದ್ದಾಗ ಎಲ್ಟನ್ ಜಾನ್ ಸಮರ್ಪಿಸಿದ ಗೀತೆಯನ್ನು ಹ್ಯೂಸ್ ಬ್ಯಾಟ್‌ನಲ್ಲಿ ಬರೆಯಲಾಗಿತ್ತು.

Write A Comment