ಕರ್ನಾಟಕ

‘ಅಮ್ಮ ಐ ಲವ್ ಯು’ ಡೆತ್‌ನೋಟ್‌ನಲ್ಲಿ ಬಾಲಕಿ ಹೇಳಿಕೆ: ಶಾಲೆಗೆ ಹೋಗಲಿಲ್ಲ ಎಂಬ ಕಾರಣಕ್ಕಾಗಿ ಬೈದಿದ್ದ ಪೋಷಕರು, ಬೆಂಕಿ ಹಚ್ಚಿಕೊಂಡು ಬಾಲಕಿ ಆತ್ಮಹತ್ಯೆ

Pinterest LinkedIn Tumblr

suicide_note

ಬೆಂಗಳೂರು: 4ನೇ ತರಗತಿಯ 10 ವರ್ಷದ ಬಾಲಕಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಆತ್ಮಹತ್ಯೆಗೂ ಮುನ್ನ ಪೋಷಕರಿಗೆ ಪತ್ರವೊಂದನ್ನು ಬರೆದಿದ್ದಾಳೆ.

ಬೆಂಗಳೂರಿನ ಯಲಂಹಕದ ನ್ಯೂಟೌನ್ ಪ್ರದೇಶದ ಮನೆಯೊಂದರಲ್ಲಿ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಬಾಲಕಿಯ ಹೆಸರು ಮೊನಿಷಾ ಎಂದು ತಿಳಿದುಬಂದಿದೆ. ಬಾಲಕಿ ಮೊನಿಷಾ ಸನ್‌ಶೈನ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಳೆದ ಒಂದು ವಾರದಿಂದ ಶಾಲೆಗೆ ಹೋಗಿರಲಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ ಪೋಷಕರು ಮೊನಿಷಾಳಿಗೆ ಬೈದಿದ್ದರು. ಇದರಿಂದ ಮನನೊಂದ ಬಾಲಕಿ ಮೊನಿಷಾ ಮನೆಯಲ್ಲಿ ಯಾರೂ ಇಲ್ಲದ ಸಮಯವನ್ನು ನೋಡಿಕೊಂಡು ಸೋಮವಾರ ರಾತ್ರಿ ಬೆಂಕಿ ಹಚ್ಚಿಕೊಂಡಿದ್ದಾಳೆ.

ಸೋಮವಾರ ತಡರಾತ್ರಿಯಲ್ಲಿಯೇ ಬಾಲಕಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೇ ಇಂದು ಬಾಲಕಿ ಮೊನಿಷಾ ಮೃತಪಟ್ಟಿದ್ದಾಳೆ. ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್ ಒಂದನ್ನು ಬರೆದಿರುವ ಬಾಲಕಿ ಮೊನಿಷಾ, ಪತ್ರದಲ್ಲಿ ‘ಅಮ್ಮ ನಾನು ನಿನ್ನ ಹತ್ತಿರ ಸುಳ್ಳು ಹೇಳಿದ್ದೇನೆ. ನಾನು ಒಂದು ವಾರದಿಂದ ಶಾಲೆಗೆ ಹೋಗಿರಲಿಲ್ಲ. ನನ್ನು ಕ್ಷಮಿಸು, ನಿನ್ನ ಬಿಟ್ಟು ಹೋಗುತ್ತಿದ್ದೇನೆ. ಆದರೆ ನಾನು ಸತ್ತರೂ ನಿನ್ನ ಜೊತೆಗೇ ಇರುತ್ತೇನೆ. ಐ ಲವ್ ಯು ಅಮ್ಮ’ ಎಂದು ಬಾಲಕಿ ಬರೆದಿದ್ದಾಳೆ.

ಬಾಲಕಿ ಸಾವಿನಿಂದಾಗಿ ಪೋಷಕರು ಆಘಾತಕ್ಕೊಳಗಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಯಲಹಂಕ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಸ್ತುತ ಬಾಲಕಿ ಶವವನ್ನು ಮರಣೋತ್ತರ ಪರೀಕ್ಷೆ ಕಳುಹಿಸಲಾಗಿದೆ. ಈ ಬಗ್ಗೆ ಮಾತನಾಡಿರುವ ಹೆಚ್ಚುವರಿ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಅಲೋಕ್ ಕುಮಾರ್ ಅವರು, ಪತ್ರದಲ್ಲಿ ಬಾಲಕಿ ಯಾರನ್ನೂ ದೂಷಿಸಿಲ್ಲ. ಶಾಲೆಯ ಕುರಿತಾಗಲಿ ಅಥವಾ ಪೋಷಕರ ಕುರಿತಾಗಲಿ ಬಾಲಕಿ ಏನನ್ನೂ ಬರೆದಿಲ್ಲ. ಆದರೂ ಪ್ರಕರಣದ ಕುರಿತು ಕೂಲಂಕುಷ ತನಿಖೆ ನಡೆಸುವುದಾಗಿ ಹೇಳಿದರು.

ಒಟ್ಟಾರೆ ಪೋಷಕರು ಬೈದರು ಎಂದ ಮಾತ್ರಕ್ಕೇ ಅಮೂಲ್ಯ ಜೀವ ಕಳೆದುಕೊಂಡ ಬಾಲಕಿ ಮೊನಿಷಾ ಪ್ರಕರಣ ನಿಜಕ್ಕೂ ವಿಷಾಧನೀಯ.

Write A Comment